ಅನಗತ್ಯ ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಗಮ ಆಡಳಿತಕ್ಕೆ ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

Update: 2021-02-19 12:37 GMT

ಬೆಂಗಳೂರು, ಫೆ. 19: ‘ಸಹಕಾರ ಇಲಾಖೆಯಲ್ಲಿ ಅನಗತ್ಯ ತೊಡಕನ್ನುಂಟು ಮಾಡುವ ಕಾನೂನುಗಳು, ಸುಗಮ ಆಡಳಿತಕ್ಕೆ ತೊಡಕಾಗುವ ಕಾಯ್ದೆಗಳಿದ್ದರೆ, ಇಲಾಖೆ ಗಮನಕ್ಕೆ ತಂದರೆ ಅದನ್ನು ಈ ಬಾರಿ ಸದನದಲ್ಲಿ ಚರ್ಚೆಗೆ ತಂದು ತಿದ್ದುಪಡಿ ಮಾಡಲಾಗುವುದು' ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರು ನಗರದ ಕೆ.ಆರ್.ರಸ್ತೆ ಬಳಿಯ ಗಾಯನ ಸಮಾಜದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಲ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಕೆಲವು ತೊಡಕುಗಳು ನನ್ನ ಗಮನಕ್ಕೆ ಬಂದಿದ್ದು, ಅವುಗಳ ತಿದ್ದುಪಡಿಗೆ ಕ್ರಮವಹಿಸಲಾಗಿದೆ ಎಂದರು.

ಉದ್ಯೋಗ ಸೃಷ್ಟಿ: 21 ಡಿಸಿಸಿ ಬ್ಯಾಂಕ್‍ಗಳಿಗೆ ಸರಕಾರದ ಶೇರು ಬಂಡವಾಳ ಹೂಡಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಪ್ರತಿ ಬ್ಯಾಂಕ್‍ಗಳಿಗೆ ತಲಾ 10 ಲಕ್ಷ ರೂ.ಹೂಡಿಕೆ ಮಾಡುವ ಚಿಂತನೆ ಇದ್ದು, ಶೀಘ್ರದಲ್ಲಿ ನಿರ್ಧಾರ ತಿಳಿಸಲಾಗುವುದು ಎಂದ ಅವರು, ಹಾಲು ಒಕ್ಕೂಟ ಸೇರಿದಂತೆ ಹಲವು ಸಹಕಾರ ಇಲಾಖೆಯ ಅಂಗ ಸಂಸ್ಥೆಗಳಿಂದ ಕೋವಿಡ್ ಸಂದರ್ಭದಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ ಮಾಡಬೇಕೆಂದು ಆದೇಶ ನೀಡಲಾಗಿದೆ. ಈಗ ಬೆಂಗಳೂರು ಹಾಲು ಒಕ್ಕೂಟದಿಂದ 279 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿ ಹಲವು ಕಡೆ ಒಂದೊಂದಾಗಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗುತ್ತದೆ ಎಂದರು.

ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಲ ಕೊಡಬೇಕು. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಕಾರ ಕೊಡಬೇಕು ಎಂಬ ನಿಟ್ಟಿನಲ್ಲಿ ಸರಕಾರ ಸುತ್ತೋಲೆಯನ್ನು ಹೊರಡಿಸಿತ್ತು. ಎಲ್ಲ ದೃಷ್ಟಿಯನ್ನು ಇಟ್ಟುಕೊಂಡು ನಾನು ಎಲ್ಲ 21 ಡಿಸಿಸಿ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಅವರು ತಿಳಿಸಿದರು.

ಈ ಬಾರಿ 24.50 ಲಕ್ಷ ರೈತರಿಗೆ 15,300 ಕೋಟಿ ರೂ.ಸಾಲ ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಈವರೆಗೆ 22,02,931 ಲಕ್ಷ ರೈತರಿಗೆ 13,739 ಕೋಟಿ ರೂ.ಸಾಲ ನೀಡಿದ್ದೇವೆ. ಮಾ.31ರೊಳಗೆ ನೂರಕ್ಕೆ ನೂರು ಗುರಿ ತಲುಪುವೆವು ಎಂದು ಸೋಮಶೇಖರ್ ತಿಳಿಸಿದರು.

