ನವೊಮಿ ಒಸಾಕಾ ಚಾಂಪಿಯನ್

Update: 2021-02-21 04:15 GMT

ಮೆಲ್ಬೋರ್ನ್: ಜೆನ್ನಿಫರ್ ಬ್ರಾಡಿಯವರನ್ನು ಮಣಿಸಿದ ಜಪಾನ್‌ನ ನವೊಮಿ ಒಸಾಕಾ ಎರಡನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದರು.

 ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಒಸಾಕಾ ಅವರು ಸತತ ಆರು ಗೇಮ್‌ಗಳನ್ನು ಜಯಿಸಿ ಜೆನ್ನಿಫರ್‌ರನ್ನು 6-4, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ಮಹಿಳಾ ಟೆನಿಸ್‌ನಲ್ಲ್ಲಿ ಹೊಸ ರಾಣಿ ಆಗಿ ಹೊರಹೊಮ್ಮಿದ್ದಾರೆ.

ಫ್ಲಡ್‌ಲೈಟ್‌ನಡಿ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಒಸಾಕಾ 22ನೇ ಶ್ರೇಯಾಂಕದ ಅಮೆರಿಕದ ಆಟಗಾರ್ತಿಯ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಈ ಮೂಲಕ ವೃತ್ತಿಬದುಕಿನಲ್ಲಿ ನಾಲ್ಕನೇ ಬಾರಿ ಪ್ರಮುಖ ಪ್ರಶಸ್ತಿ ತನ್ನದಾಗಿಸಿಕೊಂಡರು.

ಮೊದಲ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಜೆನ್ನಿಫರ್ ನೆರೆದಿದ್ದ ಪ್ರೇಕ್ಷಕರನ್ನು ನಿರಾಸೆಗೊಳಿಸಿದರು.

2019ರ ಆಸ್ಟ್ರೇಲಿಯನ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿದ್ದ ಒಸಾಕಾ ಅವರು ಟ್ರೋಫಿ ಪ್ರದಾನ ಸಮಾರಂಭದಲ್ಲಿ ಬ್ರಾಡಿಗೆ ಅಭಿನಂದಿಸಿದರು. ತನಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಳೆದ ಋತುವಿನಲ್ಲಿ ಸತತ 21 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಒಸಾಕಾ ವರ್ಷದ ಅಥ್ಲೀಟ್ ಗೌರವಕ್ಕೆ ಪಾತ್ರರಾಗಿದ್ದರು. ಕಳೆದ ವರ್ಷ ಒಸಾಕಾ ಅಮೆರಿಕನ್ ಓಪನ್ ಪ್ರಶಸ್ತಿ ಜಯಿಸಿದ್ದರು. 2018ರಲ್ಲೂ ಅಮೆರಿಕನ್ ಓಪನ್ ಹಾಗೂ 2019ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು.

23ರ ಹರೆಯದ ಒಸಾಕಾ ಜಪಾನ್‌ನಲ್ಲಿ ಜನಿಸಿದ್ದು ಮೂರು ವರ್ಷವಾಗಿದ್ದಾಗ ತನ್ನ ಕುಟುಂಬದೊಂದಿಗೆ ಅಮೆರಿಕಕ್ಕೆ ತೆರಳಿದ್ದರು. 25ರ ಹರೆಯದ ಬ್ರಾಡಿಗೆ ಇದು ಚೊಚ್ಚಲ ಗ್ರಾನ್‌ಸ್ಲಾಮ್ ಫೈನಲ್. ಜನವರಿಯಲ್ಲಿ ಆಸ್ಟ್ರೇಲಿಯಕ್ಕೆ ಆಗಮಿಸಿದಾಗ ಬ್ರಾಡಿ ಅವರಿದ್ದ ವಿಮಾನದಲ್ಲಿ ಕೋವಿಡ್-19 ಸೋಂಕಿತರಿದ್ದ ಕಾರಣ ಅವರು 15 ದಿನಗಳ ಕಠಿಣ ಕ್ವಾರಂಟೈನ್‌ಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News