×
Ad

ಬಿಬಿಎಂಪಿ ಕಾಯ್ದೆ ರದ್ದು ಕೋರಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-02-18 21:50 IST

ಬೆಂಗಳೂರು, ಫೆ.18; ಬಿಬಿಎಂಪಿ ಕಾಯ್ದೆ-2020ಅನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ನಗರದ ಎಲ್.ಎಸ್. ಮಲ್ಲಿಕಾರ್ಜುನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಕೆಲ ಕಾಲ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಮೇಯರ್ ಹಾಗೂ ಉಪ ಮೇಯರ್ ಗಳ ಮೀಸಲಾತಿ, ಶಾಸಕರ ನೇತೃತ್ವದಲ್ಲಿ ಸಲಹಾ ಸಮಿತಿ ಸ್ಥಾಪನೆ, ಜಾಹೀರಾತು ಶುಲ್ಕ ಹಾಗೂ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಸಂಬಂಧಿಸಿದ ಬಿಬಿಎಂಪಿ ಕಾಯ್ದೆ-2020ರಲ್ಲಿ ನಿಯಮಗಳನ್ನು ರೂಪಿಸಲಾಗಿದೆ.

ಈ ನಿಯಮಗಳು ಸಂವಿಧಾನದ ವಿಧಿಗಳು, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ ಮತ್ತು ಬಿಬಿಎಂಪಿಯ ಕಟ್ಟಡಗಳ ಬೈಲಾ-2013ರ ನಿಯಮಗಳಿಗೆ ತದ್ವಿರುದ್ಧವಾಗಿವೆ. ಹೀಗಾಗಿ, ಬಿಬಿಎಂಪಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News