ಮೀಟರ್ ದರ ಪರಿಷ್ಕರಣೆಗೆ ಪಟ್ಟು: ಆಟೊ ರಿಕ್ಷಾ ಚಾಲಕರಿಂದ ಪ್ರತಿಭಟನೆ

Update: 2021-02-23 11:50 GMT

ಬೆಂಗಳೂರು, ಫೆ.23: ಮೀಟರ್ ದರ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಟೊ ರಿಕ್ಷಾ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್(ಸಿಐಟಿಯು) ನೇತೃತ್ವದಲ್ಲಿ ಜಮಾಯಿಸಿದ ಆಟೊ ಚಾಲಕರು, ಕಲ್ಯಾಣ ಮಂಡಳಿ ರಚನೆ, ಆಟೊ ರಿಕ್ಷಾ ಚಾಲಕರ ಹಿತಕ್ಕಾಗಿ ಒಂದು ಸಾವಿರ ಕೋಟಿ ರೂ. ಮೀಸಲಿಡುವಂತೆ ಒತ್ತಾಯ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಆರ್.ನವೀನ್ ಶೆಣೈ, ಎಂಟು ವರ್ಷಗಳ ಹಿಂದೆ 2013ರಲ್ಲಿ ಆಟೊ ಮೀಟರ್ ದರ ಪರಿಷ್ಕರಣೆಯಾಗಿದೆ. ಅಲ್ಲಿಂದ ಈವರೆಗೂ ದರ ಇದ್ದಷ್ಟೇ ಇದೆ. ಗ್ಯಾಸ್, ಪೆಟ್ರೋಲ್, ಅಡುಗೆ ಎಣ್ಣೆ, ಆಹಾರ ಪದಾರ್ಥಗಳು, ವಿಮಾ ಶುಲ್ಕಗಳು, ನೀರು, ವಿದ್ಯುತ್ ದರಗಳು, ಆಟೋ ಬಿಡಿ ಭಾಗಗಳು, ಆರ್.ಟಿ.ಒ. ಶುಲ್ಕಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಆಟೊ ಓಡಿಸಿ ಬದುಕು ನಡೆಸುವವರು ಜೀವಿಸುವುದು ಕಷ್ಟವಾಗಿದೆ. ಈಗಾಗಲೇ ಮಂಗಳೂರು ಹಾಗೂ ಇತರ ಕಡೆಗಳಲ್ಲಿ ದರ ಪರಿಷ್ಕರಣೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ದುಬಾರಿಯಾಗಿರುವುದರಿಂದ ಇಲ್ಲಿಯೂ ದರ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಮೊದಲು ದರ ಪರಿಷ್ಕರಣೆಗೆ ಕಳೆದ ವರ್ಷ ಮಾ.26ರಂದು ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದರು. ಆದರೆ, ಮಾ.23ಕ್ಕೆ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ದರ ಪರಿಷ್ಕರಣೆಯಾಗಲಿಲ್ಲ. ಒಂದು ವರ್ಷದ ಲಾಕ್‍ಡೌನ್ ಅವಧಿಯಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದೇವೆ. ಈಗಲಾದರೂ ಸರಕಾರ ನಮ್ಮ ಕಡೆ ಗಮನ ನೀಡಲಿ ಎಂದರು.

15 ವರ್ಷ ಮೇಲ್ಪಟ್ಟ ಆಟೋಗಳಿಗೆ ಎಫ್‍ಸಿ ಮಾಡುವುದನ್ನು ನಿಲ್ಲಿಸಲಾಗಿದೆ. ಸಂಕಷ್ಟ ಕಾಲದಲ್ಲಿ ಹೊಸ ಆಟೊ ಖರೀದಿಗೆ ಆರ್ಥಿಕ ಸಮಸ್ಯೆ ಇದೆ. ಈಗಾಗಲೇ ಸಾಲ ಕೊಟ್ಟವರು ದುಬಾರಿ ಬಡ್ಡಿ ವಸೂಲಿ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್ ಮಾತನಾಡಿ, ಸಂಚಾರಿ ನಿಯಮ ಉಲ್ಲಂಘನೆ ದಂಡವನ್ನು ಹೆಚ್ಚಿಸಲಾಗಿದೆ. ಪೊಲೀಸರು ದಂಡ ವಸೂಲಿ ನೆಪದಲ್ಲಿ ಆಟೊ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ, ಅದನ್ನು ತಪ್ಪಿಸಬೇಕು. ಏರಿಕೆಯಾಗಿರುವ ಆರ್‍ಟಿಒ ಶುಲ್ಕ ಮತ್ತು ವಿಮಾ ದರಗಳನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News