ವಕ್ಫ್ ಬೋರ್ಡ್ ಸದಸ್ಯತ್ವಕ್ಕೆ ಹೈಕೋರ್ಟ್ ತಡೆ ನೀಡಿಲ್ಲ: ಅಬ್ದುಲ್ ರಿಯಾಝ್ ಖಾನ್ ಸ್ಪಷ್ಟನೆ

Update: 2021-02-22 14:07 GMT

ಬೆಂಗಳೂರು, ಫೆ.22: ರಾಜ್ಯದ ಬಾರ್ ಕೌನ್ಸಿಲ್‍ನ ಮಾಜಿ ಸದಸ್ಯರ ವಿಭಾಗದಡಿ ರಾಜ್ಯ ವಕ್ಫ್ ಬೋರ್ಡ್‍ಗೆ ಚುನಾವಣೆ ಮೂಲಕ ಆಯ್ಕೆಯಾಗಿರುವ ನನ್ನ ಸದಸ್ಯತ್ವಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ವಕ್ಫ್ ಬೋರ್ಡ್ ಸದಸ್ಯ ಆರ್.ಅಬ್ದುಲ್ ರಿಯಾಝ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರವು ಹಝ್ರತ್ ಹಮೀದ್ ಷಾ ದರ್ಗಾ ಕಾಂಪ್ಲೆಕ್ಸ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ವಕ್ಫ್ ಬೋರ್ಡ್‍ಗೆ ಸಂಸತ್ತು, ಶಾಸನ ಸಭೆ, ಬಾರ್ ಕೌನ್ಸಿಲ್ ಹಾಗೂ ಮುತವಲ್ಲಿ ವಿಭಾಗದಡಿಯಲ್ಲಿ ಚುನಾವಣೆ ನಡೆದು ಆಯಾ ಕ್ಷೇತ್ರದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ, ಸುನ್ನಿ ಹಾಗೂ ಶಿಯಾ ಪಂಗಡದ ಧಾರ್ಮಿಕ ಮುಖಂಡರು, ಸರಕಾರದ ಅಧಿಕಾರಿ ವರ್ಗಗಳು ಹಾಗೂ ಇತರ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗುತ್ತದೆ ಎಂದರು.

2018ರ ಫೆ.5ರಂದು ರಾಜ್ಯ ವಕ್ಫ್ ಬೋರ್ಡ್ ಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿ, ಸಂಸತ್ ಸದಸ್ಯರು, ಶಾಸನ ಸಭೆಯ ಸದಸ್ಯರು ಹಾಗೂ ಬಾರ್ ಕೌನ್ಸಿಲ್‍ನ ಹಾಲಿ ಮತ್ತು ಮಾಜಿ ಸದಸ್ಯರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆಹ್ವಾನಿಸಲಾಗಿತ್ತು. ಈ ಪೈಕಿ ಸಂಸತ್ ಸದಸ್ಯರು ಒಬ್ಬರು, ಶಾಸಕರ ಪೈಕಿ ಇಬ್ಬರು ಹಾಗೂ ಬಾರ್ ಕೌನ್ಸಿಲ್‍ನಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಹೆಸರುಗಳನ್ನು ಕೇಳಲಾಗಿತ್ತು ಎಂದು ಅವರು ಹೇಳಿದರು.

ಆದರೆ, ಫೆ.7ರಂದು ಇದಕ್ಕೂ ಮುನ್ನ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಿ ಬಾರ್ ಕೌನ್ಸಿಲ್‍ನಿಂದ ಕೇವಲ ಒಬ್ಬ ಸದಸ್ಯರನ್ನು ಆಯ್ಕೆ ಮಾಡುವಂತೆ ತಿಳಿಸಲಾಗಿತ್ತು. ಆನಂತರ ರಾಜ್ಯ ಸರಕಾರ ಪುನಃ ಬಾರ್ ಕೌನ್ಸಿಲ್‍ನಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಅಧಿಸೂಚನೆ ಹೊರಡಿಸಿತು. ಅದರಂತೆ ನಾನು ಬಾರ್ ಕೌನ್ಸಿಲ್ ಮಾಜಿ ಸದಸ್ಯರ ವಿಭಾಗದಡಿ ಹೆಸರು ನೋಂದಾಯಿಸಿ ಚುನಾವಣೆಯಲ್ಲಿ ಗೆದ್ದು ವಕ್ಫ್ ಬೋರ್ಡ್ ಸದಸ್ಯನಾಗಿದ್ದೇನೆ ಎಂದು ಅವರು ತಿಳಿಸಿದರು.

ಎಂ.ಜೆ.ಅಲಿ ಹಾಗೂ ಇಲ್ಯಾಸ್ ಎಂಬುವವರು ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ, ನನ್ನ ಹಾಗೂ ವಕ್ಫ್ ಬೋರ್ಡ್ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಹೈಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿ ನನ್ನ ಸದಸ್ಯತ್ವಕ್ಕೆ ತಡೆ ನೀಡಿಲ್ಲ. ಬದಲಾಗಿ, 2020ರ ಡಿ.16ರಂದು ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಅಧಿಸೂಚನೆಯನ್ವಯ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ತಿಳಿಸಿದೆ ಎಂದು ಅವರು ಹೇಳಿದರು.

ಈಗಾಗಲೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ವಕ್ಫ್ ಬೋರ್ಡ್ ಸದಸ್ಯನಾಗಿ ಘೋಷಿಸಲ್ಪಟ್ಟು, ಗೆಜೆಟ್ ನೋಟಿಫಿಕೇಷನ್ ಸಹ ಹೊರಡಿಸಲಾಗಿದೆ. ವಕ್ಫ್ ಬೋರ್ಡ್‍ನ ಹಲವು ಸಭೆಗಳಲ್ಲೂ ಪಾಲ್ಗೊಂಡಿದ್ದೇನೆ. ಹೈಕೋರ್ಟ್ ಎಲ್ಲಿಯೂ ನನಗಾಗಲಿ, ವಕ್ಫ್ ಬೋರ್ಡ್ ಸಿಇಒಗಾಗಲಿ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂದು ರಿಯಾಝ್ ಖಾನ್ ಹೇಳಿದರು.

ನನ್ನ ಸ್ನೇಹಿತರು ಇಂತಹ ವಿಚಾರಗಳಲ್ಲಿ ಅನಗತ್ಯವಾಗಿ ತಮ್ಮ ಶ್ರಮವನ್ನು ಕಳೆದುಕೊಳ್ಳುವುದು ಬೇಡ. ಮುಂದಿನ ಬಜೆಟ್‍ನಲ್ಲಿ ನಮ್ಮ ಸಮುದಾಯಕ್ಕೆ ಅಗತ್ಯವಿರುವ ಅನುದಾನ ಪಡೆಯುವುದು, ಹೊಸ ಯೋಜನೆಗಳಿಗೆ ಚಾಲನೆ ನೀಡುವುದು, ಮಕ್ಕಳ ಶೈಕ್ಷಣಿಕ ವಿಕಸನ, ಯುವಕರಿಗೆ ಉದ್ಯೋಗ ಕೊಡಿಸುವುದು ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಎಲ್ಲರೂ ಕೈ ಜೋಡಿಸಲಿ ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News