ಖಾಸಗಿ ಆಸ್ಪತ್ರೆಗಳು ನೈತಿಕತೆ ಮರೆಯಬಾರದು: ಡಿಸಿಎಂ ಅಶ್ವತ್ಥ ನಾರಾಯಣ

Update: 2021-02-25 12:56 GMT

ಬೆಂಗಳೂರು, ಫೆ.25: ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಖಾಸಗಿ ಕ್ಷೇತ್ರದ ಆಸ್ಪತ್ರೆಗಳು ನೀಡುತ್ತಿರುವುದು ಶ್ಲಾಘನೀಯ. ಆದರೆ, ಯಾವುದೇ ಕಾರಣಕ್ಕೂ ನೈತಿಕ ಮೌಲ್ಯಗಳನ್ನು ಮರೆಯಬಾರದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. 

ಗುರುವಾರ ನಗರದ ಮತ್ತಿಕೆರೆಯಲ್ಲಿ ವಿವಿಡಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಖಾಸಗಿ ಆಸ್ಪತ್ರೆಗಳು ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆಗಳಲ್ಲಿ ಜನರಿಗೆ ಉತ್ತಮ ಸೇವೆ ಒದಗಿಸುತ್ತಿವೆ. ಯಾವುದೇ ಕಾರಣಕ್ಕೂ ವೈದ್ಯ ಸೇವೆಯನ್ನು ವಾಣಿಜ್ಯ ದೃಷ್ಟಿಯಲ್ಲಿ ನೋಡಬಾರದು ಎಂದು ಹೇಳಿದರು. 

ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು. ಖಾಸಗಿ ಆಸ್ಪತ್ರೆಗಳು ನೈಬರ್‍ಹುಡ್ ನೆರೆಹೊರೆಯ ಆಪ್ತರಂತೆ ಕಾಣಬೇಕು. ಜನರು ಯಾವುದೇ ಕ್ಷಣದಲ್ಲಿ ಆರೋಗ್ಯ ಸಮಸ್ಯೆ ಎದುರಾದರೂ ಯಾವುದೇ ಅಂಜಿಕೆ ಇಲ್ಲದೆ ಈ ಆಸ್ಪತ್ರೆಗಳಿಗೆ ಧೈರ್ಯವಾಗಿ ಬರುವಂತಿರಬೇಕು ಎಂದು ಅವರು ಹೇಳಿದರು. 

ವಿವಿಡಸ್ ಆಸ್ಪತ್ರೆಯನ್ನು ಅದರ ಮಾಲಕರು ಗುಣಮಟ್ಟದ ವೈದ್ಯಸೇವೆ ಒದಗಿಸುವ ಉದಾತ್ತ ಉದ್ದೇಶದಿಂದ ಸ್ಥಾಪನೆ ಮಾಡಿದ್ದಾರೆ. ಅವರ ಕನಸು ಈಡೇರಲಿ. ಮತ್ತಿಕೆರೆ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿ. ಆಸ್ಪತ್ರೆಯಲ್ಲಿ ಉತ್ತಮ ಸೌಕರ್ಯಗಳಿವೆ ಎಂದು ಉಪ ಮುಖ್ಯಮಂತ್ರಿ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News