ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ: ಶಾಸಕ ಹಾರೀಸ್

Update: 2021-02-22 14:40 GMT

ಬೆಂಗಳೂರು, ಫೆ.22: ಬೆಂಗಳೂರಿಗೆ ಬಹುದೊಡ್ಡ ಹೆಸರು ತಂದ ಹಾಗೂ ಅಪಾರ ಲಾಭವನ್ನು ಗಳಿಸಿಕೊಟ್ಟ ಸಾರ್ವಜನಿಕ ಉದ್ಯಮವಾಗಿರುವ ಬಿಇಎಂಎಲ್ ಖಾಸಗೀಕರಣವನ್ನು ವಿರೋಧಿಸಿ ಮಾರ್ಚ್‍ನಲ್ಲಿ ನಡೆಯುವ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಧ್ವನಿ ಎತ್ತುವುದಾಗಿ ಶಾಂತಿನಗರ ಶಾಸಕ ಎನ್.ಎ.ಹಾರೀಸ್ ತಿಳಿಸಿದ್ದಾರೆ.

ಬೆಂಗಳೂರಿನ ಬಿಇಎಂಎಲ್ ಎದುರು ನಡೆದ ದ್ವಾರ ಸಭೆ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ ಮಾತನಾಡಿದ ಶಾಸಕ ಎನ್.ಎ.ಹಾರೀಸ್ ಅವರು, ದೇಶದಲ್ಲಿ ಪ್ರತಿದಿನ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿವೆ. ಇರುವ ಉದ್ಯೋಗಗಳನ್ನು ಉಳಿಸಿಕೊಂಡು ಜೀವನ ನಿರ್ವಹಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಎಲ್ಲ ವಸ್ತುಗಳ ಮೇಲಿನ ಬೆಲೆಗಳು ಹೆಚ್ಚುತ್ತಿದ್ದು, ಜನರು ಜೀವನವನ್ನು ನಡೆಸುವುದೇ ಕಷ್ಟಕರವಾಗುತ್ತಿದೆ. ರಾಜ್ಯದ ಸುಮಾರು 10 ಸಾವಿರ ಜನರಿಗೆ ಉದ್ಯೋಗ ನೀಡಿರುವ ಹಾಗೂ ದೇಶದ ಪ್ರಮುಖ ಸಾರ್ವಜನಿಕ ಉದ್ಯಮವಾಗಿರುವ ಬಿಇಎಂಎಲ್‍ನ್ನು ಖಾಸಗೀಕರಣಗೊಳಿಸುವ ಹಿಂದೆ ಖಾಸಗಿ ಕಂಪೆನಿಗಳ ಲಾಬಿ ಎದ್ದು ಕಾಣುತ್ತಿದೆ ಎಂದು  ಆರೋಪಿಸಿದರು.

ಲಾಭದಲ್ಲಿರುವ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದರ ಮೂಲಕ ದೇಶವನ್ನು ಖಾಸಗಿ ಕಂಪೆನಿಗಳ ಪಾಲು ಮಾಡಲು ಕೇಂದ್ರ ಸರಕಾರ ಹೊರಟಿದ್ದು, ಇಂತಹ ಕೆಲಸಕ್ಕೆ ಕೈ ಹಾಕಬಾರದು ಎಂದು ಹೇಳಿದರು.

ಕಳೆದ ಹಲವಾರು ವರ್ಷಗಳಿಂದ ಈ ಖಾಸಗೀಕರಣದ ವಿರುದ್ದ ನೌಕರರು ಪ್ರತಿಭಟನೆ ನಡೆಸುತ್ತಾ ಬಂದಿದ್ದೀರಿ. ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ಭರವಸೆ ನೀಡಿದರು. 

ಪ್ರತಿಭಟನೆಯಲ್ಲಿ ಬಿಇಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್.ನಾರಾಯಣ ಸೇರಿ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News