ಇಂದಿನಿಂದ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್

Update: 2021-02-24 04:36 GMT

 ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ಮೊಟೇರಾದ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಳ್ಳಲಿದೆ.

ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಜಯ ಗಳಿಸಿ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅವಕಾಶ ದೃಢಪಡಿಸಲು ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಇಲ್ಲಿ ನಡೆಯಲಿರುವ ಮುಂದಿನ ಎರಡು ಟೆಸ್ಟ್ ಪಂದ್ಯಗಳು ನಿರ್ಣಾಯಕವಾಗಿವೆ.

   ಸರಣಿಯ ಪ್ರಾರಂಭದ ಮೊದಲು ಭಾರತದಲ್ಲಿ ಪಿಂಕ್ ಬಾಲ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌ಗೆ ಉತ್ತಮ ಅವಕಾಶವಿದೆ ಎಂದು ನಂಬಲಾಗಿತ್ತು. ಆದರೆ ಕಳೆದ ಟೆಸ್ಟ್‌ನಲ್ಲಿ ಭಾರತ ಸೋಲುಣಿಸಿದ ಬಳಿಕ ಇಂಗ್ಲೆಂಡ್‌ನ ಹಾದಿ ಸುಲಭವಾಗಿಲ್ಲ. ಇದು ಸರಣಿಯನ್ನು ನಿರ್ಧರಿಸುವ ಟೆಸ್ಟ್ ಮತ್ತು ಆಸ್ಟ್ರೇಲಿಯದಲ್ಲಿ ಭಾರತ ಏನು ಮಾಡಿದೆ ಎಂದು ಇಂಗ್ಲೆಂಡ್‌ಗೆ ಚೆನ್ನಾಗಿ ಗೊತ್ತಿದೆ. ಮತ್ತೊಂದೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನವನ್ನು ಗಳಿಸಲು ಭಾರತ ಹೋರಾಡಬೇಕಿದೆ. ಮುಂದಿನ ಎರಡು ಟೆಸ್ಟ್‌ಗಳನ್ನು ಭಾರತ ಕಳೆದುಕೊಂಡರೆ ಭಾರತದ ಫೈನಲ್ ಕನಸು ಕಮರಿ ಹೋಗಲಿದೆ.

ಭಾರತ ತವರಿನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅವಕಾಶ ದೃಢಪಡಿಸುವ ಸಾಧ್ಯತೆ ಇದೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಸ್ಕೋರ್ ಮಾಡುವುದು ಮತ್ತು ಎದುರಾಳಿ ತಂಡದ 20 ವಿಕೆಟ್‌ಗಳನ್ನು ಬೇಗನೆ ಕಬಳಿಸುವ ಯೋಜನೆಯಲ್ಲಿ ಸಫಲತೆ ಗಳಿಸದಿದ್ದರೂ, ಇದನ್ನೇ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ಇದುವರೆಗೆ ಭಾರತದ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಿದಂತೆ ಕಾಣಿಸದಿದ್ದರೂ, ಭಾರತದ ಅಗ್ರ ಆರು ಆಟಗಾರರು ಸರಣಿಯಲ್ಲಿ ಕನಿಷ್ಠ 50 ಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿದ್ದಾರೆ. ಎರಡನೇ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಶತಕ ದಾಖಲಿಸಿದಂತೆ ತಂಡದ ಪ್ರಬಲ ಬ್ಯಾಟಿಂಗ್ ಮುಂದಿನ ಪಂದ್ಯಗಳಲ್ಲಿ ಅನಾವರಣಗೊಳ್ಳಲಿದೆ.

  ಭಾರತದ ಪರವಾಗಿರುವ ಇನ್ನೊಂದು ವಿಷಯವೆಂದರೆ ಪ್ರಬಲ ಬೌಲಿಂಗ್ ದಾಳಿಯನ್ನು ಭಾರತ ಕಣಕ್ಕಿಳಿಸಿದೆ. ಒಂದು ಟೆಸ್ಟ್ ವಿರಾಮದ ನಂತರ ಜಸ್‌ಪ್ರೀತ್ ಬುಮ್ರಾ ಮತ್ತೆ ತಂಡಕ್ಕೆ ಮರಳಿದ್ದಾರೆ. ಇಶಾಂತ್ ಶರ್ಮಾ ಅವರೊಂದಿಗೆ ವೇಗದ ದಾಳಿಯ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆರ್.ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್ ಮತ್ತು ಮುಹಮ್ಮದ್ ಸಿರಾಜ್ ಇವರಲ್ಲಿ ಐದನೇ ಬೌಲರ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಇಂಗ್ಲೆಂಡ್‌ಗೆ ಸಂಬಂಧಿಸಿದಂತೆ ಜಾನಿ ಬೈರ್‌ಸ್ಟೋವ್‌ನ ಲಭ್ಯತೆಯು ಜೋ ರೂಟ್‌ನ ಮೇಲಿನ ಜವಾಬ್ದಾರಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಿದೆ. ಮತ್ತೆ ವಾಪಸಾಗಿರುವ ಜೇಮ್ಸ್ ಆ್ಯಂಡರ್ಸನ್‌ರಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ಎರಡನೇ ಟೆಸ್ಟ್‌ಗೆ ಆ್ಯಂಡರ್ಸನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಐದನೇ ದಿನದಂದು ಆ್ಯಂಡರ್ಸನ್ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಭಾರತದ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಇಂಗ್ಲೆಂಡ್ ಅವರಿಂದ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತದೆ.

