ಅಫ್ಘಾನ್-ಇರಾನ್ ಗಡಿಯಲ್ಲಿ ತೈಲ ಟ್ಯಾಂಕರ್ ಸ್ಫೋಟ: ಭೀಕರ ಅಗ್ನಿದುರಂತ

Update: 2021-02-14 16:55 GMT

ಕಾಬೂಲ್,ಫೆ.14: ಇರಾನ್ ಗಡಿಗೆ ತಾಗಿಕೊಂಡಿರುವ ಅಫ್ಘಾನಿಸ್ತಾನದ ಪಶ್ಚಿಮ ಹೇರತ್ ಪ್ರಾಂತ್ಯದಲ್ಲಿರುವ ಪ್ರಮುಖ ಹೆದ್ದಾರಿಯೊಂದರಲ್ಲಿ ಶನಿವಾರ ತೈಲ ಟ್ಯಾಂಕರ್ ಸ್ಪೋಟಿಸಿದ್ದರಿಂದ ಹರಡಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ರವಿವಾರವು ಹರಸಾಹಸಪಡುತ್ತಿದ್ದಾರೆ.

 ತೈಲ ಟ್ಯಾಂಕರ್ ಸ್ಫೋಟ ಹಾಗೂ ಆನಂತರ ಸಂಭವಿಸಿದ ಅಗ್ನಿದುರಂತದಲ್ಲಿ ಕನಿಷ್ಠ 20 ಮಂದಿಗೆ ಗಾಯಗಳಾಗಿವೆ ಹಾಗೂ ಇಸ್ಲಾಂ ಖ್ವಾಲಾ ಕ್ರಾಸಿಂಗ್ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದ ನೈಸರ್ಗಿಕ ಅನಿಲ ಹಾಗೂ ತೈಲವನ್ನು ಒಯ್ಯುವ 500ಕ್ಕೂ ಅಧಿಕ ಟ್ರಂಕ್‌ಗಳು ಬೆಂಕಿಗಾಹುತಿಯಾಗಿದ್ದು, ಇನ್ನೂ ಹೊತ್ತಿ ಉರಿಯುತ್ತಿವೆ.

  ‘‘ಅಗ್ನಿಯನ್ನು ನಿಯಂತ್ರಿಸಲು ಅಸಾಧ್ಯವಾಗುತ್ತಿದ್ದು, ನೈಸರ್ಗಿಕ ಅನಿಲದ ಸಿಲಿಂಡರ್‌ಳು ಸ್ಫೋಟಗೊಂಡು, 100 ಮೀಟರ್‌ಗಿಂತಲೂ ಅಧಿಕ ಎತ್ತರಕ್ಕೆ ಚಿಮ್ಮುತ್ತಿರುವುದು ಕಾಣುತ್ತಿದೆ ’’ ಎಂದು ಹೇರತ್ ಪ್ರಾಂತದ ಗವರ್ನರ್ ವಾಹಿದ್ ಖತಾಲಿ ತಿಳಿಸಿದ್ದಾರೆ.

 ಅಫ್ಘಾನ್-ಇರಾನ್ ಗಡಿದಾಟು ಪ್ರದೇಶದಲ್ಲಿ ನಡೆದಿರುವ ಸ್ಫೋಟಗಳನ್ನು ನಾಸಾ ಉಪಗ್ರಹಗಳು ಕೂಡಾ ಗುರುತಿಸಿವೆ. ಮೊದಲನೆ ಸ್ಪೋಟವು ಶನಿವಾರ ಮಧ್ಯಾಹ್ನ 1:10ಕ್ಕೆ ಸಂಭವಿಸಿದ್ದರೆ, ಎರಡನೆಯ ಸ್ಪೋಟವು ಅರ್ಧತಾಸಿನ ಬಳಿಕ ಉಂಟಾಗಿತ್ತು.

 ಇರಾನ್ ವಿರುದ್ಧ ಅಂತಾರಾಷ್ಟ್ರೀಯ ನಿರ್ಬಂಧವನ್ನು ವಿಧಿಸಿರುವ ಹೊರತಾಗಿಯೂ ಅಫ್ಘಾನಿಸ್ತಾನಕ್ಕೆ ಮಾತ್ರ ಆ ದೇಶದಿಂದ ತೈಲವನ್ನು ಆಮದು ಮಾಡಿಕೊಳ್ಳಲು ಅಮೆರಿಕವು ಅನುಮತಿ ನೀಡಿದೆ.

  ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಗಾಳಿಯು ಜೋರಾಗಿ ಬೀಸುತ್ತಿರುವುದರಿಂದ ಬೆಂಕಿ ಇನ್ನಷ್ಟು ಕಡೆಗೆ ಹರಡುವ ಸಾಧ್ಯತೆಯಿದ್ದು, ಇನ್ನಷ್ಟು ತೈಲ ಹೊತ್ತ ಟ್ಯಾಂಕರ್‌ಗಲಿಗೆ ಬೆಂಕಿ ಹತ್ತಿಕೊಳ್ಳುವ ಅಪಾಯವಿದೆ ಎಂದು ಹೇರತ್ ಪ್ರಾಂತೀಯ ಗವರ್ನರ್ ವಾಹಿದ್ ಖತಾಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News