ನಕಲಿ ಆರ್ಯುವೇಧಿಕ್ ಔಷಧಿ ದಂಧೆ ಆರೋಪ: ಆರು ಜನರ ಬಂಧನ

Update: 2021-02-17 14:48 GMT

ಬೆಂಗಳೂರು, ಫೆ.17: ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ನಕಲಿ ಆರ್ಯುವೇದಿಕ್ ಔಷಧಿಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪದ ಮೇಲೆ ಆರು ಜನರನ್ನು ಇಲ್ಲಿನ ತಿಲಕ್‍ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಶವಂತಪುರದ ಸಂಜಿತ್, ಮಂಜುನಾಥ್, ಶಿವಲಿಂಗ, ರಮಾಕಾಂತ, ಕಿಶನ್, ಕಲ್ಲೋಳಪ್ಪ ಗುರಪ್ಪಬಾಗಲಕೋಟೆ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.

ಸೆ.9ರಂದು ರವಿ. ಬಿ.ಆರ್.ಅನುಕರ್ ಎಂಬುವರು ಕಾಲು, ಸೊಂಟದ ನೋವು ತೋರಿಸಿಕೊಳ್ಳಲು ಜಯನಗರದ ಅರ್ಥೋಪೆಡಿಕ್ ಸೆಂಟರ್ ಗೆ ಬಂದಿದ್ದಾಗ ಆಸ್ಪತ್ರೆಯ ಹೊರಗಡೆ ನಿಂತಿದ್ದ ಅಪರಿಚಿತ ವ್ಯಕ್ತಿ ತನ್ನ ಹೆಸರು ರಮೇಶ್ ಎಂದು ಪರಿಚಯಿಸಿಕೊಂಡಿದ್ದಾನೆ. ತನ್ನ ಅಣ್ಣ ಸೀತಾರಾಮ್ ಎಂಬವರು ರಾಜಾಜಿನಗರ ಧನ್ವಂತರಿ ಆರ್ಯುವೇದಿಕ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಯಿಲೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ ಎಂದು ನಂಬಿಸಿ ಅವರನ್ನು ಧನ್ವಂತರಿ ಆರ್ಯುವೇದಿಕ್ ಸೆಂಟರ್ ಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಆರೋಪಿಗಳನ್ನು ತೋರಿಸಿ ಇವರೆಲ್ಲ ವೈದ್ಯರು ಮತ್ತು ಕೆಲಸದವರೆಂದು ನಂಬಿಸಿದ್ದಾನೆ. ತದನಂತರ, 2.59 ಲಕ್ಷ ರೂ. ಖರ್ಚು ಆಗಲಿದೆ ಎಂದು ತಿಳಿಸಿದ್ದಾನೆ.

ಇಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ರವಿ ಬಿ.ಆರ್.ಅನುಕರ್ ಅವರು ಆರೋಪಿಗಳಿಗೆ ತಿಳಿಸಿದಾಗ, ಕಾಯಿಲೆ ಗುಣಮುಖ ಆಗದಿದ್ದರೆ, ಹಣ ವಾಪಸ್ಸು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನು ನಂಬಿ ಆರೋಪಿಗಳಿಗೆ 2.59 ಲಕ್ಷರೂ. ನೀಡಿದ್ದಾರೆ. ಆದರೆ, ಕಾಯಿಲೆ ಸ್ವಲ್ಪವು ಗುಣಮುಖ ಆಗದ ಕಾರಣ ಮತ್ತೆ ಧನ್ವಂತರಿ ಆರ್ಯುವೇದಿಕ್ ಸೆಂಟರ್ ಗೆ ಹೋಗಿದಾಗ ಬಾಗಿಲು ಹಾಕಲಾಗಿತ್ತು. ಇದರಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News