ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ: ಆಸ್ತಿ ಹಾನಿ ಕುರಿತು ಸಂತ್ರಸ್ತರು ಅರ್ಜಿ ಸಲ್ಲಿಸಲು ಸೂಚನೆ

Update: 2021-02-19 14:13 GMT

ಬೆಂಗಳೂರು, ಫೆ.19: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಾರ್ವಜನಿಕ ಮತ್ತು ಸರಕಾರಿ ಆಸ್ತಿಗಳ ಹಾನಿ ಕುರಿತು ಸಂತ್ರಸ್ತರು ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಹೇಳಿದ್ದಾರೆ.

ಶುಕ್ರವಾರ ನಗರದ ಬಾಲಬ್ರೂಯಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಲಭೆಯಲ್ಲಿ ಉಂಟಾಗಿರುವ ಸಾರ್ವಜನಿಕ ಮತ್ತು ಸರಕಾರಿ ಆಸ್ತಿಗಳ ಹಾನಿಯನ್ನು ಅಂದಾಜಿಸಿ, ಪರಿಹಾರ ವಿತರಣೆ ಕುರಿತು ನಿರ್ಧಾರ ಕೈಗೊಳ್ಳಲು ತನಿಖಾ ಆಯೋಗ ನೇಮಿಸಿ ಹೈಕೋರ್ಟ್ ಆದೇಶದ ಅನ್ವಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಪರಿಹಾರ ಸಂಬಂಧ ಈಗಾಗಲೇ ಪತ್ರಿಕೆ, ಬಿತ್ತಿಪತ್ರ ಮೂಲಕ ಹಾನಿ ಬಗ್ಗೆ ಪ್ರಚಾರ ಮಾಡಲಾಗಿದೆ. ಆದರೆ, ಈವರೆಗೆ ನಮಗೆ ಕೇವಲ ಮೂರು ಅರ್ಜಿಗಳು ಮಾತ್ರ ಬಂದಿವೆ. ಗಲಭೆಯಲ್ಲಿ ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾದ ಬಗ್ಗೆ ಗೊತ್ತಿದೆ. ಸರಕಾರಿ ಮತ್ತು ಖಾಸಗಿ ಆಸ್ತಿ ಹಾನಿಯಾಗಿದೆ. ಆದರೆ, ಈವರೆಗೆ ಆಯೋಗಕ್ಕೆ ಮೂರು ದೂರು ಬಂದಿರುವುದು ಬೇಸರದ ಸಂಗತಿ ಎಂದು ಹೇಳಿದರು.

ನಾವು ನಷ್ಟ ಆದವರ ಬಗ್ಗೆ ಮಾಹಿತಿ ಕಲೆ ಹಾಕಿ ಎಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ ಎಂಬ ಬಗ್ಗೆ ವರದಿ ಸಿದ್ಧಪಡಿಸಿ ಹೈಕೋರ್ಟ್ ಗೆ ಮಾಹಿತಿ ನೀಡಬೇಕು ಎಂದ ಅವರು, ನಷ್ಟಕ್ಕೆ ಕಾರಣೀಭೂತರಾದವರನ್ನು ಗುರುತಿಸಿ ಅವರ ಹೆಸರುಗಳ ಅಥವಾ ಸಂಘಗಳ ವರದಿ ನೀಡಬೇಕು. ಬಳಿಕ ಹೈಕೋರ್ಟ್ ಆದೇಶದಂತೆ ನಷ್ಟ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರು ಅರ್ಜಿ ಸಲ್ಲಿಸಿದ ಬಳಿಕ ನಷ್ಟದ ಬಗ್ಗೆ ಸ್ಥಳಕ್ಕೆ ಬೇಟಿ ನೀಡಿ ಮೌಲ್ಯಮಾಪನ ಮಾಡಬೇಕು. ಅಲ್ಲದೆ ಫೆ.28ರವರೆಗೆ ಅರ್ಜಿ ಸಲ್ಲಿಸಲು ಗಡುವು ನೀಡಲಾಗಿದ್ದು, ಸಂತ್ರಸ್ತರು ಅರ್ಜಿಗೆ ಮಂದಾಗಿ ಎಂದು ಸಲಹೆ ನೀಡಿದರು.

ಆಯೋಗದ ಮೂಲ ಉದ್ದೇಶ ಯಾವುದೇ ಗಲಭೆ, ಪ್ರತಿಭಟನೆ ವೇಳೆ ಆಸ್ತಿ ಪಾಸ್ತಿ ಹಾನಿಯಾದರೆ ಅದಕ್ಕೆ ಕಾರಣರಾದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಇಂಥ ಗಲಭೆಗಳಿಗೆ ಅವಕಾಶ ನೀಡಬಾರದು ಎಂದಾಗಿದೆ. ಅಲ್ಲದೆ, ಪ್ರಮುಖವಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಇನ್ನೂ ಹಾನಿ ಬಗ್ಗೆ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದರು.

ನಾನು ಸ್ಥಳ ಪರಿಶೀಲನೆ ನಡೆಸಿದ ವೇಳೆ ಅಖಂಡ ಅವರೇ ಭೇಟಿಯಾಗಿ ನಾನು ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ನಮ್ಮ ಅಕ್ಕಪಕ್ಕ ನಿವಾಸಿಗಳ ಆಸ್ತಿಪಾಸ್ತಿ ಹಾನಿಯಾಗಿದೆ ಎಲ್ಲ ಒಟ್ಟಿಗೆ ಕೊಡುತ್ತೇವೆ ಎಂದಿದ್ದರು. ಸದ್ಯ ಪೊಲೀಸ್ ಠಾಣೆಗಳಿಗೆ ಹಾನಿ ಬಗ್ಗೆ ಇನ್ನೂ ಅರ್ಜಿ ಬಂದಿಲ್ಲ. ಅವರ ಬಳಿ ಎಲ್ಲ ಮಾಹಿತಿ ಇದೆ ಎಂದು ಕೆಂಪಣ್ಣ ತಿಳಿಸಿದರು.

ಅಖಂಡ ಶ್ರೀನಿವಾಸಮೂರ್ತಿ ಇನ್ನೂ ಅರ್ಜಿ ಸಲ್ಲಿಸಿಲ್ಲ

‘ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಾರ್ವಜನಿಕ ಮತ್ತು ಸರಕಾರಿ ಆಸ್ತಿಗಳ ಹಾನಿ ಕುರಿತು ಸಂತ್ರಸ್ತರು ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಹಾನಿಯಾಗಿದೆ. ಜತೆಗೆ ಅವರಿಗೆ ಎಲ್ಲ ಮಾಹಿತಿ ಇದ್ದರು ಇನ್ನೂ ಅರ್ಜಿ ಸಲ್ಲಿಸಿಲ್ಲ.’

-ಎಚ್.ಎಸ್.ಕೆಂಪಣ್ಣ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News