'2ಎ' ಮೀಸಲಾತಿ ಕಲ್ಪಿಸಲು ಪಟ್ಟು: ಫ್ರೀಡಂ ಪಾರ್ಕ್ ನಲ್ಲಿ ಪಂಚಮಸಾಲಿ ಸಮುದಾಯದಿಂದ ಧರಣಿ

Update: 2021-02-22 13:19 GMT

ಬೆಂಗಳೂರು, ಫೆ.22: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ `2ಎ' ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ಸೋಮವಾರ ಕೂಡ ಧರಣಿ ಮುಂದುವರಿದಿದೆ.

2ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಿ ರವಿವಾರ ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿದ್ದ ಪಂಚಮಸಾಲಿ ಸಮುದಾಯದವರು ಫೆ.22ರಿಂದ ಮಾ.4ರವರೆಗೂ ಬೆಳಗ್ಗೆ 9ರಿಂದ ಸಂಜೆ 6ರ ವರೆಗೂ ಈ ಧರಣಿ ನಡೆಸಲಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀ ಅವರು, ಮಾ.4ರವರೆಗೂ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತೇವೆ. ಬೇಡಿಕೆ ಈಡೇರದಿದ್ದರೆ ಮಾ.4ರ ಬಳಿಕ ಸಮುದಾಯದವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯ ಸರಕಾರ ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಮುದಾಯವನ್ನು 2ಎಗೆ ಸೇರಿಸುವ ಅಧಿಕಾರ ಇದೆ. ಸಚಿವರಿಗೆ ಈ ಅಧಿಕಾರ ಇಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು ಗೊಂದಲದ ಹೇಳಿಕೆ ನೀಡಬಾರದು ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯದವರು ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡಿಲ್ಲ. ನಾನು ಒಂದು ಕರೆ ಕೊಟ್ಟಿದ್ದರೆ ರವಿವಾರ ಪರಿಸ್ಥಿತಿ ಹದಗೆಟ್ಟು ಹೋಗುತ್ತಿತ್ತು. ಆದರೂ ಸಂಯಮ ವಹಿಸಿದ್ದೇವೆ. ಕಾನೂನಿಗೆ ಗೌರವ ಕೊಟ್ಟು ಅವರು ಹೇಳಿದ ಕಡೆ ಧರಣಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಈ ಧರಣಿ ಸತ್ಯಾಗ್ರಹದಲ್ಲಿ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪಾಲ್ಗೊಂಡಿಲ್ಲ. ರವಿವಾರ ಸಮಾವೇಶದ ನಂತರ ವಚನಾನಂದ ಶ್ರೀಗಳು ಈ ಹೋರಾಟದಿಂದ ಅಂತರ ಕಾಯ್ದುಕೊಂಡಿರುವುದು ಪಂಚಮಸಾಲಿ ಹೋರಾಟದಲ್ಲಿ ಒಡಕು ಮೂಡಿದಂತಾಗಿದೆ.

ಸಿಎಂ ತೀರ್ಮಾನ ಕೈಗೊಳ್ಳಲಿ

‘ಪಂಚಮಸಾಲಿ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಪಂಚಮಸಾಲಿ ಸಮುದಾಯದ ಸಚಿವರುಗಳಿಗೆ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ವಹಿಸುವುದು ಸರಿಯಲ್ಲ. ಅವರಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಮುಖ್ಯಮಂತ್ರಿಗಳೆ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು.’

-ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News