ರೈತ ಉತ್ಪಾದಕ ಸಂಸ್ಥೆಗಳು ಕಾರ್ಪೊರೇಟ್ ಏಜೆಂಟರಾಗುವ ಅಪಾಯದ ಬಗ್ಗೆ

Update: 2021-02-18 18:37 GMT

ಏನಾದರೂ ಬೆಳೆ ಬೆಳೆಯಬೇಕು ಅಂತಿದ್ದರೆ ಮೊದಲು ಹೊಲ ಹದ ಮಾಡುತ್ತಾರೆ; ಆಮೇಲೆ ಬೀಜ/ಪೈರು ರೆಡಿ ಮಾಡಿಕೊಳ್ಳುತ್ತಾರೆ. ಗೊಬ್ಬರ ಇತ್ಯಾದಿ ಕೂಡಾ.. ಅತ್ತ, ಕುರಿ ಮಾರಾಟ ಮಾಡೋದಾದರೆ ಅದನ್ನು ಕೊಬ್ಬಿಸಿದಷ್ಟು ಲಾಭ!

ಉದ್ಯಮ ನೀತಿಯಲ್ಲಿ ಇದನ್ನು ಪೂರ್ವ ತಯಾರಿ ಅನ್ನುತ್ತಾರೆ. ಅಂದರೆ ಒಂದು ದೊಡ್ಡ ಯೋಜನೆಯನ್ನು ಅನುಷ್ಠಾನಮಾಡುವ ಮೊದಲು ಅದಕ್ಕೆ ಬೇಕಾದ ಹತ್ತು ಹಲವು ಸಂಗತಿಗಳನ್ನು ಪ್ರೋತ್ಸಾಹಿಸಿ ಸ್ಥಾಪನೆ ಮಾಡಲಾಗುತ್ತದೆ. ತಾಳೆ ಎಣ್ಣೆ ಬೆಳೆಯನ್ನು ಹೀಗೆಯೇ ಪ್ರೋತ್ಸಾಹಿಸಿದ್ದು. ಒಮ್ಮೆ ಬೆಳೆ ಬಂದ ಮೇಲೆ ಸಂಸ್ಕರಣಾ ಕಂಪೆನಿ ಈ ಬೆಳೆಯನ್ನು ಕೊಳ್ಳುತ್ತೆ. ಕಂಪೆನಿ ಎಂಟ್ರಿಯಾಗುವುದು ಈ ಮೂಲ ವ್ಯವಸ್ಥೆ ಸ್ಥಾಪನೆಯಾದ ಮೇಲೆ.

 ಈಗ ಈ ರೈತ ಉತ್ಪಾದಕ ಸಂಸ್ಥೆಗಳನ್ನು ನೋಡಿ:

ರೈತ ಉತ್ಪಾದಕ ಸಂಸ್ಥೆಗಳನ್ನು ಹೊಸ ಯುಗದ ಬೆಳಕು ಎಂಬಂತೆ ಬಿಂಬಿಸಲಾಗುತ್ತಿದೆ. ರೈತರು ಸಂಘಟಿತರಾಗಿ ತಮ್ಮದೇ ಕಂಪೆನಿ ಸ್ಥಾಪಿಸಿ ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಬ್ರಾಂಡ್ ಮಾಡಿ ಮಾರುವ ಒಂದು ಚೌಕಟ್ಟು ಇಲ್ಲಿದೆ.

ಕೇಂದ್ರ ಸರಕಾರವು ಕಳೆದ ವರ್ಷ ಹತ್ತು ಸಾವಿರ ಇಂತಹ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹಾಕಿಕೊಂಡಿತ್ತು. ಇದು ಆರಂಭವಾದ ಮೊದಲ ವರ್ಷಗಳಲ್ಲಿ ಅಷ್ಟೇನೂ ವೇಗ ಪಡೆದಿರಲಿಲ್ಲ. ನಬಾರ್ಡ್ ಮಾತ್ರ ಇಂತಹ ಸಂಸ್ಥೆಗಳನ್ನು ಪ್ರೊಮೋಟ್ ಮಾಡುತ್ತಿತ್ತು. ಈಗ ವಿವಿಧ ಸರಕಾರಿ ಇಲಾಖೆಗಳಿಗೂ ನಿಗದಿತ ಗುರಿಯ ತಾಕೀತು ಮಾಡಿರುವಂತಿದೆ. ಆದ್ದರಿಂದ ತೋಟಗಾರಿಕಾ ಇಲಾಖೆಯಿಂದಲೂ ಇಂತಹ ಸಂಸ್ಥೆಗಳನ್ನು ಪ್ರೊಮೋಟ್ ಮಾಡಲಾಗುತ್ತಿದೆ. ಏನಿದು ರೈತ ಉತ್ಪಾದಕ ಸಂಸ್ಥೆಗಳು?