20 ಲಕ್ಷ ಕೋಟಿ ರೂ.ಸಾಲ ವಿತರಣೆ ಗುರಿ: 2021-22ನೆ ಸಾಲಿಗೆ 28ಲಕ್ಷ ರೈತರಿಗೆ 20 ಲಕ್ಷ ಕೋಟಿ ರೂ.ಅಲ್ಪಾವಧಿ, ಮಧ್ಯಮಾವಧಿ ಸೇರಿದಂತೆ ಬೆಳೆ ಸಾಲ ವಿತರಣೆ ಗುರಿಯನ್ನು ಸಿಎಂ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕಾಗಿ ನಬಾರ್ಡ್‍ಗೆ ಮನವಿ ಸಲ್ಲಿಸಲಾಗಿದೆ. ಇದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರದ ಯೋಜನೆಯಡಿ ಚಾಲನೆ ನೀಡಲಾಗಿರುವ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಸಿಎಂ ಚಾಲನೆ ನೀಡಿದರು. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ 39,300 ಕೋಟಿ ರೂ. ಸಾಲ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಎಲ್ಲ ಕಡೆ ಈಗ 2ನೆ ಹಂತದಲ್ಲಿ ಸಾಲ ವಿತರಣೆ ಮಾಡುತ್ತಿರುವುದು ಸಂತಸದ ವಿಚಾರ. ಬಿಡಿಸಿಸಿ ವತಿಯಿಂದ ಈ ಕಾರ್ಯಕ್ರಮದಲ್ಲಿ ಸುಮಾರು 45 ಕೋಟಿ ರೂ.ಸಾಲವನ್ನು ನೀಡಲಾಗುತ್ತಿದೆ ಎಂದರು.

ಪಂಚಾಯತ್ ಗೆ ಒಂದೊಂದು ಫ್ಯಾಕ್ಸ್: ಸರಕಾರದ ಯೋಜನೆಗಳು ಜನರ ಬಳಿಗೆ ಹೋಗಬೇಕು. ಪ್ರತಿ ಹಳ್ಳಿಗೂ ಮುಟ್ಟಬೇಕೆಂಬ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಪಂಚಾಯತ್ ಗೆ ಒಂದು ಫ್ಯಾಕ್ಸ್ ಸ್ಥಾಪನೆಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಈಗಾಗಲೇ ಪೈಲಟ್ ಯೋಜನೆಗೆ ತುಮಕೂರಿನಲ್ಲಿ ಸ್ಥಾಪಿಸಲಾಗಿದ್ದು, ಅಗತ್ಯ ಇರುವ ಕಡೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಸಿಎಂ ಶೀಘ್ರದಲ್ಲಿ ನಿರ್ಧಾರವನ್ನು ಕೈಗೊಂಡು ಘೋಷಣೆ ಮಾಡಲಿದ್ದಾರೆಂದು ಸೋಮಶೇಖರ್ ತಿಳಿಸಿದರು.

ಜನರ ನಂಬಿಕೆ ಪಡೆಯಿರಿ: ಸಹಕಾರ ಸಂಸ್ಥೆಗಳ ಮೇಲೆ ಜನರು ನಂಬಿಕೆ ಇಟ್ಟು ಕೋಟ್ಯಂತರ ರೂ.ಬಂಡವಾಳವನ್ನು ಹೂಡಿರುತ್ತಾರೆ, ಠೇವಣಿ ಇಟ್ಟಿರುತ್ತಾರೆ. ಅವರ ನಂಬಿಕೆಗೆ ಯಾವತ್ತೂ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಕೆಲವು ಡಿಸಿಸಿ ಬ್ಯಾಂಕ್‍ಗಳಲ್ಲಿ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ, ಸಹಕಾರ ಇಲಾಖೆ ಅದನ್ನು ತಿರಸ್ಕರಿಸಿದರೂ ಅಲ್ಲದೆ ಆಡಳಿತ ಮಂಡಳಿಯಲ್ಲಿಯೂ ಚರ್ಚೆಗೂ ತಾರದೆ ಸಕ್ಕರೆ ಕಾರ್ಖಾನೆಗಳಿಗೆ ಸಾಲಗಳನ್ನು ನೀಡಿ ಕೋಟ್ಯಂತರ ರೂ.ಅವ್ಯವಹಾರವನ್ನು ನಡೆಸಲಾಗಿರುತ್ತದೆ. ಇನ್ನೂ ಕೆಲವು ಕಡೆ ನಕಲಿ ಚಿನ್ನವನ್ನು ಇಟ್ಟು ಸಾಲವನ್ನು ಕೊಟ್ಟಿರುತ್ತಾರೆ. ಇಂಥ ಅವ್ಯವಹಾರಗಳು ನಿಲ್ಲಬೇಕು. ಇದಕ್ಕಾಗಿ 29ಸಿ' ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಾವು ಮುಂದಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News