ಕಳೆದೊಂದು ವರ್ಷದಲ್ಲಿ ದ್ವಿಪಕ್ಷೀಯ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು

Update: 2021-02-26 14:22 GMT
photo:PTI

ಹೊಸದಿಲ್ಲಿ,ಫೆ.26: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶುಕ್ರವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಸ್ಥಿತಿಯ ಬಗ್ಗೆ ಮತ್ತು ಉಭಯ ದೇಶಗಳ ನಡುವಿನ ಒಟ್ಟಾರೆ ಬಾಂಧವ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದ್ದು,ಕಳೆದ ವರ್ಷ ದ್ವಿಪಕ್ಷೀಯ ಸಂಬಂಧಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಉಂಟಾಗಿತ್ತು ಎನ್ನುವುದನ್ನು ಬೆಟ್ಟು ಮಾಡಿದ್ದಾರೆ. 75 ನಿಮಿಷಗಳ ಕಾಲ ನಡೆದ ಮಾತುಕತೆ ವೇಳೆ ಉಭಯ ವಿದೇಶಾಂಗ ಸಚಿವರು ಪೂರ್ವ ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ಕುರಿತು ತಮ್ಮ ನಡುವಿನ ಮಾಸ್ಕೋ ಒಪ್ಪಂದದ ಜಾರಿಯ ಬಗ್ಗೆಯೂ ಚರ್ಚಿಸಿದರಲ್ಲದೆ,ಸೇನೆ ಹಿಂದೆಗೆತ ಪ್ರಕ್ರಿಯೆಯ ಸ್ಥಿತಿಗತಿಯನ್ನು ಪುನರ್‌ಪರಿಶೀಲಿಸಿದರು.

2020ರಲ್ಲಿ ಮಾಸ್ಕೋದಲ್ಲಿ ಚೀನಿ ವಿದೇಶಾಂಗ ಸಚಿವರ ಜೊತೆ ತನ್ನ ಮಾತುಕತೆಗಳನ್ನು ಜೈಶಂಕರ್ ಪ್ರಸ್ತಾಪಿಸಿದರು. ಚೀನಾದ ಪ್ರಚೋದನಾತ್ಮಕ ನಡವಳಿಕೆ ಮತ್ತು ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಿಸಲು ಅದರ ಏಕಪಕ್ಷೀಯ ಪ್ರಯತ್ನಗಳ ಕುರಿತು ಭಾರತವು ಆ ಮಾತುಕತೆಗಳ ವೇಳೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು.

ಕಳೆದೊಂದು ವರ್ಷದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು ಎನ್ನುವುದನ್ನು ಬೆಟ್ಟುಮಾಡಿದ ಜೈಶಂಕರ,ಗಡಿ ಪ್ರಶ್ನೆಯು ಬಗೆಹರಿಯಲು ಸಮಯವನ್ನು ತೆಗೆದುಕೊಳ್ಳಬಹುದು,ಆದರೆ ಹಿಂಸೆ ಸೇರಿದಂತೆ ಶಾಂತಿ ಮತ್ತು ನೆಮ್ಮದಿಗೆ ವ್ಯತ್ಯಯವು ಬಾಂಧವ್ಯದ ಮೇಲೆ ಖಂಡಿತವಾಗಿಯೂ ಹಾನಿಕರ ಪರಿಣಾಮವನ್ನು ಬೀರುತ್ತದೆ ಎಂದು ವಾಂಗ್ ಯಿ ಅವರಿಗೆ ತಿಳಿಸಿದರು.

ಕಳೆದ ವರ್ಷ ಮಾಸ್ಕೋದಲ್ಲಿ ನಡೆದ ಮಾತುಕತೆಗಳ ಸಂದರ್ಭ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿಯು ಭಾರತ ಅಥವಾ ಚೀನಾದ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ ಎನ್ನುವುದನ್ನು ಉಭಯ ದೇಶಗಳ ಸಚಿವರು ಒಪ್ಪಿಕೊಂಡಿದ್ದರು ಮತ್ತು ಉಭಯ ದೇಶಗಳ ಗಡಿ ಪಡೆಗಳು ತಮ್ಮ ಮಾತುಕತೆ,ತ್ವರಿತ ನಿಸ್ಸೇನೀಕರಣ ಮತ್ತು ಉದ್ವಿಗ್ನತೆಯನ್ನು ಶಮನಿಸುವ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ನಿರ್ಧರಿಸಿದ್ದರು ಎನ್ನುವುದನ್ನು ವಾಂಗ್ ಯಿ ಗಮನಕ್ಕೆ ತಂದ ಜೈಶಂಕರ್,ಆಗಿನಿಂದಲೂ ಉಭಯ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ನಿರಂತರ ಸಂವಹನವನ್ನು ಕಾಯ್ದುಕೊಂಡಿವೆ ಮತ್ತು ಇದು ಪ್ಯಾಂಗಾಂಗ್ ತ್ಸೊ ಸರೋವರ ಪ್ರದೇಶದಿಂದ ಯಶಸ್ವಿ ಸೇನೆ ಹಿಂದೆಗೆತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪ್ಯಾಂಗಾಂಗ್ ತ್ಸೊ ಪ್ರದೇಶದಿಂದ ಸೇನಾಪಡೆಗಳ ಹಿಂದೆಗೆತ ಪೂರ್ಣಗೊಂಡಿದೆ ಮತ್ತು ಈಗ ಉಭಯ ದೇಶಗಳು ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಬಾಕಿಯುಳಿದಿರುವ ಇತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಬೇಕು ಹಾಗೂ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಮರುಸ್ಥಾಪಿಸಲು ಶ್ರಮಿಸಬೇಕಿದೆ ಎಂದೂ ಜೈಶಂಕರ್ ಹೇಳಿದರು ಎಂದು ಹೇಳಿಕೆಯು ತಿಳಿಸಿದೆ.

 ತ್ವರಿತ ಸಂಪರ್ಕಕ್ಕೆ ಹಾಟ್‌ಲೈನ್ ಸ್ಥಾಪನೆಗೆ ಒಪ್ಪಿಗೆ ಸುಗಮ ಮತ್ತು ಪರಿಣಾಮಕಾರಿ ಸಂಪರ್ಕಕ್ಕಾಗಿ ಉಭಯ ದೇಶಗಳ ನಡುವೆ ಹಾಟ್‌ಲೈನ್ ಸ್ಥಾಪನೆಗೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.

ಸಮಯೋಚಿತ ರೀತಿಯಲ್ಲಿ ವಿಚಾರ ವಿನಿಮಯಗಳನ್ನು ನಡೆಸಲು ಸಂವಹನ ಹಾಟ್‌ಲೈನ್ ಸ್ಥಾಪಿಸಲು ಉಭಯ ದೇಶಗಳು ಸಹಮತ ವ್ಯಕ್ತಪಡಿಸಿದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News