ಪಾದಚಾರಿ ರಸ್ತೆ ಒತ್ತುವರಿ ಹಾಗೂ ಅನಧಿಕೃತ ಓ.ಎಫ್.ಸಿ ಕೇಬಲ್‍ಗಳ ತೆರವು ಕಾರ್ಯಾಚರಣೆ

Update: 2021-02-20 18:09 GMT

ಬೆಂಗಳೂರು, ಫೆ.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದ ವಾರ್ಡ್-82ರಲ್ಲಿ ಬರುವ ಇಪಿಐಪಿ ಪ್ರದೇಶದ ರಸ್ತೆಗಳಲ್ಲಿ ಸುಮಾರು 0.90ಕೀ.ಮೀ ಉದ್ದದ ರಸ್ತೆಯ ಎರಡು ಬದಿಗಳಲ್ಲಿ ಪಾದಚಾರಿ ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಂತಹ ಅಂಗಡಿಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಮಹದೇವಪುರ ವಲಯದ ವಾರ್ಡ್-82 ಅಭಿಯಂತರರ ನೇತೃತ್ವದಲ್ಲಿ ತೇರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಕಾರ್ಯಾಚರಣೆಯಲ್ಲಿ ಒಟ್ಟು 70 ತಾತ್ಕಾಲಿಕ ಪಾದಚಾರಿ ರಸ್ತೆ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಈ ಪಾದಚಾರಿ ಮಾರ್ಗಗಳಲ್ಲಿ ಪುನಃ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸದಂತೆ ಸೂಚನೆ ನೀಡಲಾಗಿದೆ.

ಪಾದಚಾರಿ ಮಾರ್ಗಗಳಲ್ಲಿ ಪಾದಚಾರಿಗಳ ಸುರಕ್ಷತಾ ಹಿತದೃಷ್ಟಿಯಿಂದ ಒತ್ತುವರಿ ತೆರವಿನ ಡ್ರೈವ್ ಅನ್ನು ಇತರೆ ವಾರ್ಡ್ ಗಳಲ್ಲಿಯೂ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮಹದೇವಪುರ ವಲಯದ ಮುಖ್ಯ ಇಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ತಿಳಿಸಿದ್ದಾರೆ.

ಅನಧಿಕೃತ ಓ.ಎಫ್.ಸಿ ಕೇಬಲ್‍ಗಳ ತೆರವು ಕಾರ್ಯಾಚರಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒ.ಎಫ್.ಸಿ ಕೇಬಲ್‍ಗಳನ್ನು ತೆರವುಗೊಳಿಸಲು ಆಯುಕ್ತರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಹದೇವಪುರ ವಲಯದಲ್ಲಿ ಬರುವ ವಿವಿಧ ವಾರ್ಡ್ ಗಳಲ್ಲಿ ಒಟ್ಟು 48 ಕಿ.ಮೀ ಅನಧಿಕೃತವಾಗಿ ಅಳವಡಿಸಲಾಗಿದ್ದ ಓ.ಎಫ್.ಸಿ ಕೇಬಲ್‍ಗಳನ್ನು ಕೆ.ಆರ್.ಪುರಂ ಮತ್ತು ಮಹದೇವಪುರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಹೊರಮಾವು, ಕೆ.ಆರ್.ಪುರ, ಎಚ್.ಎ.ಎಲ್, ಹೂಡಿ, ವೈಟ್ ಫೀಲ್ಡ್, ಮಹದೇವಪುರ ಉಪ ವಿಭಾಗ ಸೇರಿದಂತೆ ಇನ್ನಿತರೆ ವಾರ್ಡ್ ಗಳಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಗಳ ಮೇಲೆ ಜೋತಾಡುತ್ತಿದ್ದ, ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿದ್ದ ಹಾಗೂ ಮರಗಳಿಗೆ ಸುತ್ತಿದ್ದ ಕೇಬಲ್‍ಗಳನ್ನು ತೆರವುಗೊಳಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೆ ತೊಂದರೆಯಾಗದಿರಲು ಅನಧಿಕೃತ ಒ.ಎಫ್.ಸಿ ತೆರವುಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೇಬಲ್‍ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಮತ್ತು ದಂಡ ವಸೂಲಿ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಪರಮೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News