 ಹತ್ತಿಪ್ಪತ್ತು ರೈತರು ತಮ್ಮದೇ ಪುಟ್ಟ ಸಂಘ ರಚಿಸಿಕೊಂಡು ಅಂತಹ ಸಂಘಗಳೆಲ್ಲಾ ಒಟ್ಟು ಸೇರಿ ಒಂದು ಉತ್ಪಾದಕ ಸಂಸ್ಥೆಯನ್ನು ರಚಿಸುವುದು. ಅಂದಾಜು 300-500 ರೈತರು ಸೇರಿ ಪಾಲು ಬಂಡವಾಳ ಹಾಕಿ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುವ ವಿಧಾನ ಇದು. ತಮ್ಮ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಅದಕ್ಕೊಂದು ಬ್ರಾಂಡ್ ಹೆಸರು ಕೊಟ್ಟು ಗಮನ ಸೆಳೆಯುವಂತೆ ಮಾಡಿ ಮಾರಾಟ ಮಾಡುವುದೂ ಈ ಸಂಘಗಳ ತಂತ್ರೋಪಾಯಗಳಲ್ಲೊಂದು.

ಇದಕ್ಕೆ ನಬಾರ್ಡ್‌ನಿಂದ ಒಂದಷ್ಟು ನಿರ್ವಹಣಾ ವೆಚ್ಚದ ಸಹಾಯ ದೊರಕುತ್ತದೆ. ಮೂರರಿಂದ ಐದು ವರ್ಷಗಳವರೆಗೆ ಈ ಸಹಾಯ ದೊರಕುತ್ತದೆ. ಆ ವೇಳೆಗೆ ಈ ಸಂಸ್ಥೆಗಳು ದಕ್ಷವಾಗಿ ವ್ಯಾಪಾರ ವಹಿವಾಟು ಮಾಡಿ ತಮ್ಮ ಕಾಲ ಮೇಲೆ ತಾವೇ ನಿಲ್ಲುವಷ್ಟು ಸಶಕ್ತವಾಗಬೇಕು. ಅಂದರೆ ತನ್ನ ಸಿಬ್ಬಂದಿಯ ಸಂಬಳ ಸಾರಿಗೆಯಿಂದ ಹಿಡಿದು ವಹಿವಾಟಿಗೆ ಸಂಬಂಧಿಸಿದ ಖರ್ಚುವೆಚ್ಚಗಳನ್ನು ನಿಭಾಯಿಸುವಷ್ಟು ಒಟ್ಟು ವ್ಯಾಪಾರ ನಡೆಸಬೇಕು.

ಈಗಿರುವಂತೆ ಒಬ್ಬ ವೃತ್ತಿಪರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸಿಕೊಂಡು ರಥ ನಡೆಸಬೇಕು. ಈ ವ್ಯಕ್ತಿಯ ವೇತನ ಸಹಿತ ಇತರ ಸಣ್ಣ ಪುಟ್ಟ ವೆಚ್ಚ ಭರಿಸುವಷ್ಟು ಸಹಾಯಧನವನ್ನು ನಬಾರ್ಡ್ ನೀಡುತ್ತದೆ. ತಮ್ಮ ಸದಸ್ಯರು ಬೆಳೆಯುವ ಉತ್ಪನ್ನಗಳನ್ನು ಆಧಾರವಾಗಿಟ್ಟುಕೊಂಡು ಸಂಸ್ಕರಣಾ ಯಂತ್ರಗಳು ಮತ್ತಿತರ ಯಂತ್ರ/ಕಾರ್ಯಾಗಾರಗಳಿಗೂ ಸಹಾಯ ಧನ, ಸಾಲ ದೊರಕುತ್ತದೆ. ಇಂತಹ ಯಂತ್ರೋಪಕರಣಗಳ ಮೂಲಕ ಮೌಲ್ಯವರ್ಧನೆ ಮಾಡಲು ಬೇಕಾದ ತಾಂತ್ರಿಕ ಮಾರ್ಗದರ್ಶನವೂ ಲಭ್ಯವಿದೆ.

