ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಎದೆ ನಡುಗಿಸಿದ ಚಂದ್ರಶೇಖರ್ ಆಝಾದ್

Update: 2021-02-26 19:30 GMT

‘‘ಭಾರತದ ಕಾರ್ಮಿಕ ವರ್ಗವು ಒಂದೆಡೆ ವಿದೇಶಿ ಸಾಮ್ರಾಜ್ಯಶಾಹಿಯನ್ನು ಇನ್ನೊಂದೆಡೆ ಭಾರತೀಯ ಬಂಡವಾಳಶಾಹಿಗಳ ಪಿತೂರಿಯನ್ನು ಎದುರಿಸಬೇಕಾಗಿದೆ. ಭಾರತೀಯ ಬಂಡವಾಳಶಾಹಿ ವರ್ಗವು ವಿದೇಶಿ ಬಂಡವಾಳದೊಂದಿಗೆ ಕೈ ಜೋಡಿಸಿ ಜನಸಮೂಹವನ್ನು ವಂಚಿಸುತ್ತಿದೆ ಮತ್ತು ಇದಕ್ಕೆ ಪ್ರತಿಯಾಗಿ ಕೆಲವೊಂದು ಸವಲತ್ತನ್ನು ಪಡೆಯುತ್ತಿದೆ. ಆದ್ದರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಲು ಮತ್ತು ಎಲ್ಲಾ ಸಾಮಾಜಿಕ ಅಸಮಾನತೆ, ಶೋಷಣೆಗಳನ್ನು ಅಳಿಸಲು ಸಮಾಜವಾದ ಒಂದೇ ಕಾರ್ಮಿಕ್ಕೆ ವರ್ಗಕ್ಕೆ ಇರುವ ಭರವಸೆ’’

ತಾನೇ ನೇತೃತ್ವವಹಿಸಿ ಮುನ್ನಡೆಸುತ್ತಿದ್ದ ಕ್ರಾಂತಿಕಾರಿ ಸಂಘಟನೆ ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ(ಎಚ್‌ಎಸ್‌ಆರ್‌ಎ)ಯ ಪ್ರಣಾಳಿಕೆಯ ಮೂಲಕ ಈ ರೀತಿ ಘೋಷಿಸಿದ ಚಂದ್ರಶೇಖರ್ ಆಝಾದ್ ಜುಲೈ 1906 ರಂದು ಇಂದಿನ ಉತ್ತರ ಪ್ರದೇಶದ ಬಾವಾರ ಎಂಬ ಹಳ್ಳಿಯಲ್ಲಿ ಸೀತಾರಾಮ್ ತಿವಾರಿ ಹಾಗೂ ಜಗರಾಣಿ ದೇವಿಯವರ ಮಗನಾಗಿ ಜನಿಸಿದರು. ಆಝಾದ್ ಅವರು ಇದೇ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದರು. ಆಟ-ಪಾಠದಲ್ಲಿ ಮುಂದಿದ್ದ ಆಝಾದ್‌ರ ಬಗ್ಗೆ ಅವರ ಉಪಾಧ್ಯಾಯರಾಗಿದ್ದ ಮನೋಹರ್ ಲಾಲ್ ಅವರಿಗೆ ವಿಶೇಷ ಒಲವಿತ್ತು. ಮಕ್ಕಳಿಗೆಲ್ಲ ನಾಯಕ ಆಗಿರುತ್ತಿದ್ದ ಬಾಲಕ ಆಝಾದ್ ಒಮ್ಮೆ ಮಕ್ಕಳೊಂದಿಗೆ ಸೇರಿ ದೀಪಾವಳಿ ಹಬ್ಬಕ್ಕೆ ದೊಡ್ಡದಾಗಿ ಬೆಳಕು ಕಾಣುವಂತೆ ಮಾಡಲು ಪಟಾಕಿಗಳನ್ನೆಲ್ಲಾ ಒಂದೆಡೆ ಗುಡ್ಡೆ ಹಾಕಿ ಎಲ್ಲದಕ್ಕೂ ಒಟ್ಟಿಗೆ ಬೆಂಕಿಹಚ್ಚಿದ್ದ. ಈ ಸಂಭ್ರಮದ ನಡುವೆ ಆಝಾದ್ ತಮ್ಮ ಬಲಗೈ ಸುಟ್ಟಿರುವುದನ್ನು ನೋಡಲೇ ಇಲ್ಲ! ನಂತರ ಈತನ ಗೆಳೆಯರು ಇದನ್ನು ನೋಡಿ ಗಾಬರಿಗೊಂಡು ಮನೆಗೆ ಓಡಲಾರಂಭಿಸಿದರು. ಆದರೆ ಆಝಾದ್ ಇವರನ್ನೆಲ್ಲ ತಡೆದು ಧೈರ್ಯ ತುಂಬಿ ಮತ್ತೆ ಪಟಾಕಿ ಹಚ್ಚುವುದನ್ನು ಮುಂದುವರಿಸಿದ. ಆ ದಿನವೇ ಹಳ್ಳಿಯ ಜನ ಈತನ ಧೈರ್ಯ, ನೋವನ್ನು ಲೆಕ್ಕಿಸದ ಗುಣವನ್ನು ಕಂಡು ಬೆರಗಾಗಿದ್ದರು.

