ಕೊಳಗೇರಿ ನಿವಾಸಿಗಳಿಗೆ ವಸತಿ ಕಲ್ಪಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹ

Update: 2021-02-17 17:48 GMT

ಬೆಂಗಳೂರು, ಫೆ. 17: ನಗರದ ವಿವಿಧ ಕೊಳಗೇರಿಗಳಲ್ಲಿ ವಾಸವಾಗಿರುವ ನಿರ್ಗತಿಕ ಬುಡಬುಡಿಕೆ, ಮಂಗಳಮುಖಿಯರು ಸೇರಿದಂತೆ ಕೂಲಿ ಕಾರ್ಮಿಕರಿಗೆ ಸೂಕ್ತ ವಸತಿ ಸೌಲಭ್ ಕಲ್ಪಿಸಬೇಕೆಂದು ಕೋರಿ ಬಿಡುಗಡೆಯ ಚಿರತೆಗಳು(ವಿಸಿಕೆ) ನೇತೃತ್ವದಲ್ಲಿ ಇಲ್ಲಿನ ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಬುಧವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಸತ್ಯಾಗ್ರಹ ನಡೆಸಿದ ಕೂಲಿ ಕಾರ್ಮಿಕರು ಮತ್ತು ಕೊಳಗೇರಿ ನಿವಾಸಿಗಳ ಕೂಡಲೇ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮುಖಂಡರು, ಬೆಲೆ ಏರಿಕೆ ಬಿಸಿಯ ನಡುವೆ ಕೊಳಗೇರಿ ನಿವಾಸಿಗಳ ಬದುಕು ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಮಹಾಮಾರಿ ಕೋವಿಡ್ ಮಧ್ಯೆ ಕೊಳಗೇರಿ ನಿವಾಸಿಗಳಿಗೆ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದು ವಿನಾಕಾರಣ ಎತ್ತಗಂಡಿ ಮಾಡಲಾಗುತ್ತಿದೆ. ಹೀಗಾಗಿ ಇಲ್ಲಿ ಸಿಂಗಸಂದ್ರ, ಕಾಚರಕನಹಳ್ಳಿ, ಜೆಪಿ ಪಾರ್ಕ್, ಮಾಳಗೊಂಡನಹಳ್ಳಿ, ಬಿದರಹಳ್ಳಿ ಸೇರಿದಂತೆ ವಿವಿಧೆಡೆಗಳಲ್ಲಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೆಡೆ ಪುನರ್ವಸತಿಗೆ ಸರಕಾರದಿಂದ ಒದಗಿಸಿರುವ ಭೂಮಿ ಸಮಸ್ಯೆ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿ ಬಡವರಿಗೆ ನೆಮ್ಮದಿ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ರಾಜ್ಯದಲ್ಲಿನ ಬಡವರಿಗೆ ಪಿಎಂ ಆವಾಸ್, ಮುಖ್ಯಮಂತ್ರಿ ಬಹುಮಹಡಿ, ಅಂಬೇಡ್ಕರ್ ನಿವಾಸ ಸೇರಿ ಹಲವು ಯೋಜನೆಗಳ ಜತೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆಗಳಿವೆ. ಆದರೂ, ಮಂಗಳಮುಖಿಯರು, ಬುಡಬುಡಿಕೆ, ಕೋಲೆ ಬಸವ ಸೇರಿದಂತೆ ಇನ್ನಿತರರು ಬೀದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಮೊದಲು ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಿಸಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ, ಹಿರಿಯ ಮುಖಂಡ ಎಂ.ಎಸ್.ಶೇಖರ್, ನಗರ ಜಿಲ್ಲೆ ಅಧ್ಯಕ್ಷ ಮಹೇಶ್, ಸ್ಟಾಲಿನ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಈ ವೇಳೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News