ಹಣ್ಣುಗಳನ್ನು ತಿನ್ನಲು ಉತ್ತಮ ಸಮಯ ಯಾವುದು?

Update: 2021-02-22 16:04 GMT

 ಮೇಲಿನ ಪ್ರಶ್ನೆಗೆ ಸರಿಯಾದ ಒಂದು ಉತ್ತರವಿರಲು ಎಂದೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಆಹಾರ ಕ್ರಮ ಮತ್ತು ಊಟದ ವಿಧಾನ ವಿಭಿನ್ನವಾಗಿರುವುದು ಇದಕ್ಕೆ ಸರಳ ಕಾರಣವಾಗಿದೆ. ಓರ್ವ ವ್ಯಕ್ತಿ ಹಣ್ಣುಗಳನ್ನು ಬೆಳಗಿನ ಮೊದಲ ಆಹಾರವಾಗಿ ಸೇವಿಸಬಹುದು ಅಥವಾ ಊಟದ ಬಳಿಕ ಸೇವಿಸಬಹುದು. ಇದು ಇನ್ನೋರ್ವ ವ್ಯಕ್ತಿಯಲ್ಲಿ ಭಿನ್ನವಾಗಿರುತ್ತದೆ. ಆತ/ಆಕೆ ಊಟದೊಂದಿಗೆ ಹಣ್ಣು ಸೇವಿಸಲು ಬಯಸಬಹುದು. ಆದರೆ ತೂಕ ಇಳಿಕೆ ಅಥವಾ ಇತರ ಯಾವುದೇ ಆರೋಗ್ಯ ಗುರಿಯನ್ನು ನೀವು ಹೊಂದಿದ್ದರೆ ಅಥವಾ ನೀವು ಮಧುಮೇಹಿಯಾಗಿದ್ದರೆ ಹಣ್ಣು ತಿನ್ನುವ ಸಮಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

 ಊಟದೊಂದಿಗೆ ಹಣ್ಣನ್ನು ಸೇವಿಸುವುದು ಸರಿಯಾದ ಕ್ರಮವಲ್ಲ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ಹಣ್ಣುಗಳಲ್ಲಿ ವಿಟಾಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುತ್ತವೆ. ಊಟದೊಂದಿಗೆ ಹಣ್ಣನ್ನು ಸೇವಿಸಿದಾಗ ಊಟದಲ್ಲಿಯ ಪ್ರೋಟಿನ್, ಕಾರ್ಬೊಹೈಡ್ರೇಟ್‌ಗಳು ಮತ್ತು ಕೊಬ್ಬುಗಳೊಂದಿಗೆ ಜೀರ್ಣಗೊಳ್ಳಲು ಈ ಪೋಷಕಾಂಶಗಳು ಕಾಯಬೇಕಾಗುತ್ತವೆ ಮತ್ತು ಈ ಪ್ರಕ್ರಿಯೆಯಲ್ಲಿ ಅವು ನಷ್ಟಗೊಳ್ಳುತ್ತವೆ. ಹೀಗಾಗಿ ನೀವು ನಿಮ್ಮ ಮುಖ್ಯ ಊಟದೊಂದಿಗೆ ಸಣ್ಣ ಬೌಲ್‌ನಷ್ಟು ಹಣ್ಣುಗಳನ್ನು ಸೇವಿಸಿದರೂ ಅದು ನಿಮಗೆ ಯಾವುದೇ ಲಾಭವನ್ನು ನೀಡುವುದಿಲ್ಲ. ಅದು ನಿಮ್ಮ ಊಟಕ್ಕೆ ಹೆಚ್ಚಿನ ಕ್ಯಾಲೊರಿಗಳನ್ನು ಸೇರಿಸುತ್ತದೆ ಅಷ್ಟೇ ಮತ್ತು ನೀವು ಹಣ್ಣುಗಳಿಂದ ನಿರೀಕ್ಷಿಸುವ ಯಾವುದೇ ಪೌಷ್ಟಿಕಾಂಶಗಳು ದೊರೆಯುವುದಿಲ್ಲ.

 ಅಲ್ಲದೆ ಊಟದ ಬಳಿಕ ಹಣ್ಣುಗಳ ಸೇವನೆಯೂ ಒಳ್ಳೆಯದಲ್ಲ. ಹಾಗೆ ಮಾಡಿದರೆ ನೀವು ಈಗಷ್ಟೇ ಮಾಡಿರುವ ಊಟಕ್ಕೆ ಇನ್ನಷ್ಟು ಕ್ಯಾಲೊರಿಗಳನ್ನು ಸೇರಿಸಿದಂತಾಗುತ್ತದೆ. ಶರೀರವು ಬಳಸಿಕೊಳ್ಳಲು ಸಾಧ್ಯವಾಗದ ಯಾವುದೇ ಆದರೂ ಕೊಬ್ಬಿನ ರೂಪದಲ್ಲಿ ಶರೀರದಲ್ಲಿ ಸಂಗ್ರಹಗೊಳ್ಳುತ್ತದೆ.

 ಹಣ್ಣನ್ನು ಪ್ರತ್ಯೇಕ ಆಹಾರವನ್ನಾಗಿ ಸೇವಿಸಿದಾಗ ಅದು ಅತ್ಯುತ್ತಮ ಸಮಯವಾಗುತ್ತದೆ ಎನ್ನುತ್ತಾರೆ ತಜ್ಞರು. ಅದು ನಾರು ಮತ್ತು ಉತ್ಕರ್ಷಣ ನಿರೋಧಕಗಳನ್ನು ನಮ್ಮ ಶರೀರಕ್ಕೆ ಒದಗಿಸುತ್ತದೆ ಮತ್ತು ಎರಡು ಊಟಗಳ ನಡುವೆ ಏನಾದರೂ ತಿನ್ನಬೇಕೆಂಬ ತುಡಿತವನ್ನು ನಿವಾರಿಸುತ್ತದೆ,ಆದರೆ ಮುಖ್ಯ ಊಟಕ್ಕಾಗಿ ಹಸಿವನ್ನು ಕುಂಠಿತಗೊಳಿಸುವುದಿಲ್ಲ.

 ದಿನದ ಮೊದಲ ಆಹಾರವನ್ನಾಗಿ ಬೆಳಿಗ್ಗೆ ಹಣ್ಣುಗಳನ್ನು ತಿನ್ನುವುದು ಕೂಡ ಲಾಭದಾಯಕವಾಗುತ್ತದೆ. ಅದು ನಿಮಗೆ ದಿನವನ್ನು ಉತ್ತಮವಾಗಿ ಆರಂಭಿಸಲು ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಒಟ್ಟಾರೆಯಾಗಿ ಹಣ್ಣುಗಳ ಸೇವನೆಯು ಆರೋಗ್ಯಕರ,ಸಮತೋಲಿತ ಆಹಾರಕ್ರಮದಲ್ಲಿ ಮುಖ್ಯವಾಗಿದೆ. ಆದರೆ ಅವುಗಳಿಂದ ಗರಿಷ್ಠ ಲಾಭವನ್ನು ಪಡೆಯಲು ಅವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News