ಬೆಂಗಳೂರಿನ ಮದುವೆ ಮಂಟಪಗಳಿಗೂ ಬಂದ ಮಾರ್ಷಲ್ಸ್ !

Update: 2021-02-24 18:29 GMT

ಬೆಂಗಳೂರು, ಫೆ.24: ರಾಜಧಾನಿ ಬೆಂಗಳೂರಿನ ಕೊರೋನ ಸೋಂಕಿನ ಎರಡನೆ ಅಲೆಯ ಭೀತಿ ಹಿನ್ನೆಲೆ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲನೆಗಾಗಿ ಮದುವೆ ಮಂಟಪಗಳಲ್ಲೂ ಮಾರ್ಷಲ್‍ಗಳನ್ನು ನಿಯೋಜಿಸಿ ಬಿಬಿಎಂಪಿ ಕ್ರಮಕೈಗೊಂಡಿದೆ.

ಬುಧವಾರ ನಗರದ 25ಕ್ಕೂ ಹೆಚ್ಚಿನ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿದ ಮಾರ್ಷಲ್‍ಗಳ ತಂಡ, ಮೊಬೈಲ್ ಹಿಡಿದು ಚಿತ್ರೀಕರಣ ಮಾಡಿದಲ್ಲದೆ, ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ಹಾಕಿದ ಪ್ರಸಂಗವೂ ಜರುಗಿತು.

ಮದುವೆ ಸಮಾರಂಭಗಳಲ್ಲಿ ಜನರು ಅಂತರ ಕಾಯ್ದುಕೊಳ್ಳುತ್ತಿಲ್ಲ. ಸಮಾರಂಭದಲ್ಲಿ ಮಾಸ್ಕ್ ತೆಗೆಯುತ್ತಾರೆ. ಈ ಹಿನ್ನೆಲೆ ಮದುವೆ ಸಮಾರಂಭಗಳಿಗೆ ಮಾರ್ಷಲ್ ನೇಮಿಸಲು ರಾಜ್ಯ ಸರಕಾರ ಇತ್ತೀಚಿಗೆ ತೀರ್ಮಾನ ಕೈಗೊಂಡಿತು. ಜತೆಗೆ ಮದುವೆ ವೇಳೆ 500ಕ್ಕಿಂತ ಹೆಚ್ಚು ಜನರು ಸೇರಬಾರದು. ಪ್ರತಿಯೊಬ್ಬರು ಮಾಸ್ಕ್ ಧರಿಸಲೇಬೇಕು ಎಂದು ಸುತ್ತೋಲೆ ಹೊರಡಿಸಿತ್ತು.

ಇದರನ್ವಯ ಬಿಬಿಎಂಪಿ ಮಾರ್ಷಲ್‍ಗಳನ್ನು ನಿಯೋಜನೆ ಮಾಡಿದ್ದು, ಊಟೋಪಾಚಾರದ ವೇಳೆಯೂ ಅಡಿಗೆ ಬಡಿಸುವವರಿಗೂ ಕೂಡ ಕೊರೋನ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಪಾಲಿಕೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬೆಳ್ಳಂಬೆಳಗ್ಗೆ ಮಾಸ್ಕ್ ಮರೆತು ಮದುವೆಯತ್ತ ಹೆಜ್ಜೆ ಹಾಕಿದ ಅತಿಥಿಗಳು ಮಾರ್ಷಲ್‍ಗಳನ್ನು ಕಂಡು ಬೆಚ್ಚಿ ಬಿದ್ದರು. ಮಾಸ್ಕ್ ಇಲ್ಲದವರನ್ನು ಒಳಗಡೆ ಪ್ರವೇಶ ನಿಷೇಧಿಸಲಾಗಿತ್ತು. ಈ ವೇಳೆ ಗೊಂದಲಕ್ಕೆ ಸಿಲುಕಿ, ಕೈವಸ್ತ್ರವನ್ನೇ ಮೂಗಿಗೆ ಕಟ್ಟಿಕೊಂಡ ಹಲವರು ಪ್ರವೇಶಿಸಿದ ಪ್ರಸಂಗವೂ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News