ಬಿಎಂಟಿಸಿ ಬಸ್ ಪ್ರಯಾಣ ದರ ಶೀಘ್ರದಲ್ಲೆ ಏರಿಕೆ ಸಾಧ್ಯತೆ

Update: 2021-02-25 10:03 GMT

ಬೆಂಗಳೂರು : ‘ಕೋವಿಡ್ ಸಂಕಷ್ಟ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬೇಗೆಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರಿನ ಸಾರ್ವಜನಿಕ ಪ್ರಯಾಣಿಕರಿಗೆ ಶೀಘ್ರದಲ್ಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ದರ ಏರಿಕೆ ಬಿಸಿಯೂ ತಟ್ಟಲಿದೆ'.

‘ಬಿಎಂಟಿಸಿ ಬಸ್ ಪ್ರಮಾಣ ದರ ಏರಿಕೆಯ ಪ್ರಸ್ತಾಪವಿದ್ದು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಲಿದ್ದು, ಪ್ರಯಾಣ ದರ ಹೆಚ್ಚಳಕ್ಕೆ ಸಮ್ಮತಿಸಿದರೆ ಮಾತ್ರ ಟಿಕೆಟ್ ದರ ಏರಿಕೆ ಮಾಡಲಾಗುವುದು' ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಎಂಟಿಸಿ ಹೊರತುಪಡಿಸಿ ಕೆಎಸ್ಸಾಟಿಸಿ ಸೇರಿದಂತೆ ಮೂರು ನಿಗಮಗಳ ಟಿಕೆಟ್ ದರವನ್ನು ಕಳೆದ ವರ್ಷ ಶೇ.12ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ಬೆಂಗಳೂರಿನ ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ.

ಹೀಗಾಗಿ ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾಪವಿದ್ದು, ಶೇ.18ರಿಂದ 20ರಷ್ಟು ಟಿಕೆಟ್ ದರ ಏರಿಕೆ ಮಾಡಬೇಕೆಂಬ ಪ್ರಸ್ತಾಪ ಬಿಎಂಟಿಸಿ ಸರಕಾರದ ಮುಂದಿಟ್ಟಿದೆ. ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ತೀರ್ಮಾನ ಮಾಡಲಿದ್ದಾರೆ' ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಬಿಎಂಟಿಸಿ ಬಸ್ ಪ್ರಮಾಣ ದರ ಏರಿಕೆ ಸಂಬಂಧ ಶೀಘ್ರದಲ್ಲೆ ಸಿಎಂ ಬಿಎಸ್‍ವೈ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದು, ಅವರ ದರ ಏರಿಕೆಗೆ ಒಪ್ಪಿಗೆ ನೀಡಿದರೆ ಮಾತ್ರ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಒಂದು ವೇಳೆ ಅವರ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರೆ ಏರಿಕೆ ಮಾಡುವುದಿಲ್ಲ ಎಂದು ಲಕ್ಷ್ಮಣ ಸವದಿ ಇದೇ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News