ಅಮಾಯಕರು ಬಲಿಯಾಗಿರುವುದು ಜಿಲೆಟಿನ್ ಸ್ಫೋಟಕ್ಕೆ ಅಲ್ಲ, ಮುಖ್ಯಮಂತ್ರಿಯ ದುರಾಡಳಿತಕ್ಕೆ: ಸಿದ್ದರಾಮಯ್ಯ ಆರೋಪ

Update: 2021-02-23 11:19 GMT

ಬೆಂಗಳೂರು, ಫೆ.23: ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಗ್ರಾಮದ ಬಳಿ ಕಲ್ಲು ಕ್ವಾರಿಯಲ್ಲಿ ಆರು‌ ಮಂದಿ ಸಾವಿಗೀಡಾಗಿರುವುದು ಜಿಲೆಟಿನ್ ಸ್ಫೋಟದಿಂದ ಅಲ್ಲ. ಈ ಅಮಾಯಕ ಕಾರ್ಮಿಕರು, ಅಕ್ರಮ ಗಣಿಗಳನ್ನು ಸಕ್ರಮ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದುರಾಡಳಿತಕ್ಕೆ ಬಲಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಮಾಯಕ ಕಾರ್ಮಿಕರ ದುರ್ಮರಣಕ್ಕೆ ಕಾರಣವಾದ ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟ ಆಘಾತಕಾರಿ ದುರ್ಘಟನೆ. ಪ್ರಕರಣದ ತನಿಖೆ ನಡೆಸುವುದರ ಜೊತೆಗೆ ನೊಂದ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಶಿವಮೊಗ್ಗದ ಹುಣಸೋಡುವಿನ ಕಲ್ಲಿನ ಕ್ವಾರಿಯಲ್ಲಿ  ಸಂಭವಿಸಿದ ಸ್ಫೋಟದ ತಿಂಗಳ ಅವಧಿಯಲ್ಲಿ ನಡೆದ ಈ ದುರಂತ ರಾಜ್ಯ ಸರಕಾರದ ನಿಷ್ಕ್ರಿಯತೆ, ಬೇಜವಾಬ್ದಾರಿತನ ಮತ್ತು ಅಕ್ರಮದಲ್ಲಿ ಶಾಮೀಲಾಗಿರುವ ಭ್ರಷ್ಟತನಕ್ಕೆ ಸಾಕ್ಷಿ. ಮುಖ್ಯಮಂತ್ರಿಯವರೇ ನೀವು ಯಾರನ್ನು ರಕ್ಷಿಸುತ್ತಿದ್ದೀರಿ? ಜನರನ್ನೇ? ಭ್ರಷ್ಟರನ್ನೇ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ‌ಗೆ ಮುಖ್ಯಮಂತ್ರಿ ತಕ್ಷಣ ಆದೇಶಿಸಬೇಕು. ಇದಕ್ಕಿಂತ ಮೊದಲು ಈ ಘಟನೆಗೆ‌ ಕಾರಣರಾದ ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೂ ಆಂಧ್ರ ಪ್ರದೇಶದ ಗಣಿ ಲೂಟಿಕೋರರಿಗೂ ನೇರವಾದ ಸಂಬಂಧ ಇದೆ. ವಿಧಾನಸೌಧದಿಂದ ಜಿಲ್ಲಾಮಟ್ಟದ ವರೆಗೆ ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ. ಚಿಕ್ಕಬಳ್ಳಾಪುರದ ಈ ಅಕ್ರಮ ಗಣಿಗಾರಿಕೆ, ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಅನಧಿಕೃತ ಕ್ರಷರ್,‌ ಕ್ವಾರಿಗಳಿವೆ‌ ಎಂದು ಹೇಳಲಾಗುತ್ತಿದೆ. ಇವುಗಳ ಪಟ್ಟಿಯನ್ನು ಮುಖ್ಯಮಂತ್ರಿ ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚುವ ಕೆಲಸ ಶುರು ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News