ಕೇರಳ: 6,000 ಕೋ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

Update: 2021-02-14 18:39 GMT

ತಿರುವನಂತಪುರಂ, ಫೆ.14: ಕೇರಳದಲ್ಲಿ ಸುಮಾರು 6,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಚಾಲನೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಈ ಸಂದರ್ಭ ಮಾತನಾಡಿದ ಪ್ರಧಾನಿ, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಕ್ಷೇಮಾಭಿವೃದ್ಧಿಗೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು. ತನ್ನ ವೈಯಕ್ತಿಕ ಕೋರಿಕೆಯ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳು ತಮ್ಮಲ್ಲಿ ದುಡಿಯುತ್ತಿರುವ ಭಾರತೀಯರ ಅನುಕೂಲಕ್ಕಾಗಿ ಹಲವು ಉಪಕ್ರಮಗಳನ್ನು ಆರಂಭಿಸಿವೆ ಎಂದು ಮೋದಿ ಹೇಳಿದರು.

 ಬಳಿಕ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್, ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉಲ್ಲೇಖಿಸಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಜೊತೆಗೂಡಿ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು ಕೆಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಕೇರಳೀಯರ ಪಾಲಿಗೆ ಇದು ಸಂತಸದ ಸಂದರ್ಭವಾಗಿದೆ ಎಂದರು.

   ವಿಲ್ಲಿಂಗ್ಡನ್ ದ್ವೀಪದಲ್ಲಿ ಪೆಟ್ರೊಕೆಮಿಕಲ್ ಯೋಜನೆ, ಕೊಚಿನ್ ಪೋರ್ಟ್‌ಟ್ರಸ್ಟ್‌ನ ಅಂತರಾಷ್ಟ್ರೀಯ ಹಡಗು ಟರ್ಮಿನಲ್, ಕೊಚಿನ್ ಶಿಪ್‌ಯಾರ್ಡ್‌ನಲ್ಲಿ ನೌಕಾ ಸಂಬಂಧಿ ಇಂಜಿನಿಯರಿಂಗ್ ತರಬೇತಿ ಸಂಸ್ಥೆ ‘ವಿಜ್ಞಾನ ಸಾಗರ’ಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ಕೊಚಿನ್ ಪೋರ್ಟ್‌ಟ್ರಸ್ಟ್‌ನ ದಕ್ಷಿಣ ಕಲ್ಲಿದ್ದಲು ಧಕ್ಕೆಗೆ ಶಿಲಾನ್ಯಾಸ ನೆರವೇರಿಸಿದರು. ಶೀಘ್ರವೇ ಕೇರಳ ವಿಧಾನಸಭೆ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News