ಮುಂದೆ ಮನೆಯಲ್ಲಿ ತಾವು ಬಯಸಿದ ಸ್ವಾತಂತ್ರ್ಯ ಸಿಗದಿದ್ದಾಗ ಮನೆಬಿಟ್ಟು ಮುಂಬೈ ಸೇರಿದರು. ಮುಂಬೈಯಲ್ಲಿ ಹಣವಿಲ್ಲದೆ ಹಸಿವಿನಿಂದ ಹಲವಾರು ದಿನಗಳನ್ನು ಕಳೆದರೂ ಆತ್ಮಗೌರವಕ್ಕೆ ಕುಂದು ತರುವಂತಹ ಯಾವುದೇ ಕೆಲಸವನ್ನು ಮಾಡಲಿಲ್ಲ. ಅಲ್ಲಿ ಹಡಗಿನಲ್ಲಿ, ಬಂದರಿನಲ್ಲಿ ಮೂಟೆ ಹೊರುವ ಕೂಲಿಯಾಗಿ ಕೆಲಸಮಾಡುತ್ತಿದ್ದರು. ಅಲ್ಲಿ ಕೂಲಿಯಾಳುಗಳ ನಡುವೆಯೇ ವಾಸಮಾಡುತ್ತಿದ್ದರು. ನಂತರ ವಿದ್ಯಾಭ್ಯಾಸ ಮುಂದುವರಿಸುವ ಇಚ್ಛ್ಛೆೆಯಿಂದ ಕಾಶಿಗೆ ಹೋದರು. ಅಲ್ಲಿ ಸಂಸ್ಕೃತ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿದಾಗ ಅವರಿಗೆ 15ರ ಹರೆಯ. ಆಗ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಬಿರುಸಾಗಿ ನಡೆಯುತ್ತಿದ್ದ ಕಾಲ. ತಾಯಿನಾಡಿನ ಕರೆಯಂತೆ ಆಝಾದ್ ಅಸಹಕಾರ ಚಳವಳಿಗೆ ಧುಮುಕಿದರು.

ಕಾಶಿಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಬ್ರಿಟಿಷರ ಪೊಲೀಸರು ವಿದ್ಯಾರ್ಥಿಗಳನ್ನು ತಡೆದು ತಳಿಸಲಾರಂಭಿಸಿದರು. ಈ ಕಾರ್ಯದಿಂದ ಕೋಪಗೊಂಡ ವಿದ್ಯಾರ್ಥಿಗಳ ನಾಯಕರಾದ ಆಝಾದ್ ಪೊಲೀಸರೆಡೆಗೆ ಕಲ್ಲೊಂದನ್ನು ಬೀಸಿದರು. ಇದರಿಂದಾಗಿ ಬಂಧಿತರಾದ ಆಝಾದ್ ಅವರು ಮರುದಿನ ವಿಚಾರಣೆ ವೇಳೆ ನ್ಯಾಯಾಧೀಶರು ನಿನ್ನ ಹೆಸರೇನೆಂದು ಕೇಳಿದಾಗ ಆಝಾದ್( ಸ್ವಾತಂತ್ರ) ಎಂದು, ನಿನ್ನ ತಂದೆಯ ಹೆಸರೇನು ಎಂಬ ಪ್ರಶ್ನೆಗೆ ಸ್ವಾಧೀನತೆ ಎಂದು, ನಿನ್ನ ವಾಸವೆಲ್ಲಿ? ಎಂದು ಕೇಳಿದಾಗ ಸೆರೆಮನೆಯೆಂದು ದಿಟ್ಟವಾಗಿ ಉತ್ತರಿಸಿದ್ದರು! ಇದರಿಂದ ಕುಪಿತರಾದ ಕ್ರೂರಿ ನ್ಯಾಯಾಧೀಶ ಆಝಾದ್ ಅವರಿಗೆ 12ಛಡಿ ಏಟಿನ ಶಿಕ್ಷೆ ವಿಧಿಸಿದರು. ಒಂದೊಂದು ಏಟಿಗೂ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಕೂಗುತ್ತಿದ್ದರು. ಜೈಲಿನಿಂದ ಹೊರಬಂದ ಬಾಲಕನನ್ನು ಜನರು ಆನಂದದಿಂದ ಮೇಲೆತ್ತಿ ಆಝಾದ್ ಎಂದು ಕರೆದರು. ಅಂದಿನಿಂದ ಅವರು ಚಂದ್ರಶೇಖರ್ ಆಝಾದ್ ಎಂದೇ ಖ್ಯಾತರಾದರು.

