×
Ad

ಶಾಲೆ ನಿರ್ಮಾಣಕ್ಕಾಗಿ 30 ಲಕ್ಷ ರೂ. ದೇಣಿಗೆ ನೀಡಿದ ಇಮ್ರಾನ್ ಪಾಷ

Update: 2021-02-18 17:53 IST

ಬೆಂಗಳೂರು, ಫೆ.18: ಬಡ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಚಾಮರಾಜಪೇಟೆ ಕ್ಷೇತ್ರದ ಪಾದರಾಯನಪುರ ವಾರ್ಡ್ ನ ಅರಫಾತ್ ನಗರದಲ್ಲಿ ಶಾಲೆ ನಿರ್ಮಾಣಕ್ಕಾಗಿ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಇಮ್ರಾನ್ ಪಾಷ ವೈಯಕ್ತಿಕವಾಗಿ 30 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.

ಶಾಲೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಮ್ರಾನ್ ಪಾಷ, ಪ್ರತಿವರ್ಷ ಶಾಲೆಗಳ ದಾಖಲಾತಿಯ ಸಂದರ್ಭದಲ್ಲಿ ಬಡವರು ತಮ್ಮ ಮಕ್ಕಳಿಗೆ ಉತ್ತಮ ಶಾಲೆಗಳಿಗೆ ಸೇರಿಸಲು ತಮ್ಮ ಬಳಿ ಇರುವಂತಹ ಒಡವೆಗಳನ್ನು ಅಡವಿಟ್ಟು, ಸಾಲ ಮಾಡಿ ಹಣವನ್ನು ಕ್ರೋಡೀಕರಿಸುತ್ತಾರೆ ಎಂದರು.

ಬಡತನದ ಸಮಸ್ಯೆಯಿಂದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗುವುದಿಲ್ಲ. ನಮ್ಮ ದೇಶ, ರಾಜ್ಯ ಹಾಗೂ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಪ್ರಬಲವಾದ ಅಸ್ತ್ರವಾಗಿದೆ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದಾಗ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಇಮ್ರಾನ್ ಪಾಷ ಹೇಳಿದರು.

ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸುಶಿಕ್ಷಿತನಾದರೆ, ಆತನ ಇಡೀ ಕುಟುಂಬ ಶಿಕ್ಷಣದತ್ತ ಆಕರ್ಷಿತವಾಗುತ್ತದೆ. ಶಿಕ್ಷಣವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಅದು ಹಂಚಿದಷ್ಟು ಜ್ಞಾನ ಹೆಚ್ಚಾಗುತ್ತದೆ. ನಮ್ಮ ವಾರ್ಡ್ ನ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಡ ಕುಟುಂಬಗಳಿವೆ. ಬಡತನದ ಕಾರಣದಿಂದ ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಆದುದರಿಂದ, ಇಲ್ಲಿ ನಿರ್ಮಿಸುತ್ತಿರುವ ಶಾಲೆಯಲ್ಲಿ ಬಡ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಅವರು ತಿಳಿಸಿದರು.

ವೈಯಕ್ತಿಕವಾಗಿ ಇವತ್ತು ಶಾಲೆಯ ನಿರ್ಮಾಣಕ್ಕಾಗಿ 30 ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಏನಾದರು ಅಗತ್ಯವಿದ್ದಲ್ಲಿ, ಅದನ್ನು ಪೂರೈಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಇಮ್ರಾನ್ ಪಾಷ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಆರಿಫ್ ಪಾಷ, ಜೆಡಿಎಸ್ ಮುಖಂಡ ಇರ್ಫಾನ್ ಪಾಷ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News