ಕಾಮಗಾರಿಗಳಲ್ಲಿ ಅಕ್ರಮ ಆರೋಪ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2021-02-16 12:57 GMT

ಬೆಂಗಳೂರು, ಫೆ.16: ಸುಮಾರು 35 ಕೋಟಿ ರೂ.ಗಳ 48 ಕಾಮಗಾರಿಗಳ ಅಕ್ರಮದಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ 10 ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ವಿಭಾಗದ ಎಂ.ಅಮರೇಶ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಚಂದ್ರಲೇಔಟ್ ಉಪ ವಿಭಾಗದ ಗಾಮಗಾರಿಗಳಲ್ಲಿ ಅವ್ಯವಹಾರವಾಗಿದೆ ಎಂದು ಟಿವಿಸಿಸಿ ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆಸಿದ ಹಾಗೂ ಕಾಮಗಾರಿ ನಡೆಸಿದ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಎಂ.ಅಮರೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಆಡಳಿತ ವಿಭಾಗದ ಅಪರ ಆಯುಕ್ತ, ಮುಖ್ಯಲೆಕ್ಕಾಧಿಕಾರಿ, ಮುಖ್ಯ ಅಭಿಯಂತರು, ನಿವೃತ್ತ ಕಾರ್ಯಪಾಲಕ ಅಭಿಯಂತರ ಶ್ರೀಕಂಠೇಗೌಡ, ಸಹಾಯಕ ಕಾರ್ಯಪಾಲ ಅಭಿಯಂತರ ವೀರೇಶ್ ಹಾಲಕಟ್ಟಿ, ಮುಹಮ್ಮದ್ ಜಾವೀದ್, ಎ.ಇ.ಶ್ರೀನಿವಾಸ್‍ ರಾಜ್, ಮುಖ್ಯ ಲೆಕ್ಕಾಧಿಕಾರಿ ರಾಮೇಗೌಡ, ಪ್ರಥಮ ದರ್ಜೆ ಸಹಾಯಕರಾದ ಸುಶೀಲ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. 35 ಕೋಟಿ ರೂ.ವೆಚ್ಚದ 48 ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಟಿವಿಸಿಸಿ ವರದಿ ನೀಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆದರೆ, ಈ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಂದೂಡುತ್ತಾ ಬಂದಿರುವುದಲ್ಲದೆ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಮೇಲ್ನೋಟಕ್ಕೆ ಇವರು ತಪ್ಪು ಎಸಗಿರುವುದು ಕಂಡು ಬಂದಿದೆ ಎಂದು ಆರೋಪಿಸಿರುವ ಅಮರೇಶ್ ಅವರು, ಈ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಇವರಿಗೆ ಹಿಂಬಡ್ತಿ ನೀಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News