ಕೊರೋನ ಮಾರ್ಗಸೂಚಿ ಪಾಲಿಸದಿದ್ದರೆ ಲಾಕ್‍ಡೌನ್ ಜಾರಿ ಭೀತಿ: ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್

Update: 2021-02-19 13:24 GMT

ಬೆಂಗಳೂರು, ಫೆ.19: ಕೋವಿಡ್-19 ಸಂಬಂಧ ಮಾರ್ಗಸೂಚಿ ಪಾಲನೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಜಾರಿಯಾಗುವ ಭೀತಿಯೂ ಇದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ಶುಕ್ರವಾರ ನಗರದ ಪುರಭವನದ ಸಭಾಂಗಣದಲ್ಲಿ ಕೋವಿಡ್-19 ಸೋಂಕು ಸಂಬಂಧ ಪಾಲಿಕೆಯ ಎಲ್ಲ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನೆರೆಯ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲೂ ಕೋವಿಡ್ ಸೋಂಕಿನ ಪ್ರಕರಣಗಳು ಗಣನೀಯ ಏರಿಕೆ ಕಂಡಿವೆ. ಕರ್ನಾಟಕ ಈ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನೆಲೆ ಇಲ್ಲೂ ಸಹ ಕೋವಿಡ್ ಪ್ರಕರಣಗಳು ಏರಿಕೆ ಆಗುವ ಆತಂಕ ಇದೆ. ಹಾಗಾಗಿ, ನಾವು ಉದಾಸೀನ, ನಿರ್ಲಕ್ಷ್ಯ ಮನೋಭಾವ ಬಿಟ್ಟು ಎಚ್ಚರವಹಿಸಬೇಕಾಗಿದೆ ಎಂದು ತಿಳಿಸಿದರು.

ಆಂಧ್ರದ ಅಮರಾವತಿ, ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಲಾಕ್‍ಡೌನ್ ಪ್ರಕ್ರಿಯೆಗೆ ಮತ್ತೆ ಘೋಷಣೆ ಮಾಡಲಾಗಿದೆ. ಇದನ್ನು ನಾವು ಎಚ್ಚರಿಕವೆಂದು ಪರಿಗಣಿಸಿ, ಮಾರ್ಗಸೂಚಿ ಪಾಲನೆಗೆ ಮುಂದಾಗಬೇಕು. ಇಲ್ಲದಿದ್ದರೆ, ನಮ್ಮ ರಾಜ್ಯದಲ್ಲೂ ಲಾಕ್‍ಡೌನ್ ಸಂಭವ ಇದೆ ಎಂದು ಆಯುಕ್ತರು ನುಡಿದರು.

ಈ ಹಿಂದೆ ನಾವು ಯುಕೆ ಕೊರೋನ ವೈರಸ್ ಅನ್ನು ಎದುರಿಸಿದ್ದೇವೆ. ಆದರೆ, ಇದೀಗ ಆಫ್ರಿಕಾ ಬ್ರೆಜಿಲ್ ವೈರಸ್ ಗುಣಲಕ್ಷಣಗಳು ಭಾರತದಲ್ಲಿ ಕಂಡು ಬಂದಿದೆ. ಹಾಗಾಗಿ, ರಾಜ್ಯದಲ್ಲಿ ಯಾವುದೇ ಸೋಂಕಿತನನ್ನು ಪರೀಕ್ಷೆಗೆ ಒಳಪಡಿಸಿದಾಗ ಆತನ ಸೀಟಿ ವ್ಯಾಲು ಪ್ರಮಾಣ 20ಕ್ಕಿಂತ ಕಡಿಮೆ ಇದ್ದರೆ, ತುರ್ತು ನಿಮ್ಹಾನ್ಸ್ ಸಂಶೋಧನಾ ಕೇಂದ್ರಕ್ಕೆ ರವಾನೆ ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ಲಸಿಕೆ ಸಂಬಂಧ ಮುಂದಿನ ಮಾರ್ಚ್ ತಿಂಗಳಿನಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನ ಕೈಗೆತ್ತಿಕೊಳ್ಳುತ್ತಿದ್ದು, ಇದರಲ್ಲಿ ಹೆಚ್ಚಾಗಿ ಕೊಳಗೇರಿ ಪ್ರದೇಶ ಮತ್ತು ಬಡಜನರಿಗೆ ಆದ್ಯತೆ ನೀಡಲಾಗುವುದು ಎಂದ ಅವರು, ಮೂರನೇ ಹಂತದ ಲಸಿಕೆಯಲ್ಲಿ 50 ವರ್ಷ ಮೇಲ್ಪಟ್ಟ, ಹಾಗೂ ಇದಕ್ಕಿಂತ ಕೆಲ ವಯಸ್ಸಿನಲ್ಲಿ ಕೋವಿಡ್‍ಗೆ ಗುರಿಯಾಗಿದ್ದ ವ್ಯಕ್ತಿಗಳನ್ನು ಗುರುತಿಸಿ ಲಸಿಕೆ ನೀಡಲಾಗುವುದು ಎಂದರು.

ಸಭೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತ(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News