 ಇದೆಲ್ಲಾ ಬಲು ಉತ್ಸಾಹದಾಯಕವಾಗಿ ಕಾಣುವ ಸಂಗತಿಗಳು. ಕರ್ನಾಟಕದಲ್ಲಿ ನೂರಾರು ಇಂತಹ ಸಂಸ್ಥೆಗಳು ಸ್ಥಾಪನೆಯಾಗಿವೆ. ಆದರೆ ಇತ್ತೀಚಿನ ಸರಕಾರದ ಭರಪೂರ ಟಾರ್ಗೆಟ್ ಕಾರಣಕ್ಕೆ ಸ್ವತಃ ನಬಾರ್ಡ್‌ಗೂ ಇಂತಹ ಸಂಸ್ಥೆಗಳ ನಿಖರ ಮಾಹಿತಿ ಇಲ್ಲ ಅನ್ನಿಸುತ್ತೆ.

  ಪ್ರಸ್ತುತ ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ ಸುಮಾರು 7,500 ಇಂತಹ ಸಂಸ್ಥೆಗಳಿವೆ. ಇವುಗಳಲ್ಲಿ ಮುಕ್ಕಾಲು ಪಾಲು ಕಳೆದ ಮೂರು ವರ್ಷಗಳಲ್ಲಿ ಸ್ಥಾಪನೆಯಾದವು! ಇಂತಹ ಸಂಸ್ಥೆಗಳ ಪಾಲು ಬಂಡವಾಳದ ಮೇಲೆ ಅವುಗಳ ಶಕ್ತಿ ನಿರ್ಧಾರವಾಗುತ್ತದೆ. ಈ ಸಂಸ್ಥೆಗಳಲ್ಲಿ ಶೇ.85 ಸಂಸ್ಥೆಗಳ ಪಾಲು ಬಂಡವಾಳ ಹತ್ತು ಲಕ್ಷಕ್ಕೂ ಕಡಿಮೆ. ಒಟ್ಟಾರೆ ಈ ರೈತ ಉತ್ಪಾದಕ ಸಂಸ್ಥೆಗಳ ಪಾಲು ಬಂಡವಾಳ ಅಂದಾಜು ರೂ. 860 ಕೋಟಿ! ಆರ್ಥಿಕವಾಗಿ ಸಶಕ್ತವಾಗಿರುವ ಅಂದಾಜು ನೂರು ಕಂಪೆನಿಗಳ ಪಾಲು ಬಂಡವಾಳ ರೂ. 586 ಕೋಟಿ. ಅರ್ಥಾತ್ ಬಹುತೇಕ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ವ್ಯವಹಾರ ಮಾಡುವಷ್ಟು ಬಂಡವಾಳವೇ ಇಲ್ಲ! ಈಗಾಗಲೇ ಸುಮಾರು ಶೇ. 10 ಸಂಸ್ಥೆಗಳು ನಿದ್ರಾವಸ್ಥೆಗೆ ಹೋಗಿವೆ. ಅರ್ಥಾತ್ ಅವು ಕಾರ್ಯಚಟುವಟಿಕೆ ಮಾಡಲು ಸಾಧ್ಯವಾಗಿಲ್ಲ.

