×
Ad

ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದ ಯುವ ಕಾಂಗ್ರೆಸ್

Update: 2021-02-17 19:50 IST

ಬೆಂಗಳೂರು, ಫೆ.17: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರಗಳು ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಘಟಕ ಪ್ರತಿಭಟನೆ ನಡೆಸಿತು.

ಬುಧವಾರ ನಗರದ ಚಾಲುಕ್ಯ ವೃತ್ತದ ಬಳಿ ರಾಷ್ಟ್ರೀಯ ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಸುರಭಿ ದ್ವಿವೇದಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಸೈಕಲ್, ಕಾಲ್ನಡಿಗೆ ಜಾಥ ನಡೆಸಿ ಡೀಸೆಲ್ ಇಲ್ಲದ ಕಾರುಗಳನ್ನು ತಳ್ಳಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

‘ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ' 'ಬಡವರ ಅನ್ನ ಕಿತ್ತುಕೊಳ್ಳುತ್ತಿದೆ’. ‘ಪೆಟ್ರೋಲ್ ದರಗಳನ್ನು ಶೇ.258ರಷ್ಟು, ಡೀಸೆಲ್ ದರಗಳನ್ನು ಶೇ.820 ರಷ್ಟು ಹೆಚ್ಚಳ ಮಾಡಿ ಬಡವರ ಬದುಕಿಗೆ ಕೊಳ್ಳಿ ಇಟ್ಟಿದೆ’, ‘ಕೇಂದ್ರದಲ್ಲಿ ಬಿಜೆಪಿ ಸರಕಾರ 20 ಲಕ್ಷ ಕೋಟಿ ರೂ.ಲೂಟಿ ಮಾಡಿದೆ’ ಎಂಬುದು ಸೇರಿದಂತೆ ಹಲವು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಂತೆ ಆಗ್ರಹಿಸಿದರು.

ಏರಿಕೆ ಮಾಡಿರುವ ದರಗಳನ್ನು ತಕ್ಷಣವೇ ಇಳಿಸಬೇಕು. ಕೋವಿಡ್-19ನಿಂದ ಜನತೆ ಸಂಕಷ್ಟದಲ್ಲಿರುವಾಗ ಪ್ರತಿದಿನ ದರ ಏರಿಕೆ ಮಾಡುತ್ತಿರುವುದು ಅಮಾನವೀಯ ಕ್ರಮವಾಗಿದೆ. ಜನ ವಿರೋಧಿ ತೀರ್ಮಾನಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಚಾಲುಕ್ಯ ವೃತ್ತದಿಂದ ಜಾಥ ಸ್ವಲ್ಪ ದೂರ ಸಾಗುತ್ತಿದ್ದಂತೆ ಪ್ರತಿಭಟನಾಕಾರರನ್ನು ಸಂಚಾರ ಪೊಲೀಸರು ತಡೆದರು. ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತದೆ. ಇಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಹೇಳಿದರು. ಆದರೂ ಪಟ್ಟುಬಿಡದ ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ವಲ್ಪ ಹೊತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಅಂತ್ಯಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News