ಜೀವಾವಧಿ ಶಿಕ್ಷೆಗೊಳಗಾಗಿ ಸನ್ನಡತೆ ಮೇಲೆ ಬಿಡುಗಡೆ ಆಗಿದ್ದ ವ್ಯಕ್ತಿಯಿಂದ ಕೊಲೆ

Update: 2021-02-17 13:32 GMT

ಬೆಂಗಳೂರು, ಫೆ.17: ಜೋಡಿ ಕೊಲೆ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆಗೊಳಗಾಗಿ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರಬಂದಿದ್ದ ಆರ್ಮುಗಂ ಎಂಬಾತ ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನು ಕೊಲೆಗೈದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಲಘಟ್ಟಪುರದ ನಿವಾಸಿ ಆರ್ಮುಗಂ(45) ಬಂಧಿತ ಆರೋಪಿಯಾಗಿದ್ದು, ಆರೋಪಿಯು ಇದುವರೆಗೆ 4 ಕೊಲೆ ಮಾಡಿರುವ ಮಾಹಿತಿ ಹೊರಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಆರ್ಮುಗಂ 1997ರಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಅತ್ತಿಗೆ ಜತೆ ಜಗಳ ಮಾಡಿಕೊಂಡು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಜೈಲು ಸೇರಿದ್ದ. ಇದಾದ ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರ ಬಂದಿದ್ದ. ಆ ವೇಳೆ ಈತನ ಪತ್ನಿ ಪರಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿರುವ ಸಂಗತಿ ಆರ್ಮುಗಂ ಗಮನಕ್ಕೆ ಬಂದಿತ್ತು. ಬಳಿಕ 2001ರಲ್ಲಿ ಮೈಸೂರಿನಲ್ಲಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಈತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಸತತ 14 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ಆರ್ಮುಗಂ, 2015ರಲ್ಲಿ ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದ. ಈತನಿಗೆ ಯಾರೂ ಇಲ್ಲದ ಹಿನ್ನೆಲೆ ಜೈಲಿನಿಂದ ಹೊರ ಬಂದ ಬಳಿಕ ಎಲ್ಲಿ ಹೋಗಬೇಕು ಎಂಬುದು ತೋಚದೇ ನಗರದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನ ಕೊಲೆ: ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ 6ನೇ ಹಂತದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇತ್ತೀಚೆಗೆ ಭದ್ರತಾ ಸಿಬ್ಬಂದಿ ಆಗಿ ಆರ್ಮುಗಂ ಕೆಲಸಕ್ಕೆ ಸೇರಿದ್ದ. ಜ.27ರಂದು ರಾತ್ರಿ ತನ್ನ ಸ್ನೇಹಿತನೊಬ್ಬನನ್ನು ತಾನು ಕೆಲಸ ಮಾಡುತ್ತಿದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದುಕೊಂಡು ಬಂದಿದ್ದ. ನಂತರ ಇಬ್ಬರೂ ಸೇರಿ ಮದ್ಯ ಸೇವಿಸಿದ್ದು, ಬಳಿಕ ಆರ್ಮುಗಂ ಕಟ್ಟಡದ ಮೇಲ್ಭಾಗಕ್ಕೆ ಹೋಗಿ ವಾಪಸಾಗಿ ತನ್ನ ಚೀಲ ಪರಿಶೀಲಿಸಿದಾಗ ಅದರಲ್ಲಿ ಇಟ್ಟಿದ್ದ 2,500 ರೂ. ಕಾಣೆಯಾಗಿತ್ತು.

ಕೂಡಲೇ ಸ್ನೇಹಿತನನ್ನು ಈ ಬಗ್ಗೆ ವಿಚಾರಿಸಿದ್ದ. ಮದ್ಯದ ಅಮಲಿನಲ್ಲಿದ್ದ ಸ್ನೇಹಿತ ತನಗೇನೂ ಗೊತ್ತಿಲ್ಲ ಎಂದು ಉತ್ತರಿಸಿದ್ದ. ಇದರಿಂದ ಆಕ್ರೋಶಗೊಂಡು ಆತನನ್ನು ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News