ಇನ್ನು ಶೇ. 80ರಷ್ಟು ಇಂತಹ ಸಂಸ್ಥೆಗಳು ಕೃಷಿ ಉತ್ಪನ್ನಗಳ ಮಾರಾಟದ ಸಂಸ್ಥೆಗಳು. ಇದು ಸದ್ಯದ ಸನ್ನಿವೇಶ. ಸಂಸ್ಥೆಗಳು ಹೇಗೆ ವಹಿವಾಟು ನಡೆಸುತ್ತವೆ? ಬಹುಪಾಲು ಕಂಪೆನಿಗಳು ಒಂದಷ್ಟು ಮೌಲ್ಯವರ್ಧನೆ ಮಾಡಿ ತಮ್ಮ ಬ್ರಾಂಡ್‌ನಲ್ಲಿ ಸ್ಥಳೀಯವಾಗಿ ಮಾರುತ್ತಿವೆ. ಆದರೆ ಇವಕ್ಕೆಲ್ಲಾ ತುಂಬಾ ದೊಡ್ಡ ಮಾರುಕಟ್ಟೆ ಇಲ್ಲ. ಸರಕಾರ ಇಂಥವನ್ನು ಹೇಗೆ ಕೈ ಹಿಡಿದು ನಡೆಸುತ್ತದೆ?

ಕರ್ನಾಟಕ ಸರಕಾರವೇ ಸಿರಿಧಾನ್ಯಗಳನ್ನು ‘ಬಿಗ್ ಬಾಸ್ಕೆಟ್’ ಎಂಬ ಕಂಪೆನಿಗೆ ಮಾರಿ ರೈತ ಸಂಸ್ಥೆಗಳು ಲಾಭ ಪಡೆಯುವಂತೆ ಸೂಚಿಸಿತ್ತು. ಅರ್ಥಾತ್ ಈ ಸಂಸ್ಥೆಗಳೆಲ್ಲಾ ರೈತರ ಉತ್ಪನ್ನವನ್ನು ಸಂಗ್ರಹಿಸಿ ಒಂದೆಡೆ ದಾಸ್ತಾನು ಮಾಡಿ ದೊಡ್ಡ ಕಂಪೆನಿಗಳಿಗೆ ಒದಗಿಸುವ ಪಾತ್ರ ವಹಿಸುತ್ತವೆ. ಇದನ್ನು ಇತ್ತೀಚೆಗೆ ಮೋದಿ ಸರಕಾರ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆ ಅಧಿಕೃತಗೊಳಿಸುತ್ತದೆ. ಈ ಕಾಯ್ದೆ ಎಷ್ಟು ಜಾಣವಾಗಿ ಪದಗಳನ್ನು ನಿರ್ವಚಿಸಿದೆಯೆಂದರೆ, ರೈತ ಎಂಬುದನ್ನು ನಿರ್ವಚಿಸುವಾಗ ರೈತ ಉತ್ಪಾದಕ ಸಂಸ್ಥೆಗಳೂ ಇದರಲ್ಲಿ ಸೇರುತ್ತವೆ ಎನ್ನುತ್ತದೆ.

ಅಂದರೆ ಈ ರೈತ ಉತ್ಪಾದಕ ಸಂಸ್ಥೆಗಳು ಕಂಪೆನಿಗಳೊಂದಿಗೆ ‘ಕೃಷಿ ತಿದ್ದುಪಡಿ ಕಾಯ್ದೆ’ ಪ್ರಕಾರ ಒಪ್ಪಂದ ಮಾಡಿಕೊಳ್ಳಬಹುದು. ಈ ವಹಿವಾಟು ಮೂಲಭೂತ ಉತ್ಪಾದನೆಯ ಮೇಲುಸ್ತುವಾರಿ ಬಗ್ಗೆ ಹೇಳುವುದಿಲ್ಲ. ಅಂತಿಮ ಉತ್ಪನ್ನವನ್ನು ಯಾವ ಬೆಲೆಗೆ ಕೊಳ್ಳುವುದು ಎಂಬುದರ ಬಗ್ಗೆ ಪೂರ್ವ ನಿರ್ಧರಿತವಾಗುತ್ತದೆ. ಈಗ ಕಳೆದ ಮೂರು ವರ್ಷಗಳಲ್ಲಿ ಮೋದಿ ಸರಕಾರ ಈ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸುವ ಧಾವಂತ ಯಾಕೆ ತೋರಿತು ಎಂಬುದು ಗೊತ್ತಾಯಿತಷ್ಟೇ.. ಇದರ ಮುಂಗೋಳಿಯಾಗಿ ಮೊನ್ನೆ ರಿಲಯನ್ಸ್ ಕಂಪೆನಿ ರಾಯಚೂರಿನ ರೈತ ಉತ್ಪಾದಕ ಸಂಸ್ಥೆಯಿಂದ ಸೋನಾ ಮಸೂರಿ ಭತ್ತವನ್ನು ಖರೀದಿಸಿದ ವರದಿ ಬಂತು. ಕೇವಲ ನೂರು ಟನ್ ಖರೀದಿಸಿದ್ದನ್ನು ರಾಯಚೂರಿನ ಸಮಸ್ತ ಭತ್ತವನ್ನೂ ಖರೀದಿಸಿದೆ ಎಂಬ ಮಟ್ಟಿಗೆ ಪ್ರಚಾರ ಮಾಡಿದ್ದೂ ಆಯಿತು(ರಾಯಚೂರಿನಲ್ಲಿ ಐದು ಲಕ್ಷ ಟನ್ ಭತ್ತ ಬೆಳೆಯಲಾಗುತ್ತದೆ).