1921 ರಲ್ಲಿ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಿಂಪಡೆದರು. ಇದರಿಂದ ಬೇಸತ್ತ ಆಝಾದ್ ಅವರು ಮುಂದೆ ತಮ್ಮ 16ನೇ ವಯಸ್ಸಿನಲ್ಲಿ ಸಚ್ಚೀಂದ್ರನಾಥ ಸನ್ಯಾಲರು, ರಾಮ್ ಪ್ರಸಾದ್ ಬಿಸ್ಮಿಲ್ಲಾರು ಮುನ್ನಡೆಸುತ್ತಿದ್ದ ಹಿಂದುಸ್ಥಾನ್ ರಿಪಬ್ಲಿಕ್ ಅಸೋಸಿಯೇಷನ್ ಎಂಬ ಕ್ರಾಂತಿಕಾರಿ ಪಕ್ಷವನ್ನು ಸೇರಿದರು. ತಮಗೆ ವಹಿಸುತ್ತಿದ್ದ ಯಾವುದೇ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಒಮ್ಮೆ ಆಝಾದ್ ಭಿತ್ತಿಪತ್ರಗಳನ್ನು ಹಚ್ಚುವಾಗ ಪೋಲಿಸ್ ಠಾಣೆಗೆ ಹೋದರು. ಅಲ್ಲಿ ಪೊಲೀಸ್ ಪೇದೆಯೊಂದಿಗೆ ಸಂಭಾಷಣೆಗಿಳಿದು ಠಾಣೆಯ ಗೋಡೆಗೆ ಬೆನ್ನನ್ನು ಉಜ್ಜುತ್ತಾ ನಿಂತುಕೊಂಡಿದ್ದರು. ಬೆನ್ನಿಗೆ ಭಿತ್ತಿಪತ್ರವನ್ನು ಅಂಟಿಸಿಕೊಂಡಿದ್ದ ಆಝಾದರು ಸುಲಭವಾಗಿ ತಮ್ಮ ಕೆಲಸವನ್ನು ಮುಗಿಸಿದರು. ಮರುದಿನ ಪೊಲೀಸ್ ಠಾಣೆಯ ಮೇಲೆ ಭಿತ್ತಿಪತ್ರ! ಹೀಗೆ ಎಲ್ಲಾ ಕಡೆ ಮಿಂಚಿನಂತೆ ಸಂಚರಿಸಿ ಎಂತಹ ಅಪಾಯಕಾರಿ ಕೆಲಸವನ್ನು ಸುಲಭವಾಗಿ ಮಾಡುತ್ತಿದ್ದ ಆಝಾದರನ್ನು ತಮ್ಮ ಸಹವರ್ತಿ ರಾಮ್ ಪ್ರಸಾದ್ ಬಿಸ್ಮಿಲ್ಲಾ ಅವರು ಪಾದರಸವೆಂದು ಕರೆಯುತ್ತಿದ್ದರು.

