ರಾಜ್ಯ ಸರಕಾರದ ವಿರುದ್ಧ ಬೀದಿಗಿಳಿದ ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು: ಸಾಮೂಹಿಕ ರಜೆ ಹಾಕಿ ಪ್ರತಿಭಟನೆ
ಬೆಂಗಳೂರು, ಫೆ.18: ಕೊರೋನ ವಾರಿಯರ್ಸ್ ಕುಟುಂಬಗಳಿಗೆ ಪರಿಹಾರ ಧನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಮೂರು ಸಾವಿರಕ್ಕೂ ಅಧಿಕ ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಸಿಬ್ಬಂದಿ, ಕೋವಿಡ್‍ನಿಂದ ಮೃತಪಟ್ಟಿರುವ ಪಾಲಿಕೆಯ ಸಿಬ್ಬಂದಿಯ ಕುಟುಂಬಗಳಿಗೆ ಇದುವರೆಗೂ ಪರಿಹಾರ ಕೈ ಸೇರಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಕೊರೋನ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ 18 ಬಿಬಿಎಂಪಿ ನೌಕರರು ಕೋವಿಡ್‍ನಿಂದ ಮೃತಪಟ್ಟಿದ್ದರೂ, ಅವರ ಕುಟುಂಬಗಳಿಗೆ ವಿಮೆಯ ಮೊತ್ತ ತಲುಪಿಲ್ಲ. ಹಾಗಾಗಿಯೇ ಇಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ನೌಕರರು ತಿಳಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಮೃತ್‍ರಾಜ್, ಮುಖ್ಯಮಂತ್ರಿಯವರೇ ಬೆಂಗಳೂರು ಮಹಾನಗರದ ಉಸ್ತುವಾರಿಯನ್ನೂ ಹೊಂದಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಒಮ್ಮೆಯೂ ಬಿಬಿಎಂಪಿ ನೌಕರರ ಕುಂದುಕೊರತೆಗಳನ್ನು ಕೇಳಿಲ್ಲ. ಅಲ್ಲದೆ, ನಗರದಲ್ಲಿ ನಿತ್ಯವೂ ಸಾವಿರಾರು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವಾಗಲೂ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ ನೌಕರರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಿಬಿಎಂಪಿ ನೌಕರರ ವೃಂದ ಮತ್ತು ನೇಮಕಾತಿಯ ಹೊಸ ನಿಯಮಗಳು ನೌಕರರಿಗೆ ಪ್ರತಿಕೂಲವಾಗಿವೆ. ಮಂಜೂರಾದ ಸಾವಿರಾರು ಹುದ್ದೆಗಳು ಖಾಲಿ ಇವೆ. ಕೆಲಸದ ಹೊರೆ ಹೆಚ್ಚಳವಾಗಿದೆ. ನೌಕರರು ಬಹಳ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ಇದೆ ಎಂದರು.
ಪ್ರತಿಭಟನೆ ನಿರತ ಸಿಬ್ಬಂದಿಗೆ ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಎನ್.ಆರ್.ರಮೇಶ್ ಬೆಂಬಲ ಸೂಚಿಸಿದರು. ಪ್ರತಿಭಟನೆ ಬಳಿಕ ನಮ್ಮ ಬೇಡಿಕೆಗಳ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲುಪಿಸಲಾಗುವುದು ಎಂದು ಸಂಘದ ಮುಖಂಡರು ತಿಳಿಸಿದರು.