ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಶ್ರೀಶಾಂತ್ ಕಡೆಗಣನೆ

Update: 2021-02-12 18:56 GMT

ಮುಂಬೈ,: ಮುಂಬರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಎಂಟು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿಗಳು ವೇಗದ ಬೌಲರ್ ಶ್ರೀಶಾಂತ್‌ರನ್ನು ಅಂತಿಮ ಪಟ್ಟಿಯಲ್ಲಿ ಸ್ಥಾನ ನೀಡದೇ ಕಡೆಗಣಿಸಿವೆ.

7ವರ್ಷಗಳ ನಿಷೇಧದ ಬಳಿಕ ಸಕ್ರಿಯ ಕ್ರಿಕೆಟಿಗೆ ವಾಪಸಾಗಿರುವ ಶ್ರೀಶಾಂತ್ ಐಪಿಎಲ್‌ಗೆ ಮರಳುವ ವಿಶ್ವಾಸದಲ್ಲಿದ್ದರು. ಸ್ಪಾಟ್ ಫಿಕ್ಸಿಂಗ್ ವಿವಾದದಲ್ಲಿ ಶ್ರೀಶಾಂತ್ ಭಾಗಿಯಾದ ಆರೋಪ ಎದುರಿಸಿದ್ದರು.

ದೇಶೀಯ ಕ್ರಿಕೆಟ್ ಟ್ವೆಂಟಿ-20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವುದರೊಂದಿಗೆ ಕೇರಳದ ವೇಗದ ಬೌಲರ್ ಶ್ರೀಶಾಂತ್ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜಿನಲ್ಲಿ ನೋಂದಣಿಯಾಗಿದ್ದರು. ಅಂತಿಮಪಟ್ಟಿಯಲ್ಲಿ ಅರ್ಜುನ್ ತೆಂಡುಲ್ಕರ್: ಇದೇ ವೇಳೆ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಮೂಲಬೆಲೆ 20 ಲಕ್ಷ ರೂ. ನೊಂದಿಗೆ ಅಂತಿಮಪಟ್ಟಿಯಲ್ಲಿದ್ದಾರೆ. ಆಸ್ಟ್ರೇಲಿಯದ ಕ್ರಿಕೆಟಿಗ ಮಾರ್ನಸ್ ಲ್ಯಾಬುಶೇನ್ ಹಾಗೂ ಭಾರತೀಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಕ್ರಮವಾಗಿ 1 ಕೋ.ರೂ.ಹಾಗೂ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.

ಐಪಿಎಲ್-2021ರ ಆಟಗಾರರ ಹರಾಜುಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಚೆನ್ನೈನಲ್ಲಿ ಫೆಬ್ರವರಿ 18ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 292 ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಇದರಲ್ಲಿ ಒಟ್ಟು 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಹಾಗೂ ಅಸೋಸಿಯೇಟೆಡ್ ದೇಶಗಳ 3 ಆಟಗಾರರಿದ್ದಾರೆ.

8 ಫ್ರಾಂಚೈಸಿಗಳು ತಮ್ಮ ಕಿರುಪಟ್ಟಿಯನ್ನು ಸಲ್ಲಿಸಿದ ಬಳಿಕ ನೋಂದಾಯಿತ 1,114 ಆಟಗಾರರ ಪಟ್ಟಿ ಕಿರಿದಾಗಿದೆ. ಈ ವರ್ಷದ ಟೂರ್ನಿಯು ಎಪ್ರಿಲ್-ಮೇನಲ್ಲಿ ನಡೆಯುವ ನಿರೀಕ್ಷೆಯಿದೆ.

10 ಆಟಗಾರರಿಗೆ ಗರಿಷ್ಠ ಮೀಸಲು ಬೆಲೆ : ಭಾರತದ ಇಬ್ಬರು ಆಟಗಾರರಾದ-ಹರ್ಭಜನ್ ಸಿಂಗ್ ಹಾಗೂ ಕೇದಾರ್ ಜಾಧವ್ ಹಾಗೂ 8 ವಿದೇಶಿ ಆಟಗಾರರಾದ-ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವನ್ ಸ್ಮಿತ್(ಆಸ್ಟ್ರೇಲಿಯ), ಶಾಕಿಬ್ ಅಲ್ ಹಸನ್(ಬಾಂಗ್ಲಾ), ಮೊಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್ ಹಾಗೂ ಮಾರ್ಕ್‌ವುಡ್(ಇಂಗ್ಲೆಂಡ್) ಗರಿಷ್ಠ ಮೂಲ ಬೆಲೆ 2 ಕೋ.ರೂ. ಹೊಂದಿರುವ ಆಟಗಾರರಾಗಿದ್ದಾರೆ. ಸುಮಾರು 12 ಆಟಗಾರರು ಹರಾಜು ಪಟ್ಟಿಯಲ್ಲಿ ಮೂಲ ಬೆಲೆ 1.5 ಕೋ.ರೂ. ಹೊಂದಿದ್ದಾರೆ. 1 ಕೋಟಿ ರೂ. ಮೂಲ ಬೆಲೆ ಇರುವ 11 ಆಟಗಾರರ ಪಟ್ಟಿಯಲ್ಲಿ ಹನುಮ ವಿಹಾರಿ ಹಾಗೂ ಉಮೇಶ್ ಯಾದವ್ ಅವರಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂ ಳೂರು(ಆರ್‌ಸಿಬಿ)ಗರಿಷ್ಠ ಆಟಗಾರರನ್ನು(13)ಖರೀದಿಸುವ ಅವಕಾಶ ಹೊಂದಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್(9), ರಾಜಸ್ಥಾನ ರಾಯಲ್ಸ್(8) ಆ ನಂತರದ ಸ್ಥಾನದಲ್ಲಿವೆ. ಕೋಲ್ಕತಾ ನೈಟ್ ರೈಡರ್ಸ್(8) ಹಾಗೂ ಸನ್‌ರೈಸರ್ಸ್ ಹೈದರಾಬಾದ್(3)ಕಡಿಮೆ ಅವಕಾಶವನ್ನು ಹೊಂದಿವೆ. ಹರಾಜಿನ ಪಟ್ಟಿಯಲ್ಲಿರುವ ಹಿರಿಯ ಆಟಗಾರನೆಂದರೆ ಇಂಗ್ಲೆಂಡ್‌ನ 42ರ ವಯಸ್ಸಿನ ನಯನ್ ದೋಶಿ. ಕಿರಿಯ ವಯಸ್ಸಿನ ಆಟಗಾರ ಅಫ್ಘಾನಿಸ್ತಾನದ 16ರ ವಯಸ್ಸಿನ ಸ್ಪಿನ್ನರ್ ನೂರ್ ಅಹ್ಮದ್. ನಯನ್ ಅವರು ಭಾರತದ ಮಾಜಿ ವೇಗದ ಬೌಲರ್ ದಿಲಿಪ್ ಅವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News