×
Ad

ಕೃಷಿ ಕಾಯ್ದೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ವಕೀಲರ ಪ್ರತಿಭಟನೆ

Update: 2021-02-12 22:53 IST

ಬೆಂಗಳೂರು, ಫೆ.12: ಕೇಂದ್ರ ಬಿಜೆಪಿ ಸರಕಾರ ಬಂಡವಾಳಶಾಹಿಗಳ ಪರವಾಗಿ ರೈತ ವಿರೋಧಿ ಕಾಯ್ದೆಗಳನ್ನು ತಂದು ದೇಶದ ಅನ್ನದಾತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಸಮಾನ ಮನಸ್ಕ ವಕೀಲರ ವೇದಿಕೆ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಸಿಟಿ ಸಿವಿಲ್ ಕೋರ್ಟ್‍ನಿಂದ ಹೈಕೋರ್ಟ್ ವರೆಗೆ ಜಾಥಾ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಡ್ವಕೇಟ್ ಜನರಲ್, ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಕೇಂದ್ರ ಬಿಜೆಪಿ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಉದ್ಯಮಿಗಳಿಗೆ ಲಾಭವಾಗುತ್ತದೆಯೇ ವಿನಃ ರೈತರಿಗಲ್ಲ. ಈ ಕಾಯ್ದೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು. ಹೊಸದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಇಂದು ಜಾಥಾ ನಡೆಸಿದ್ದೇವೆ. ಜೊತೆಗೆ ಹೈಕೋರ್ಟ್ ಬಳಿ ಮಾನವ ಸರಪಳಿ ನಿರ್ಮಿಸಿದ್ದೇವೆ ಎಂದು ಹೇಳಿದರು.

ಹಿರಿಯ ವಕೀಲ ಎಸ್.ಬಾಲನ್ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಗಳು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಕಾನೂನು ವಿರೋಧಿಯಾಗಿದೆ ಎಂದು ಕಿಡಿಕಾರಿದರು.

ಈ ಕಾಯ್ದೆಗಳು ಜಾರಿಯಾದರೆ ರೈತರು ಕೋರ್ಟ್‍ಗೆ ಹೋಗುವಂತಿಲ್ಲ. ಕೇಂದ್ರ ಸರಕಾರ ಈಗಾಗಲೇ ನ್ಯಾಯಾಲಯಗಳ ಶಕ್ತಿಯನ್ನು ಕಿತ್ತುಕೊಂಡಿವೆ ಎಂದು ಹೇಳಿದರು.  

ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ರೈತರು ಚಳಿ ಗಾಳಿ ಎನ್ನದೇ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಈ ಸರಕಾರ ರೈತ ವಿರೋಧಿಯಾಗಿದೆ ಎಂದು ಹೇಳಿದರು. ವಕೀಲರಾದ ಸೂರ್ಯ ಮುಕುಂದರಾಜ್, ಸತ್ಯಶ್ರೀ ಸೇರಿ ಮತ್ತಿತರ ವಕೀಲರು ಜಾಥಾದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News