 ತಮ್ಮ ವೇಗಿಗಳು ಪಿಂಕ್ ಚೆಂಡಿನೊಂದಿಗೆ ಹೊನಲು ಬೆಳಕಿನಲ್ಲಿ ಮಾಡಿರುವ ಅಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ಮೂವರು ತಜ್ಞ ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ನಿಜವಾದ ಪಿಚ್ ಅಭ್ಯಾಸದ ಪಿಚ್‌ಗಿಂತ ಹೆಚ್ಚು ಭಿನ್ನವಾಗಿರುತ್ತದೆ. ಒಂದು ವೇಳೆ ಈ ವಿಚಾರದ ಬಗ್ಗೆ ಯೋಚಿಸದೆ ಇಂಗ್ಲೆಂಡ್ ಮೂವರು ವೇಗಿಗಳನ್ನು ಕಣಕ್ಕಿಳಿಸಿದರೆ ತಂಡಕ್ಕೆ ಹಿನ್ನಡೆಯಾಗಬಹುದು.

ಇನ್ ದಿ ಸ್ಟಾಟ್‌ಲೆಟ್

ಹೊನಲು ಬೆಳಕಿನಲ್ಲಿ ಬ್ಯಾಟ್ಸ್‌ಮನ್‌ಗಳು ಹೊಂದಿಕೊಳ್ಳಲುಪ್ರಯತ್ನಿಸುತ್ತಾರೆ. ಇಲ್ಲಿಯವರೆಗೆ ಪಿಂಕ್ ಚೆಂಡು ವೇಗಿಗಳಿಗೆ ಅನುಕೂಲವಾಗಿರುವುದು ಕಂಡು ಬಂದಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಅಂತರ್‌ರಾಷ್ಟ್ರೀಯ ಶತಕ ದಾಖಲಿಸಿ ತುಂಬಾ ಸಮಯ ಆಗಿದೆ. ಆದರೆ ಅವರ ಈಗಿನ ಫಾರ್ಮ್‌ನ್ನು ನೋಡಿದರೆ ಉಳಿದ ಟೆಸ್ಟ್‌ಗಳಲ್ಲಿ ಶತಕ ಬಾರಿಸಬಹುದು. ಕೊಹ್ಲಿ ಪಿತೃತ್ವ ರಜೆಯಲ್ಲಿ ಆಸ್ಟ್ರೇಲಿಯದಿಂದ ಹೊರಡುವ ಮೊದಲು ಅಡಿಲೇಡ್‌ನಲ್ಲಿ ಹಗಲು-ರಾತ್ರಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನ ಐದನೇ ದಿನದಂದು 72ರನ್ ಗಳಿಸಿದ್ದರು. ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 62 ರನ್ ಗಳಿಸಿರುವುದು ಭಾರತಕ್ಕೆ ಇಂಗ್ಲೆಂಡ್‌ನ ಬಾಗಿಲು ಮುಚ್ಚಲು ಸಹಾಯ ಮಾಡಿತು.  

ತಂಡದ ಸಮಾಚಾರ

 ಐದನೇ ಬೌಲರ್‌ನ್ನು ಕಣಕ್ಕಿ ಳಿಸುವ ಉದ್ದೇಶ ಕ್ಕಾಗಿ ಬುಮ್ರಾರನ್ನು ಭಾರತ ತಂಡಕ್ಕೆ ಸೇರಿಸಿಕೊಂಡಿದೆ. ಪಿಂಕ್ ಚೆಂಡು ಮತ್ತು ಇಬ್ಬನಿ ಬೀಳುವ ಅಂಶವನ್ನು ಗಮನಿಸಿದರೆ ಭಾರತವು ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ. ಹೀಗೆ ನಡೆದರೆ ಕುಲದೀಪ್ ಅವಕಾಶ ಕಳೆದುಕೊಳ್ಳಲಿದ್ದಾರೆ.

