ಶುಲ್ಕ ಕಡಿತಕ್ಕೆ ವಿರೋಧ: ಬೆಂಗಳೂರಿನಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿ- ಶಿಕ್ಷಕರಿಂದ ಬೃಹತ್ ರ್‍ಯಾಲಿ

Update: 2021-02-23 13:02 GMT

ಬೆಂಗಳೂರು, ಫೆ.23: ಬೋಧನಾ ಶುಲ್ಕ ಶೇ.30ರಷ್ಟು ಕಡಿತ ಮಾಡಿರುವ ರಾಜ್ಯ ಸರಕಾರದ ಕ್ರಮ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಖಾಸಗಿ ಶಾಲಾ ಶಿಕ್ಷಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ ಬಳಿ ಜಮಾಯಿಸಿದ ಶಾಲಾ ಶಿಕ್ಷಕರು, ಸ್ವಾತಂತ್ರ್ಯ ಉದ್ಯಾನವನ ಮೈದಾನದವರೆಗೂ ಬೃಹತ್ ಮೆರವಣಿಗೆ ನಡೆಸಿ, ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಕೋವಿಡ್ ಸೋಂಕು ಪರಿಣಾಮದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂಕಷ್ಟ ಕಾಲದಲ್ಲೂ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ಶುಲ್ಕ ಕಡಿಮೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚಿಸಿ ಖಾಸಗಿ ಶಾಲೆಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಖಾಸಗಿ ಶಾಲೆಗಳು ಶಿಕ್ಷಕರ ವೇತನ ನೀಡದೆ ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಖಾಸಗಿ ಶಿಕ್ಷಕರಿಗಾಗಿ ಸರಕಾರ ಐದು ಪೈಸೆ ನೆರವು ನೀಡಿಲ್ಲ. ಏಕಾಏಕಿ ಶಿಕ್ಷಣ ಇಲಾಖೆ ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಬೋಧನಾ ಶುಲ್ಕ ಶೇ.30ರಷ್ಟು ಕಡಿಮೆ ಮಾಡಲು ಅಸಾಧ್ಯವಾಗಿದೆ. ಇನ್ನು ಶಾಲೆಗಳ ಮಾನ್ಯತೆ ನವೀಕರಣಕ್ಕೆ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಹೊಸ ನಿಯಮಗಳನ್ನು ಹಾಕಿದ್ದಾರೆ. ಈ ನಿಯಮಗಳನ್ನು ಪಾಲಿಸಲಾಗದ ಶಾಲೆಗಳಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಲಂಚ ಪಡೆದು ನವೀಕರಣ ಮಾನ್ಯತೆ ಮಾಡುತ್ತಿದ್ದಾರೆ ಎಂದರು.

ಆರ್ಥಿಕ ಸಂಕಷ್ಟ ಕಾಲದಲ್ಲೂ ಭ್ರಷ್ಟಾಚಾರಕ್ಕೆ ನಾಂದಿ ಹಾಡಲಾಗಿದೆ. ಕೊರೋನದಿಂದ ಸಂಕಷ್ಟಕ್ಕೆ ಸಿಲುಕಿರುವ ಶಾಲೆಗಳನ್ನು ರಕ್ಷಣೆ ಮಾಡಬೇಕಿದ್ದ ಸರಕಾರ, ಅವೈಜ್ಞಾನಿಕ ತೀರ್ಮಾನಗಳಿಂದ ನಿರ್ನಾಮಕ್ಕೆ ನಾಂದಿ ಹಾಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಖಾಸಗಿ ಶಾಲಾ ಆಡಳಿತದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News