ಕೊರೋನ ಭೀತಿ; ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ: ಸಚಿವ ಡಾ.ಕೆ.ಸುಧಾಕರ್

Update: 2021-02-19 09:33 GMT

ಚಿಕ್ಕಬಳ್ಳಾಪುರ : ಕೇರಳ, ಮಹಾರಾಷ್ಟ್ರದಲ್ಲಿ ಕೊರೋನ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ, ರಾಜ್ಯದ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ನೂತನ ವಿದ್ಯಾರ್ಥಿನಿಲಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ, ಮಹಾರಾಷ್ಟ್ರದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಲಾಗಿದೆ. ಇನ್ನಷ್ಟು ಕ್ರಮ ಕೈಗೊಳ್ಳುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಉಚಿತವಾಗಿ ಲಸಿಕೆ ನೀಡುತ್ತಿದ್ದಾರೆ. ಇದನ್ನು ಸದುಪಯೋಪಡಿಸಿಕೊಳ್ಳಬೇಕು. ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮ ಪಾಲಿಸಬೇಕು ಎಂದರು.

ನಂತರ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕಳೆದ ಒಂದು ವರ್ಷದಲ್ಲಿ ಬೇರೆ ರಾಜ್ಯಗಳಂತೆ ಸರ್ಕಾರಿ ನೌಕರರಿಗೆ ವೇತನ ಕಡಿತ, ಬಡ್ತಿ ಕಡಿತ ಮಾಡಿಲ್ಲ. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡರೂ ವೇತನ ಕಡಿತಗೊಳಿಸಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಅನೇಕ ಇಲಾಖೆಗಳ ನೌಕರರು ಸರ್ಕಾರದೊಂದಿಗೆ ಕೈ ಜೋಡಿಸಿ ಸೇವೆ ಮಾಡಿದ್ದಾರೆ. ಇದರಿಂದಾಗಿ ಕೋವಿಡ್ ಅನ್ನು ಯಶಸ್ವಿಯಾಗಿ ನಿಯಂತ್ರಿಸಲು ಸಾಧ್ಯವಾಗಿದೆ ಎಂದರು.

ದೈಹಿಕ ಆರೋಗ್ಯ ಚೆನ್ನಾಗಿದ್ದರೆ ಉತ್ತಮವಾಗಿ ಕೆಲಸ ಮಾಡಬಹುದು. ವರ್ಷದಲ್ಲಿ ಒಮ್ಮೆಯಾದರೂ ನೌಕರರು ಕ್ರೀಡೆ, ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ ಉತ್ತೇಜನಕ್ಕೆ ಜಿಲ್ಲೆಯಲ್ಲಿ ಕ್ರೀಡಾ ವಿಲೇಜ್ ಆರಂಭಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News