ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವುದಿಲ್ಲ: ವಚನಾನಂದ ಸ್ವಾಮೀಜಿ

Update: 2021-02-22 14:05 GMT

ಬೆಂಗಳೂರು ಫೆ.22: ಪಂಚಮಸಾಲಿ ಸಮುದಾಯದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಯಾವುದೇ ರೀತಿಯಿಂದಲೂ ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವುದಿಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ರವಿವಾರ ನಡೆದ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರೋ ಒಬ್ಬರು ಹೇಳಿದ ಹಾಗೆ ಕೇಳುವವರು ಅಲ್ಲ. ಅಖಂಡ ಪಂಚಮಸಾಲಿ ಸಮುದಾಯ ಹೇಳಿದ ಹಾಗೆ ಕೇಳುತ್ತೇವೆ ಎಂದು ತಿಳಿಸಿದರು.

ನಗರದ ಒಳಗೆ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ನಮ್ಮ ಹೋರಾಟವನ್ನು ಹಾಳು ಮಾಡುವ ಉದ್ದೇಶದಿಂದ ಗಲಾಟೆ ಪ್ರಾರಂಭಿಸಿದ್ದರೆ, ನಮ್ಮ ಸಮುದಾಯದ ಮೇಲೆ ಕಪ್ಪು ಚುಕ್ಕೆ ಬೀಳುವ ಅವಕಾಶ ಇರುತ್ತಿತ್ತು. ಆ ಹಿನ್ನಲೆಯಲ್ಲಿ ವಿಧಾನಸೌಧದ ಕಡೆಗೆ ಪಾದಯಾತ್ರೆಯಂಥ ನಿರ್ಧಾರಗಳಿಗೆ ಬೆಂಬಲ ನೀಡಲಿಲ್ಲ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಇದೆ. ಹಿಂದಿನ ರಾತ್ರಿ ಸಂಘದ ರಾಜ್ಯಾಧ್ಯಕ್ಷರಾದ ನಾಗನಗೌಡರು ಹಾಗೂ ಹಿರಿಯರೊಂದಿಗೆ ಸಭೆಯನ್ನು ಮಾಡಿದ್ದೆವು. ಆ ಸಭೆಯಲ್ಲಿ ಧರಣಿ ಅಥವಾ ಸತ್ಯಾಗ್ರಹದಂತಹ ನಿರ್ಧಾರಗಳಿಗೆ ಹೋಗಬಾರದು, ಒಂದು ತಾರ್ಕಿಕ ಅಂತ್ಯಕ್ಕೆ ಬರಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅವರ ಸಲಹೆಯನ್ನು ನಾವು ಪಾಲಿಸಿದ್ದು, ಸಮುದಾಯದ ಭಾವನೆಗಳಿಗೆ ಒತ್ತಾಸೆಯಾಗಿದ್ದೇವೆ ಎಂದು ಹೇಳಿದರು.

ಸರಕಾರ ನಮಗೆ ಭರವಸೆ ನೀಡಿದೆ, ಸರಕಾರ ಕಾರ್ಯನಿರ್ವಹಣೆಗೆ ಅದರದ್ದೇ ಆದಂತಹ ಸಮಯ ಬೇಕು. ಸರಕಾರಕ್ಕೇ ನೇರವಾಗಿ ಕಿವಿ ಹಿಂಡಿ, ಮೂಗು ಹಿಡಿದು ಕೆಲಸ ಮಾಡಿಸಬೇಕು. ಆದರೆ, ಮೂಗು ಹಿಡಿಯುವ ಭರಾಟೆಯಲ್ಲಿ ಯಾರದ್ದೋ ಪ್ರಾಣ ತೆಗೆಯುವುದಿಲ್ಲ. ಸರಕಾರವನ್ನು ನಿತ್ರಾಣಗೊಳಿಸುವುದಿಲ್ಲ. ನಾವು ಸಮುದಾಯಕ್ಕೆ ಪ್ರಾಣ ಕೂಡಾ ನೀಡಲು ಸಿದ್ಧರಾಗಿದ್ದೇವೆ ಎಂದರು. 

ಬೆಣ್ಣೆ ಸರಕಾರದ ಕೈಯಲ್ಲಿ ಇದೆ. ಅದು ನಮ್ಮ ಕೈಯಲ್ಲಿ ಬಂದು ನಮ್ಮ ಆಹಾರ ಆಗಬೇಕು. ಅದನ್ನು ಹಾಳು ಮಾಡುವುದು ಸರಿಯಲ್ಲ. ನಮ್ಮ ಸಮುದಾಯದ ಯುವಕರಿಗೆ ಮೀಸಲಾತಿಯ ಮೂಲಕ ಶೈಕ್ಷಣಿಕ ಹಾಗೂ ಉದ್ಯೋಗ ಅವಕಾಶ ಒದಗಿಸುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಧರಣಿಗೆ ಮುಂದಾಗುವುದು ಸರಿಯಲ್ಲ

‘ಪಾದಯಾತ್ರೆಯ ನಂತರ ಧರಣಿ ಅಥವಾ ಸತ್ಯಾಗ್ರಹದಂತಹ ಹೋರಾಟಕ್ಕೆ ಮುಂದಾಗುವುದು ಸರಿಯಲ್ಲ. ಅದರಲ್ಲೂ ಸಾರ್ವಜನಿಕರ ಹಿತಾಸಕ್ತಿಗೆ, ಆಸ್ತಿಗೆ ಹಾನಿ ತರುವಂತಹ ಘಟನೆಗಳಿಗೆ ಅವಕಾಶ ಮಾಡಿಕೊಡುವ ವಿಷಯಗಳಿಗೆ ಆಸ್ಪದ ನೀಡಬಾರದು.’

-ವಚನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News