ಯಾವ ಕಂಪೆನಿಯೂ ಒಬ್ಬೊಬ್ಬ ರೈತನ ಜತೆ ಒಪ್ಪಂದ ಮಾಡಿಕೊಂಡು ಅವನ ಮನೆ ಬಾಗಿಲಿಗೆ ಹೋಗಿ ಅವನಿಂದ ಮಾಲು ಸಂಗ್ರಹಿಸುವ ರಗಳೆಗೆ ಹೋಗುವುದಿಲ್ಲ. ಈ ಕಾನೂನಿನಲ್ಲಿ ಇನ್ನೊಂದು ಜಾಣ ಕಲಮು ಇದೆ! ಎಪಿಎಂಸಿಯಲ್ಲಿ ಏಜೆಂಟು/ದಳ್ಳಾಳಿಗಳ ಕಾರುಬಾರು ನಡೆಯುತ್ತಿದೆ. ಈ ಮಂದಿ ಅಷ್ಟಿಷ್ಟು ಉತ್ಪನ್ನಗಳನ್ನು ಕ್ರೋಡೀಕರಿಸಿ ದೊಡ್ಡ ವ್ಯಾಪಾರಿಗೆ ಬೇಕಾದಷ್ಟು ಸಂಗ್ರಹಿಸಿಕೊಡುವ ಸೇವೆ ಒದಗಿಸುತ್ತಾರೆ. ಇದೇ ಪಾತ್ರವನ್ನು ಈ ಹೊಸ ಕಾಯ್ದೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳು ಮಾಡಲು ‘ಅವಕಾಶ’ ಕಲ್ಪಿಸಲಾಗಿದೆ!!

ಈ ಕೊಳ್ಳುವ ಕಂಪೆನಿಗಳನ್ನು ಈ ಕಾಯ್ದೆ ‘ಪ್ರಾಯೋಜಕ’ ಎಂಬ ಹೆಸರಿನಲ್ಲಿ ಕರೆಯುತ್ತದೆ. ಮಹಾ ಉಪಕಾರ ಮಾಡುವ ಕೆಲಸ ಇದು!

 ಗಮನಿಸಬೇಕಾದ್ದು:  ಈ ರೈತ ಉತ್ಪಾದಕ ಸಂಸ್ಥೆಗಳು ರೈತರ ಪ್ರತಿನಿಧಿಯಾಗಿ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಒದಗಿಸುವ ನೇರ ವ್ಯವಹಾರದ ಏಜೆನ್ಸಿಯಾಗುವ ಬದಲು ಈ ಕರಾರು ಕೃಷಿಯ ಪ್ರಾಯೋಜಕ ಕಂಪೆನಿಗಳ ಮಾಲು ಕ್ರೋಡೀಕರಣದ ಏಜೆಂಟರಾಗಿ ಕೆಲಸ ಮಾಡಬಹುದು. ಅಂದರೆ ಕಂಪೆನಿಗಳನ್ನು ಎದುರಿಸುವ ರೈತ ನಾಯಕತ್ವ ವಹಿಸುವ ಬದಲು ಕಂಪೆನಿಯ ಪರವಾಗಿ ಮಧ್ಯವರ್ತಿ ಪಾತ್ರ ವಹಿಸುವಲ್ಲಿಗೆ ಪರ್ಯಾವಸಾನಗೊಳ್ಳಬಹುದು.

