ಗ್ರಂಥಾಲಯ ಪುಸ್ತಕ ಖರೀದಿ ಮಿತಿ ಹೆಚ್ಚಳ: ಸುರೇಶ್ ಕುಮಾರ್ ರನ್ನು ಅಭಿನಂದಿಸಿದ ಸಾಹಿತಿಗಳು

Update: 2021-02-22 15:22 GMT

ಬೆಂಗಳೂರು, ಫೆ.22: ಸುಮಾರು 15 ವರ್ಷಗಳ ಬೇಡಿಕೆಯಾಗಿದ್ದ ಗ್ರಂಥಾಲಯ ಪುಸ್ತಕ ಖರೀದಿ ಮಿತಿಯನ್ನು ಹೆಚ್ಚಿಸಿ ಪ್ರಕಾಶಕರು ಮತ್ತು ಲೇಖಕರಿಗೆ ಪ್ರೋತ್ಸಾಹ ನೀಡುವ ಕ್ರಮಗಳನ್ನು ಕೈಗೊಂಡ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘಟನೆ ಅಭಿನಂದಿಸಿದೆ.

ಗ್ರಂಥಾಲಯ ಪುಸ್ತಕ ಖರೀದಿ ನೀತಿಯನ್ನು ಒಂದು ಲಕ್ಷದಿಂದ ಎರಡೂವರೆ ಲಕ್ಷ ರೂ.ಗಳಿಗೆ ಹೆಚ್ಚಿಸಿ ಬಹಳ ವರ್ಷಗಳ ತರುವಾಯ ಸರಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಸಂಘದ ಪದಾಧಿಕಾರಿಗಳು ಸೋಮವಾರ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಆರ್.ದೊಡ್ಡೇಗೌಡ, ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಗೌರವ ಸಲಹೆಗಾರರಾದ ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ, ಈ ಬೇಡಿಕೆ ಬಹು ವರ್ಷದ ಬೇಡಿಕೆಯಾಗಿದ್ದು, ಈ ನಿರ್ಧಾರದಿಂದ ಪ್ರಕಾಶಕರು ಮತ್ತು ಬರಹಗಾರರಿಗೆ ಹೆಚ್ಚಿನ ಪ್ರೇರಣೆ ದೊರೆಯಲಿದೆ ಎಂದು ಹೇಳಿದರು.

2005ರಲ್ಲಿ 50 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಆ ನಂತರ ಎಲ್ಲ ಸರಕಾರಗಳಿಗೂ ಹಲವು ಬಾರಿ ಮನವಿ ಮಾಡಿದರೂ ಯಾರೂ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಆದರೆ ತಮ್ಮ ಅವಧಿಯಲ್ಲಿ ಇಂತಹ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿರುವುದು ಪುಸ್ತಕ ಲೋಕದಲ್ಲಿ ಒಂದು ಹೊಸ ದಿಸೆ ತೆರೆದುಕೊಳ್ಳಲಿದ್ದು, ಕನ್ನಡ ಬರಹಗಾರರಿಗೆ ಮತ್ತು ಪ್ರಕಾಶಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.

ಹಾಗೆಯೇ 2020-21ನೆ ಸಾಲಿನ ಪುಸ್ತಕ ಖರೀದಿ ಆಯವ್ಯಯಕ್ಕೆ ಅನುಮೋದನೆ ನೀಡಿರುವುದು ಈ ಸರಕಾರದ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ನಿಡಸಾಲೆ ಪುಟ್ಟಸ್ವಾಮಯ್ಯ ಹೇಳಿದರು. ಕೊರೋನ ಹಿನ್ನೆಲೆಯಲ್ಲಿ ಈ ಸಾಲಿನ ಪುಸ್ತಕ ಖರೀದಿ ಆಯವ್ಯಯಕ್ಕೆ ಅನುಮೋದನೆ ದೊರೆಯದೇ ತೊಂದರೆಯಾಗಿತ್ತು, ಈ ಅನುಮೋದನೆಯಿಂದಾಗಿ ಪುಸ್ತಕ ಖರೀದಿಗೆ ಅವಕಾಶವಾಗಿದೆ ಎಂದು ಅವರು ಹೇಳಿದರು.

ಸಂಘದ ಪದಾಧಿಕಾರಿಗಳು ಸಚಿವ ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂಘದ ಗೌರವ ಸಲಹೆಗಾರ ಪ್ರೊ.ಮಲ್ಲೇಪುರಂ ವೆಂಕಟೇಶ್, ಕಾರ್ಯದರ್ಶಿ ಆರ್.ದೊಡ್ಡೇಗೌಡ, ಸಾಹಿತಿಗಳಾದ ರಾ.ನಂ.ಚಂದ್ರಶೇಖರ, ಡಾ.ಸುಕನ್ಯಾ ಮಾರುತಿ, ಡಾ.ಮಾಲತಿ ಶೆಟ್ಟಿ, ಜಾಣಗೆರೆ ವೆಂಕಟರಾಮಯ್ಯ, ಭಾಗ್ಯಲಕ್ಷ್ಮಿ ಮಗ್ಗೆ, ವಿಜಯಲಕ್ಷ್ಮಿ ಸತ್ಯಮೂರ್ತಿ, ಡಾ.ಕೆ.ಷರೀಫಾ, ಗೌರಮ್ಮ, ವಿಜಯಾಗುರುರಾಜ್, ಪದ್ಮಿನಿ ನಾಗರಾಜ್, ಮುರಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News