ರಕ್ತದೊತ್ತಡ ತಪಾಸಣೆ:ಈ ಮಾಹಿತಿಗಳು ನಿಮಗೆ ಗೊತ್ತಿರಲಿ

Update: 2021-02-17 13:47 GMT

ಹೈಪರ್‌ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡಕ್ಕೆ ಅನಾರೋಗ್ಯಕರ ಆಹಾರ ಸೇವನೆ,ಜಡ ಜೀವನಶೈಲಿ,ಧೂಮ್ರಪಾನ ಮತ್ತು ಇತರ ಮಾರ್ಪಡಿಸಬಹುದಾದ ಅಂಶಗಳು ಕಾರಣವಾಗುತ್ತವೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ಹೃದ್ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಸಕಾಲಿಕವಾಗಿ ಅಧಿಕ ರಕ್ತದೊತ್ತಡವನ್ನು ತಡೆಯುವುದು ಇದರೊಂದಿಗೆ ಗುರುತಿಸಿಕೊಂಡಿರುವ ಅಡ್ಡ ಪರಿಣಾಮಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಮಾರ್ಗಗಳಲ್ಲೊಂದಾಗಿದೆ. ಆರೋಗ್ಯಕರ ಆಯ್ಕೆಗಳಿಂದ ಹಿಡಿದು ರಕ್ತದೊತ್ತಡ ಲಕ್ಷಣಗಳ ಮೇಲೆ ನಿಗಾಯಿರಿಸುವವರೆಗೆ ಹಲವಾರು ಮುನ್ನೆಚ್ಚರಿಕೆಗಳು ಅಗತ್ಯವಾಗುತ್ತವೆ. ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸುವುದು ಸಹ ಪ್ರಮುಖ ಪಾತ್ರವನ್ನು ಹೊಂದಿದೆ. ನಮ್ಮ ರಕ್ತದೊತ್ತಡವು ಅಧಿಕವಾಗಿದೆ ಎಂದು ನಮಗೆ ತಿಳಿದಾಗಷ್ಟೇ ನಾವು ಅದನ್ನು ನಿಯಂತ್ರಿಸಲು ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುತ್ತೇವೆ. ಯಾವಾಗ ಮತ್ತು ಎಷ್ಟು ಸಮಯಕ್ಕೊಮ್ಮೆ ರಕ್ತದೊತ್ತಡ ಪರೀಕ್ಷೆಯನ್ನು ಮಾಡಿಸಬೇಕು ಎನ್ನುವುದರ ಕುರಿತು ಅಗತ್ಯ ಮಾಹಿತಿಗಳು ಇಲ್ಲಿವೆ....

 ಮಕ್ಕಳಿಗೆ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಮತ್ತು ವಯಸ್ಕರು ತಿಂಗಳಿಗೆ ಒಮ್ಮೆ ರಕ್ತದೊತ್ತಡ ತಪಾಸಣೆ ಮಾಡಿಸಬೇಕು ಎನ್ನುತ್ತಾರೆ ತಜ್ಞರು. ಅಧಿಕ ರಕ್ತದೊತ್ತಡವಿದ್ದು,ಔಷಧಿಗಳನ್ನು ಸೇವಿಸುತ್ತಿರುವವರು ವಾರಕ್ಕೊಮ್ಮೆ ತಪಾಸಣೆ ಮಾಡಿಕೊಳ್ಳಬೇಕು. ಆದರೆ ಈಗಷ್ಟೇ ಅಧಿಕ ರಕ್ತದೊತ್ತಡ ಔಷಧಿಗಳನ್ನು ಸೇವಿಸಲು ಆರಂಭಿಸಿರುವವರು ಅಥವಾ ಪ್ರಿ ಹೈಪರ್‌ಟೆನ್ಶನ್ ಅಥವಾ ಪೂರ್ವ ಅಧಿಕ ರಕ್ತದೊತ್ತಡ ಲಕ್ಷಣಗಳನ್ನು ಹೊಂದಿರುವವರು ಹೆಚ್ಚು ಸಲ,ಅಂದರೆ ಒಂದರಿಂದ ಮೂರು ತಿಂಗಳವರೆಗೆ ಅಥವಾ ರಕ್ತದೊತ್ತಡವು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಪ್ರತಿದಿನ ಎರಡು ಬಾರಿ ತಪಾಸಣೆ ಮಾಡಿಕೊಳ್ಳಬೇಕು. ಇದಕ್ಕಾಗಿ ವೈದ್ಯರ ಬಳಿಗೇ ತೆರಳಬೇಕಂತಿಲ್ಲ. ಬಿಪಿ ಮಾನಿಟರ್‌ನ ಮೂಲಕ ಮನೆಯಲ್ಲಿಯೇ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬಹುದು.

 ರಕ್ತದೊತ್ತಡವನ್ನು ಪರೀಕ್ಷಿಸಲು ಯಾವ ಸಮಯ ಅತ್ಯಂತ ಸೂಕ್ತ?

ಆರಂಭದ ಹಂತದಲ್ಲಿ ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ದಿನಕ್ಕೆರಡು ಬಾರಿ ತಪಾಸಣೆ ಮಾಡಿಕೊಳ್ಳಬೇಕು. ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಂಜೆ/ರಾತ್ರಿ ರಕ್ತದೊತ್ತಡವನ್ನು ಪರೀಕ್ಷಿಸಬೇಕು. ಸಾಮಾನ್ಯವಾಗಿ ಸಂಜೆ/ರಾತ್ರಿಯ ರಕ್ತದೊತ್ತಡ ಸಂಖ್ಯೆಗಳು ಬೆಳಗಿನಕ್ಕಿಂತ 10 ಎಂಎಂ ಅಧಿಕವಾಗಿರುತ್ತವೆ.

ಯಾವ ಪ್ರಾಯದವರು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುತ್ತಾರೆ?

ಅಧಿಕ ರಕ್ತದೊತ್ತಡ ಆನುವಂಶಿಕವಾಗಿದ್ದರೆ ಅದು ಸಾಮಾನ್ಯವಾಗಿ 40 ಮತ್ತು 60 ವರ್ಷ ಪ್ರಾಯದ ನಡುವೆ ಆರಂಭಗೊಳ್ಳುತ್ತದೆ.

ಆನುವಂಶಿಕವಲ್ಲದ ಪ್ರಕರಣಗಳು 40 ವರ್ಷ ಪ್ರಾಯಕ್ಕೆ ಮೊದಲೇ ಅಥವಾ 60 ವರ್ಷದ ನಂತರವೂ ಆರಂಭವಾಗಬಹುದು. ಈ ಅವಧಿಯಲ್ಲಿ ಅಧಿಕ ರಕ್ತದೊತ್ತಡ ಉಂಟಾದರೆ ಅದಕ್ಕೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಎಂಡೊಕ್ರೈನಾಲಜಿಸ್ಟ್ ಅಥವಾ ಕಾರ್ಡಿಯಾಲಜಿಸ್ಟ್‌ರನ್ನು ಭೇಟಿಯಾಗಬೇಕಾಗುತ್ತದೆ ಮತ್ತು ಸ್ಥಿತಿಯನ್ನು ನಿಯಂತ್ರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸಮಯದಲ್ಲಿ ರಕ್ತದೊತ್ತಡವು 120/80 ಎಂಎಂಎಚ್‌ಜಿಯಷ್ಟಿರಬೇಕು. ಹೆಚ್ಚಿನ ಏರಿಳಿತಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News