ಈ ಅಪಾಯದ ಬಗ್ಗೆ ಇಂತಹ ಸಂಸ್ಥೆಗಳನ್ನು ಸ್ಥಾಪಿಸುವ ಉತ್ಸಾಹ ತೋರಿಸುವ/ ಸ್ಥಾಪಿಸಿ ಅದನ್ನು ಕ್ರಿಯಾಶೀಲಗೊಳಿಸುವ ರೈತ ನಾಯಕರಲ್ಲಿ ಹೇಳಬೇಕಾಗಿದೆ. ಇನ್ನೊಂದು ಅಂಶ ಈ ರೈತ ಉತ್ಪಾದಕ ಸಂಸ್ಥೆಗಳು ಸಾಮ್ಯತೆ ಉಳ್ಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ ಮಾರುವ ವೇಳೆಗೆ ಬಹುತೇಕ ತಮ್ಮ ಸಹೋದರ ಸಂಸ್ಥೆಗಳೊಂದಿಗೇ ಸ್ಪರ್ಧೆಗಿಳಿಯುವ ಅಪಾಯ ದಟ್ಟವಾಗಿದೆ. ಅಂದರೆ ಮಂಡ್ಯ ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆ ಮೈಸೂರಿನ ಇಂತಹದ್ದೇ ಸಂಸ್ಥೆಯೊಂದಿಗೆ ಪೈಪೋಟಿ ನಡೆಸುವುದು ಇತ್ಯಾದಿ. ಈ ಸಂಸ್ಥೆಗಳು ಒಟ್ಟಾಗಿ ಸ್ಪರ್ಧೆಗಿಳಿಯಬೇಕಾದದ್ದು ದೊಡ್ಡ ಕಂಪೆನಿಗಳ ವಿರುದ್ಧ. ಜಾಹೀರಾತಿನ ಈ ಕಣ್ಣು ಕೋರೈಸುವ ಪ್ರಚಾರದ ಹಿಂದೆ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ತಳ್ಳುವ ಈ ಕಂಪೆನಿಗಳನ್ನು ಗುಣ ಮಟ್ಟದ, ಆದರೆ ಪ್ರಚಾರದ ರಂಗಿಲ್ಲದೇ ಎದುರಿಸುವ ಸಂಘಟಿತ ಪ್ರಯತ್ನ ಆಗಬೇಕಿದೆ.

ಇಂತಹ ರೈತ ಉತ್ಪಾದಕ ಸಂಸ್ಥೆಗಳು ಕೆ.ಎಂ.ಎಫ್. ಮಾದರಿಯಲ್ಲಿ ಒಕ್ಕೂಟ ಮಾಡಿಕೊಂಡು ಇಡೀ ಸಾಂಸ್ಥಿಕ ಶಕ್ತಿಯನ್ನು ಸದೃಢಗೊಳಿಸಿಕೊಳ್ಳುವತ್ತ ಯೋಚಿಸಬೇಕಿದೆ.

ಈ ಸಂಸ್ಥೆಗಳ ವೈವಿಧ್ಯಮಯ ಉತ್ಪನ್ನಗಳನ್ನು ಉಳಿಸಿಕೊಂಡೂ ಅವುಗಳ ಉತ್ಪಾದನೆಯಲ್ಲಿ ಏಕರೂಪಿ ತಂತ್ರಿಕ ಮಾನದಂಡಗಳನ್ನು ಅಳವಡಿಸಿಕೊಂಡು ವಿಸ್ತಾರವಾದ ಉತ್ಪನ್ನಗಳ ಆಯ್ಕೆಯನ್ನು ಒಂದೇ ಸೂರಿನಡಿ ನೀಡಬಹುದಾಗಿದೆ.

