ಉನ್ನಾವೋ ಪ್ರಕರಣ: ನೀರಿನಲ್ಲಿ ಕೀಟನಾಶಕ ಬೆರೆಸಿದ್ದ ಆರೋಪಿ ಯುವಕನ ಸೆರೆ

Update: 2021-02-20 07:03 GMT

ಲಕ್ನೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಗದ್ದೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರು ಮೃತಪಟ್ಟ ಸ್ಥಿತಿಯಲ್ಲಿ ಹಾಗೂ ಇನ್ನೊಬ್ಬಾಕೆ ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಸಂಬಂಧ ಪೊಲೀಸರು 28 ವರ್ಷದ ವಿನಯ್ ಎಂಬ ಯುವಕ ಹಾಗೂ 15 ವರ್ಷದ ಅಪ್ರಾಪ್ತನೊಬ್ಬನನ್ನು ಬಂಧಿಸಿದ್ದಾರೆ. ತನ್ನ ಪ್ರೀತಿಯನ್ನು ನಿರಾಕರಿಸಿದ್ದ 17 ವರ್ಷದ ಯುವತಿಯ ಮೇಲೆ ಸೇಡು ತೀರಿಸಲು ನೀರಿನಲ್ಲಿ ಕೀಟನಾಶಕ ಬೆರೆಸಿದ್ದಾಗಿ ವಿನಯ್ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಸೋದರ ಸಂಬಂಧಿಗಳಾದ ಮೂವರು ಬಾಲಕಿಯರೂ ಆ ನೀರಿನಲ್ಲಿ ಕೀಟನಾಶಕ ಬೆರೆಸಲಾಗಿದೆ ಎಂದು ತಿಳಿಯದೆ ಅದನ್ನು ಕುಡಿದಿದ್ದರೆನ್ನಲಾಗಿದೆ.

ಸದ್ಯ ಗಂಭೀರ ಸ್ಥಿತಿಯಲ್ಲಿರುವ 17ರ ಹುಡುಗಿ ವಿನಯ್‍ಗೆ ತನ್ನ ಮೊಬೈಲ್ ಸಂಖ್ಯೆ ನೀಡಲು ನಿರಾಕರಿಸಿದ್ದು ಆತನಿಗೆ ಸಿಟ್ಟು ಬರಿಸಿತ್ತೆನ್ನಲಾಗಿದೆ. ಹತ್ತಿರದ ಗ್ರಾಮದವನಾದ ವಿನಯ್ ಲಾಕ್ ಡೌನ್ ಸಂದರ್ಭ ಈ ಹುಡುಗಿಯರಿಗೆ ಆತ್ಮೀಯನಾಗಿದ್ದನೆನ್ನಲಾಗಿದ್ದು ಗದ್ದೆಯಲ್ಲಿ ಅವರು ಭೇಟಿಯಾಗುತ್ತಿದ್ದರು. ಬಂಧಿತ ಅಪ್ರಾಪ್ತ ಬಾಲಕ ವಿನಯ್ ಸ್ನೇಹಿತನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಬಾಲಕಿಯರ ಕುಟುಂಬದ ಗದ್ದೆ ಸಮೀಪವೇ ವಿನಯ್ ಗದ್ದೆ ಕೂಡ ಇತ್ತು. ಬುಧವಾರ ಬಾಲಕಿಯರು ತಮ್ಮೊಂದಿಗೆ ತಿಂಡಿ ತಂದಿದ್ದರೆ ವಿನಯ್ ಕೂಡ ತನ್ನ ಸ್ನೇಹಿತನಿಂದ ತಿಂಡಿ ತರಿಸಿದ್ದ, ಸ್ವಲ್ಪ ಹೊತ್ತು ಅವರೆಲ್ಲರೂ ಮಾತನಾಡಿದ ನಂತರ ವಿನಯ್ ನೀಡಿದ ನೀರಿನ ಬಾಟಲಿನಿಂದ ಮೊದಲು ಹಿರಿಯವಳು ನೀರು ಕುಡಿದಿದ್ದರೆ ನಂತರ ಉಳಿದ ಬಾಲಕಿಯರೂ ನೀರು ಕುಡಿದಿದ್ದರು. ಕುಡಿಯಬೇಡಿ ಎಂದು ಹೇಳಿದರೂ ಉಳಿದಿಬ್ಬರು ನೀರು ಕುಡಿದು ನಂತರ ಪ್ರಜ್ಞೆ ತಪ್ಪಿ ಬಿದ್ದಾಗ ಆರೋಪಿಗಳಿಬ್ಬರೂ ಪರಾರಿಯಾಗಿದ್ದರು.

ಘಟನೆ ಸ್ಥಳದಲ್ಲಿ ತಿಂಡಿ ಪ್ಯಾಕೆಟ್, ಸಿಗರೇಟ್ ತುಂಡು ಹಾಗೂ ಒಂದು ನೀರಿನ ಬಾಟಲಿ ಪತ್ತೆಯಾಗಿತ್ತೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News