 ಸಂಭಾವ್ಯ ತಂಡ

ಭಾರತ : ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶುಬ್‌ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ,ಉಮೇಶ್ ಯಾದವ್ , ಜಸ್‌ಪ್ರೀತ್ ಬುಮ್ರಾ

ಇಂಗ್ಲೆಂಡ್: ಜೋ ರೂಟ್, ಡೊಮ್ ಸಿಬ್ಲಿ, ಝಕ್ ಕ್ರಾಲೆ, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಒಲ್ಲಿ ಪೋಪ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಡೊಮ್ ಬೆಸ್ / ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್

ಪಿಚ್, ವಾತಾವರಣ

 ಮೊಟೇರಾ ಪಿಚ್ ಹಸಿರು ಹುಲ್ಲಿನಿಂದಾವೃತವಾಗಿದೆ. ವೇಗಿಗಳಿಗೆ ಸ್ನೇಹಿಯಾಗಿದೆ. ನವೀಕರಿಸಿದ ಕ್ರೀಡಾಂಗಣವು 1,10,000 ಪ್ರೇಕ್ಷಕರಿಗೆ ಆಸನ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೋವಿಡ್ -19 ಕಾರಣದಿಂದಾಗಿ ಅರ್ಧದಷ್ಟು ಆಸನಗಳು ಭರ್ತಿಯಾಗುವುದನ್ನು ನಿರೀಕ್ಷಿಸಲಾಗಿದೆ. ವಾತಾವರಣ ಬಿಸಿಲಿನಿಂದ ಕೂಡಿರುತ್ತದೆ. ತಾಪಮಾನವು ಹಗಲಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಮತ್ತು ಸಂಜೆ ಹತ್ತು ಡಿಗ್ರಿಗಳಷ್ಟು ಇಳಿಯುತ್ತದೆ.

ಅಂಕಿ ಅಂಶ

 ► 2019ರಲ್ಲಿ ಈಡನ್ ಗಾರ್ಡನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಭಾರತದ ಮೊದಲ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಸಿಡಿಸಿದ್ದರು. ಅಂದಿನಿಂದ ಅವರು ಶತಕ ಗಳಿಸದೆ 34 ಇನಿಂಗ್ಸ್ ಗಳನ್ನು ಆಡಿದ್ದಾರೆ . ಶತಕದ ಬರ ಎದುರಿಸುತ್ತಿದ್ದಾರೆ.

 ► ಇದು ಇಶಾಂತ್ ಶರ್ಮಾರಿಗೆ 100ನೇ ಟೆಸ್ಟ್ ಆಗಿರುತ್ತದೆ. ಭಾರತದ ವೇಗದ ಬೌಲರ್‌ಗಳ ಪೈಕಿ ಕಪಿಲ್ ದೇವ್ ಮಾತ್ರ ಹೆಚ್ಚು ಟೆಸ್ಟ್ ಆಡಿದ್ದಾರೆ (131).

► ಇಲ್ಲಿಯವರೆಗೆ ನಡೆದ 15 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳಲ್ಲಿ ವೇಗದ ಬೌಲರ್‌ಗಳು 24.47 ಸರಾಸರಿಯಲ್ಲಿ 354 ವಿಕೆಟ್‌ಗಳನ್ನು ಮತ್ತು ಸ್ಪಿನ್ನರ್‌ಗಳು 35.38 ಸರಾಸರಿಯಲ್ಲಿ 115 ವಿಕೆಟ್‌ಗಳನ್ನು ಪಡೆದಿದ್ದಾರೆ.

 ►2012ರಲ್ಲಿ ಕೊನೆಯ ಬಾರಿ ಮೊಟೇರಾ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಿತ್ತು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಔಟಾಗದೆ 206 ಮತ್ತು ಔಟಾಗದೆ 41 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಭಾರತ 9ವಿಕೆಟ್‌ಗಳಿಂದ ಮಣಿಸಿತ್ತು. ಈ ತನಕ ವಿಶ್ವದಲ್ಲಿ 15 ಪಿಂಕ್ ಬಾಲ್ ಟೆಸ್ಟ್ ಗಳು ನಡೆದಿವೆ. ಈ ಪೈಕಿ ಆಸ್ಟ್ರೇಲಿಯ 8 ಟೆಸ್ಟ್‌ಗಳಲ್ಲಿ ಜಯ ಗಳಿಸಿದೆ. ಶ್ರೀಲಂಕಾ 2ರಲ್ಲಿ, ದ.ಆಫ್ರಿಕ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಭಾರತ ತಲಾ 1 ಪಂದ್ಯದಲ್ಲಿ ಜಯ ಗಳಿಸಿದೆ.

► ಭಾರತ ಮೂರನೇ ಪಿಂಕ್ ಬಾಲ್ ಟೆಸ್ಟ್ ಆಡುತ್ತಿದೆ. ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ಜಯ ಗಳಿಸಿತ್ತು. ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ನಲ್ಲಿ ಸೋಲು ಅನುಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News