ರಾಜ್ಯದಲ್ಲಿ ಹಿಂದಿ ಹೇರಿಕೆ ಅಪಾಯಕಾರಿ ಹಂತ ಮುಟ್ಟಿದೆ: ಡಾ.ಎಲ್.ಹನುಮಂತಯ್ಯ

Update: 2021-02-17 14:51 GMT

ಬೆಂಗಳೂರು, ಫೆ.17: ಪ್ರಸ್ತುತ ರಾಜ್ಯದಲ್ಲಿ ಹಿಂದಿ ಹೇರಿಕೆ ಅಪಾಯಕಾರಿ ಹಂತ ತಲುಪಿದ್ದು, ಇದರಿಂದಾಗಿ ರಾಜ್ಯದ ಯುವ ಜನತೆ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಕರ್ನಾಟಕ ವಿಕಾಸ ರಂಗ ಮತ್ತು ಸಪ್ನ ಬುಕ್ ಹೌಸ್‍ಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಡಾ.ಸಿ.ಎನ್.ರಾಮಚಂದ್ರನ್‍ರ ಬಂಡುಕೋರ ಸಾಹಿತಿಗಳು, ರಾ.ನಂ. ಚಂದ್ರಶೇಖರ ಅವರ ಕನ್ನಡ ಹಾದಿಯ ಕೈಮರಗಳು, ಎಚ್. ಡುಂಡಿರಾಜ್ ಅವರ ಪತ್ರೊಡೆ ಮಿತ್ರರು ಮತ್ತು ಬೇಲೂರು ರಘುನಂದನ್ ಅವರ ಮೋಹನ ತರಂಗಿಣಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಅತೀ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಬ್ಯಾಂಕಿಂಗ್ ವಲಯದಲ್ಲಿ ಹಿಂದಿ ಭಾಷೆಯಲ್ಲೆ ಪರೀಕ್ಷೆ ನಡೆಯುತ್ತಿರುವುದರಿಂದ ಅಲ್ಲೆಲ್ಲಾ ಹಿಂದಿ ಭಾಷಿಕರೇ ಬರುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಅನ್ನುವ ವಿಷಯ ಪ್ರಶ್ನೆಯಾಗಿಯೇ ಉಳಿದಿದೆ. ಇದನ್ನೆಲ್ಲಾ ನೋಡಿದರೆ ನಮ್ಮಲ್ಲಿರುವುದು ಸಹಜ ಪ್ರಜಾಪ್ರಭುತ್ವವಲ್ಲ ಸವಾರಿ ಪ್ರಜಾಪ್ರಭುತ್ವ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯ ಸಾಹಿತಿ ಅನಕೃ 60 ವರ್ಷಗಳ ಹಿಂದೆ ಕನ್ನಡ ಚಳವಳಿ ಆರಂಭಿಸಿದಾಗ ಇದ್ದ ಸಮಸ್ಯೆಗಳೇ ಇಂದೂ ಚಾಲ್ತಿಯಲ್ಲಿವೆ. ಕನ್ನಡಗರಿಗೆ ಕೆಲಸ, ಹಿಂದಿ ಹೇರಿಕೆ ಇವೆರಡು ಇಂದಿಗೂ ಸಮಸ್ಯೆಗಳಾಗಿಯೇ ಉಳಿದಿವೆ ಎಂದು ಅವರು ವಿಷಾದಿಸಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿದರು. ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ. ಚ.ಚನ್ನೇಗೌಡ ಸ್ವಾಗತಿಸಿ, ಸಪ್ನದ ದೊಡ್ಡೇಗೌಡ ವಂದಿಸಿ, ಡಾ. ಸಂತೋಷ ಹಾಲಗಲ್ಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ. ಸಿ.ಎನ್.ರಾಮಚಂದ್ರನ್, ರಾನಂ.ಚಂದ್ರಶೇಖರ, ಬೇಲೂರು ರಘುನಂದನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News