ಡ್ರಗ್ಸ್ ದಂಧೆ : ಬಿಜೆಪಿ ಮುಖಂಡ ರಾಕೇಶ್ ಸಿಂಗ್, ಪುತ್ರನ ಬಂಧನ

Update: 2021-02-24 03:45 GMT
ರಾಕೇಶ್ ಸಿಂಗ್

ಕೊಲ್ಕತ್ತಾ: ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಎಂಬಾತನನ್ನು ಪಶ್ಚಿಮ ಬಂಗಾಳ ಪೊಲೀಸರು ಮಂಗಳವಾರ ರಾತ್ರಿ ಪುರ್ಬಾ ಬರ್ಧಮಾನ್ ಜಿಲ್ಲೆಯ ಗಲ್ಸಿಯಲ್ಲಿ ಬಂಧಿಸಿದ್ದಾರೆ.

ನಗರದ ಬಂದರು ಪ್ರದೇಶದಲ್ಲಿರುವ ಬಿಜೆಪಿ ರಾಜ್ಯ ಸಮಿತಿ ಮುಖಂಡನ ಮನೆ ಪ್ರವೇಶಿಸದಂತೆ ಸಿಬ್ಬಂದಿಯನ್ನು ತಡೆದು ಅಡ್ಡಿಪಡಿಸಿದ ಆರೋಪದಲ್ಲಿ ಆತನ ಇಬ್ಬರು ಪುತ್ರರನ್ನೂ ನಾರ್ಕೊಟಿಕ್ಸ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕೊಲ್ಕತ್ತಾ ಪೊಲೀಸರು ನೀಡಿದ ಮಾಹಿತಿಯ ಅನುಸಾರ ಗಲ್ಸಿ ರಾಷ್ಟ್ರೀಯ ಹೆದ್ದಾರಿ ಟೋಲ್ ‌ನಾಕಾದಲ್ಲಿ ರಾಕೇಶ್ ಸಿಂಗ್‌ನನ್ನು ಬಂಧಿಸಲಾಗಿದೆ. ಸಿಂಗ್‌ಗೆ ಭದ್ರತೆಯಾಗಿ ನೀಡಿದ್ದ ಸಿಐಎಸ್‌ಎಫ್ ಸಿಬ್ಬಂದಿಯ ಜತೆ ಕಾರಿನಲ್ಲಿ ಆರೋಪಿ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದ ಎನ್ನಲಾಗಿದೆ.

ಇದಕ್ಕೂ ಮುನ್ನ ಮಾದಕ ವಸ್ತು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೊಲ್ಕತ್ತಾ ಪೊಲೀಸರು ರಾಕೇಶ್ ಸಿಂಗ್‌ಗೆ ಸಮನ್ಸ್ ನೀಡಿದ್ದರು. ಆದರೆ ತಾನು ದೆಹಲಿಗೆ ಹೋಗುತ್ತಿದ್ದು, ವಾಪಸ್ಸಾದ ಬಳಿಕ ಹಾಜರಾಗುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಪ್ರಕರಣದಲ್ಲಿ ರಾಜ್ಯ ಯುವ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ಹಾಗೂ ಇತರ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.

"ರಾಕೇಶ್ ಸಿಂಗ್ ತಪ್ಪಿಸಿಕೊಳ್ಳಲು ಯತ್ನಿಸಿದಂತಿದೆ. ಆರೋಪಿಗಾಗಿ ಹುಡುಕುತ್ತಿರುವ ಸುಳಿವು ಸಿಕ್ಕಿದ ರಾಕೇಶ್ ಸಿಂಗ್ ವಾಹನ ಬದಲಿಸಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ" ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News