ಆದರೆ ಸ್ವತಃ ಸರಕಾರ ಇಂತಹ ದೃಢ ರೈತ ಸ್ವಾಯತ್ತತೆಯನ್ನು ಬಯಸುವುದಿಲ್ಲ!! ಕೈಮಗ್ಗ ಮತ್ತಿತರ ಕ್ಷೇತ್ರಗಳಲ್ಲಿ ಎರಡನೇ ಹಂತದ ಉತ್ಪನ್ನವನ್ನು (ಉದಾ: ನೇಯ್ದ ಬಟ್ಟೆಯನ್ನು ಉಡುಗೆಯಾಗಿ ಮೌಲ್ಯವರ್ಧನೆ ಮಾಡದೆ ಸಗಟಾಗಿ ಮಾರುವುದು) ರಿಸ್ಕು ತೆಗೆದುಕೊಳ್ಳದೇ ಮಧ್ಯಮ ಹಂತದಲ್ಲೇ ಸಗಟಾಗಿ ಮಾರುವ ಒಂದು ಉಪಾಯ ಚಾಲ್ತಿಯಲ್ಲಿದೆ. ಇದು ಹೂಡಿದ ಬಂಡವಾಳ ಕ್ಷಿಪ್ರವಾಗಿ ವಾಪಸ್ ಪಡೆಯಲು ಸಹಾಯ ಮಾಡುತ್ತದೆ. ಆದರೆ ಅಂತಿಮ ಉತ್ಪನ್ನ ತರಬಹುದಾದ ದೊಡ್ಡ ಲಾಭವನ್ನು ಇನ್ನೊಂದು ಕಂಪೆನಿಗೆ ಬಿಟ್ಟುಕೊಟ್ಟು ಈ ರಿಸ್ಕನ್ನು ನಿರ್ವಹಿಸುವ ಕ್ರಮ ಇದೆ. ರೈತ ಉತ್ಪಾದಕ ಸಂಸ್ಥೆಗಳೂ ಹೀಗೆ ಭತ್ತ, ರಾಗಿ, ಬೇಳೆ ಮಾರಿ ನಿಟ್ಟುಸಿರು ಬಿಡುವ ಸಾಧ್ಯತೆ ಇದೆ. ಹಾಗಾದಲ್ಲಿ ಸರಕಾರ ತಂದಿರುವ ಕಾನೂನು ಯಶಸ್ವಿಯಾದಂತೆ ಎಂದು ಕಂಪೆನಿಗಳೂ, ಈ ಮಾರ್ಕೆಟ್ ಲಿಂಕೇಜ್ ಎಂಬ ಪದಪುಂಜ ಜಾರಿಗೆ ತಂದಿರುವ ಜಾಗತೀಕರಣದ ಆರ್ಥಿಕ ಯೋಜಕರೂ ಹರ್ಷ ಪಡುತ್ತಾರೆ.

ತಾನಾಗಿ ನೊಗಕ್ಕೆ ಕತ್ತೊಡ್ಡುವ ಬುದ್ಧಿಶಾಲಿ ಎತ್ತೊಂದರ ವೀಡಿಯೊ ನೋಡಿ ಚಕಿತಗೊಂಡಿದ್ದೆ. ಆದರೆ ಈ ಕಾನೂನಿನ ಒಳ ಹೆಣಿಗೆ ನೋಡಿದರೆ ರೈತ ದೇಹದ ಎತ್ತುಗಳು ದೇಶಾದ್ಯಂತ ಗೋಚರಿಸಲಿವೆ.

(ಅಮೃತಭೂಮಿಯಲ್ಲಿ ಪ್ರೊ.ಎಂ.ಡಿ.ಎನ್. 85ನೇ ಜನ್ಮದಿನ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸದ ಒಂದು ಭಾಗದ ಸುಧಾರಿತ ಲೇಖನ)

Writer - ಕೆ. ಪಿ. ಸುರೇಶ

contributor

Editor - ಕೆ. ಪಿ. ಸುರೇಶ

contributor

Similar News