ಬೆಂಗಳೂರು: ಒಂದೇ ಅಪಾರ್ಟ್‌ಮೆಂಟ್‍ನಲ್ಲಿ 103 ಮಂದಿಗೆ ಕೊರೋನ ಸೋಂಕು

Update: 2021-02-16 16:01 GMT

ಬೆಂಗಳೂರು, ಫೆ.16: ರಾಜಧಾನಿ ಬೆಂಗಳೂರು ವ್ಯಾಪ್ತಿಯ ಒಂದೇ ಅಪಾರ್ಟ್‌ಮೆಂಟ್‍ನಲ್ಲಿ 103 ಕೊರೋನ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಸಮುದಾಯ ಭವನಗಳಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕೆಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ಅಪಾರ್ಟ್‌ಮೆಂಟ್‍ಗಳಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ಹೆಚ್ಚಳದ ಹಿನ್ನೆಲೆ ಮಂಗಳವಾರ ಬಿಬಿಎಂಪಿ ಕಚೇರಿಯಲ್ಲಿ ರೆಸಿಡೆಂಟ್ ವೆಲ್‍ಫೇರ್ ಅಸೋಸಿಯೇಷನ್‍ಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇತ್ತೀಚಿಗೆ ನರ್ಸಿಂಗ್ ಕಾಲೇಜಿನಲ್ಲಿ 40 ಮಂದಿಗೆ ಸೋಂಕು ಕಂಡುಬಂದಿದೆ. ಇದಾದ ಬಳಿಕ ಬೊಮ್ಮನಹಳ್ಳಿಯ ಎಸ್‍ಎನ್‍ಎನ್ ರಾಜ್ ಲೇಕ್‍ವ್ಯೂವ್ ಅಪಾರ್ಟ್‌ಮೆಂಟ್‍ನಲ್ಲಿ ಸಾಮಾಜಿಕ ಸಮಾರಂಭ ಆಯೋಜಿಸಿದ ಬಳಿಕ ಕೆಲವರಲ್ಲಿ ಪಾಸಿಟಿವ್ ಕಂಡುಬಂದಿದೆ. ಈ ಪೈಕಿ ಅಪಾರ್ಟ್‌ಮೆಂಟ್‍ನಲ್ಲಿ 1,052 ಮಂದಿ ವಾಸವಿದ್ದು, ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿದಾಗ 103 ಮಂದಿಗೆ ಸೋಂಕು ಕಂಡುಬಂದಿದೆ ಎಂದರು.

ಪಾಸಿಟಿವ್ ಬಂದವರಲ್ಲಿ 96 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಆದ್ದರಿಂದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಯಸ್ಸಾದವರು ಭಾಗಿಯಾಗುವುದನ್ನು ಕಡಿಮೆ ಮಾಡಿ. ಜೊತೆಗೆ ಎಲ್ಲ ಕಡೆ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲನೆ ಮಾಡಿ ಎಂದು ಸಲಹೆ ನೀಡಿದರು.

ಅಪಾರ್ಟ್‌ಮೆಂಟ್‍ಗಳ ನಿರ್ವಹಣೆ ಜವಾಬ್ದಾರಿ ಹೊತ್ತವರು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಮಂದಿ ಸೇರದೆ ವ್ಯಕ್ತಿಯಿಂದ ವ್ಯಕ್ತಿಗೆ 3.25 ಚ.ಮೀ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೋವಿಡ್ ಹರಡುವುದನ್ನು ತಡೆಯಬೇಕು. ಜೊತೆಗೆ ಅಪಾರ್ಟ್‌ಮೆಂಟ್‍ಗಳ ಸಾಮಾನ್ಯ ಜಾಗ, ಜಿಮ್ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳು ಕೈಗೊಂಡು ಸೋಂಕು ನಿವಾರಕ ಸಿಂಪಡಣೆ ಮಾಡಬೇಕು. ಈಜುಕೊಳಗಳ ಬಗ್ಗೆ ರಾಜ್ಯ ಸರಕಾರ ಹೊರಡಿಸಿರುವ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದರು.

ಪರೀಕ್ಷೆ ಮಾಡಿಸಿಕೊಳ್ಳಿ: ರೆಸಿಡೆಂಟ್ ವೆಲ್‍ಫೇರ್ ಅಸೋಸಿಯೇಷನ್‍ಗಳು ತಮ್ಮ ತಮ್ಮ ಅಪಾರ್ಟ್‌ಮೆಂಟ್‍ಗಳಲ್ಲಿ ಎಲ್ಲರ ಜೊತೆ ಸಮನ್ವಯ ಮಾಡಿ ಕೋವಿಡ್ ಬಗ್ಗೆ ಅರಿವು ಮೂಡಿಸಬೇಕು. ಯಾರಿಗಾದರೂ ಸೋಂಕು ಲಕ್ಷಣಗಳು ಕಂಡುಬಂದರೆ ಸ್ವಯಂ ಐಸೋಲೇಟ್ ಆಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಪಾಲಿಕೆಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 200 ಮೊಬೈಲ್ ಟೆಸ್ಟಿಂಗ್ ತಂಡಗಳಿದ್ದು, ಯಾರಿಗಾದರು ಸೋಂಕು ಲಕ್ಷಣಗಳು ಕಂಡುಬಂದರೆ ಕೂಡಲೆ ಉಚಿತವಾಗಿ ಆರ್‍ಟಿಪಿಸಿಆರ್ ಅಥವಾ ಆರ್‍ಎಟಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಆಯುಕ್ತರು ತಿಳಿಸಿದರು.

ಸಭೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತ(ಆರೋಗ್ಯ) ರಾಜೇಂದ್ರ ಚೋಳನ್, ವಿಶೇಷ ಆಯುಕ್ತ (ಘನತ್ಯಾಜ್ಯ) ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News