ಎರಡನೇ ಟೆಸ್ಟ್: ಭಾರತ ತಿರುಗೇಟು, ರೋಹಿತ್ ಶತಕ

Update: 2021-02-13 09:28 GMT

ಚೆನ್ನೈ: ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕದ ಸಹಾಯದಿಂದ ಭಾರತ ತಂಡ ಶನಿವಾರ ಆರಂಭವಾದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು ಮರು ಹೋರಾಟ ನೀಡುತ್ತಿದೆ. 54 ಓವರ್ ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ. 

ಭಾರತವು ಇನ್ನೋರ್ವ ಆರಂಭಿಕ ಆಟಗಾರ ಶುಭಮನ್ ಗಿಲ್(0)ಹಾಗೂ ನಾಯಕ ವಿರಾಟ್ ಕೊಹ್ಲಿಯವರನ್ನು(0)ಬೇಗನೆ ಕಳೆದುಕೊಂಡಿತು. ಚೇತೇಶ್ವರ ಪೂಜಾರ  21 ರನ್ ಗಳಿಸಿ ಔಟಾದರು. ಔಟಾಗುವ ಮೊದಲು ರೋಹಿತ್ ಅವರೊಂದಿಗೆ 2ನೇ ವಿಕೆಟ್‍ಗೆ 85 ರನ್ ಜೊತೆಯಾಟ ನಡೆಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗಡೆದ ಆಡಿದ ರೋಹಿತ್ 130 ಎಸೆತಗಳನ್ನು ಎದುರಿಸಿ 14 ಬೌಂಡರಿ, 2 ಸಿಕ್ಸರ್ ಗಳನ್ನು ಒಳಗೊಂಡ 7ನೇ ಶತಕ ಸಿಡಿಸಿದರು. 

ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಪ್ರದರ್ಶನ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಛಾಪು ಮೂಡಿಸುತ್ತಿರುವ ರೋಹಿತ್ ಶರ್ಮಾ ಅಂತರ್ ರಾಷ್ಟ್ರೀಯ ಕ್ರಿಕೆಟ್‍ನಲ್ಲಿ  2018ರ ಬಳಿಕ 106 ಇನಿಂಗ್ಸ್ ಗಳಲ್ಲಿ 19ನೇ ಶತಕ ಸಿಡಿಸಿದರು. ಯಾವ ಬ್ಯಾಟ್ಸ್ ಮನ್ ಕೂಡ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಇಷ್ಟೊಂದು ಶತಕ ಸಿಡಿಸಿಲ್ಲ.

ರೋಹಿತ್ 21 ಟೆಸ್ಟ್ ಇನಿಂಗ್ಸ್ ಗಳಲ್ಲಿ 4 ಶತಕ, 49 ಏಕದಿನ ಇನಿಂಗ್ಸ್ ಗಳಲ್ಲಿ 13 ಶತಕ  ಹಾಗೂ 36 ಟಿ-20 ಅಂತರ್ ರಾಷ್ಟ್ರೀಯ ಇನಿಂಗ್ಸ್ ಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ 120  ಅಂತರ್ ರಾಷ್ಟ್ರೀಯ ಇನಿಂಗ್ಸ್ ನಲ್ಲಿ 18 ಶತಕಗಳನ್ನುಸಿಡಿಸಿದ್ದರು. 

ರೋಹಿತ್ ಇಂಗ್ಲೆಂಡ್ ವಿರುದ್ಧ ಮೊದಲ ಬಾರಿ ಶತಕ ಸಿಡಿಸಿದರು. ಈ ತನಕ ಗಳಿಸಿರುವ ಎಲ್ಲ ಶತಕಗಳನ್ನು ಅವರು ತವರು ನೆಲದಲ್ಲಿ ಸಿಡಿಸಿದ್ದಾರೆ. 

ರೋಹಿತ್ ಇದೀಗ 4 ವಿವಿಧ ಎದುರಾಳಿಗಳಾದ ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಶತಕ ಗಳಿಸಿರುವ ಸಾಧನೆ ಮಾಡಿದ್ದಾರೆ. ಬೇರ್ಯಾವ ಬ್ಯಾಟ್ಸ್ ಮನ್ ಈ ತನಕ ಎರಡಕ್ಕಿಂತ ಹೆಚ್ಚು ಎದುರಾಳಿಗಳ ವಿರುದ್ಧ ಈ ಸಾಧನೆ ಮಾಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News