ತಮ್ಮ ಸಂಘಟನೆ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನನ್ನು ಮುನ್ನಡೆಸಲು ಕಾಕೋರಿ ರೈಲು ದರೋಡೆ ಮೂಲಕ ಶಸ್ತ್ರಾಸ್ತ್ರಗಳನ್ನು, ಹಣವನ್ನು ಗಳಿಸಿದ್ದರಾದರೂ ತಮ್ಮ ಪ್ರಮುಖ ಸಂಗಾತಿಗಳಾದ ರಾಮಪ್ರಸಾದ್, ಅಶ್ಪಾಕುಲ್ಲಾ ಖಾನ್, ರಾಜೇಂದ್ರ ಲಹಿರಿ, ರೋಷನ್ ಸಿಂಗರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಆದರೂ ಧೃತಿಗೆಡದ ಆಝಾದ್ ಕೂಲಿಕಾರರಾಗಿ, ಶ್ರೀಮಂತನಾಗಿ, ಡ್ರೈವರ್ ಆಗಿ ವೇಷಮರೆಸಿಕೊಂಡು ನಾನಾ ಕಡೆ ಸಂಚರಿಸಿ ಸಂಘಟನೆಯನ್ನು ಮುನ್ನಡೆಸಿದರು. ಹೀಗೆ ಎಚ್‌ಆರ್‌ಎನ ಪ್ರಧಾನ ಸೇನಾಧಿಪತಿಯಾಗಿ ಆಯ್ಕೆಯಾದ ಆಝಾದರು ಸಮಾಜವಾದಿ ಸಮ ಸಮಾಜದ ನಿರ್ಮಾಣವೇ ತಮ್ಮ ಗುರಿ ಎಂದು ಘೋಷಿಸಿದರು. ಇದರ ಸಲುವಾಗಿ ಎಚ್‌ಆರ್‌ಎ ಯನ್ನು ಹಿಂದುಸ್ಥಾನ್ ಸೋಸಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯೆಂದು ಮರು ನಾಮಕರಣ ಮಾಡಲಾಯಿತು.

ನಂತರ ದಿನಗಳಲ್ಲಿ ತನ್ನ ಎಚ್‌ಎಸ್‌ಆರ್‌ಎ ಸಂಗಾತಿಗಳಾದ ಭಗತ್ ಸಿಂಗ್, ರಾಜಗುರು, ಸುಖ ದೇವರನ್ನು ಬ್ರಿಟಿಷರು ಗಲ್ಲಿಗೇರಿಸಿ ಎಚ್‌ಎಸ್‌ಆರ್‌ಎ ಯನ್ನು ದುರ್ಬಲಗೊಳಿಸಿದರು. ಆದರೂ ಕ್ರಾಂತಿಕಾರಿ ಮಾರ್ಗದಲ್ಲಿ ತಾಯ್ನಾಡಿಗೆ ಸ್ವಾತಂತ್ರ್ಯಗಳಿಸಿ ಕೊಡುವ ಮಹಾನ್ ಉದ್ದೇಶದಿಂದ ಕಿಂಚಿತ್ತು ಹಿಂಜರಿಯದೆ ಮುಂದೆ ಸಾಗಿದ ಆಝಾದರನ್ನು 1931 ಫೆಬ್ರವರಿ 27 ರಂದು ಅಲಹಾಬಾದಿನ ಆಲ್ಫ್ರೆಡ್ ಪಾರ್ಕ್ ನಲ್ಲಿ 80 ಪೊಲೀಸರ ಪಡೆ ಸುತ್ತುವರಿಯಿತು. ಅರ್ಧ ಗಂಟೆಗಳ ಕಾಲ ಮಹಾಭಾರತದ ಅಭಿಮನ್ಯುವಿನಂತೆ ಆಝಾದ್ ಸೆಣಸಿದರು. ಗುಂಡುಗಳಿಂದ ದೇಹ ರಕ್ತ ಮಯವಾಗಿದ್ದರು ಕಣ್ಮುಂದೆಯೇ ಸಾವಿನ ಛಾಯೆ ನರ್ತಿಸುತ್ತಿದ್ದರೂ ಕೊನೆಗಳಿಗೆವರೆಗೂ ಹೋರಾಡಿದ ಆಝಾದ್ ಅವರಿಗೆ ಗುಂಡಿನ ಲೆಕ್ಕ ತಪ್ಪಿರಲಿಲ್ಲ. ಪ್ರತಿಜ್ಞೆ ಮರೆತಿರಲಿಲ್ಲ. ಜೀವಂತವಾಗಿ ನಾನೆಂದು ಪೊಲೀಸರಿಗೆ ಸಿಕ್ಕಿ ಕೊಳ್ಳುವುದಿಲ್ಲ, ಕೈಗೆ ಬೇಡಿ ತೊಟ್ಟು ಕೋತಿಯಂತೆ ಹಿಂಬಾಲಿಸಲಾರೆ. ನಾನು ಸ್ವ್ವತಂತ್ರವಾಗಿ ಬದುಕುತ್ತೇನೆ. ಸ್ವತಂತ್ರವಾಗಿ ಮಡಿಯುತ್ತೇನೆ ಎಂದು ತಮಗೆ ತಾವೇ ತಮ್ಮ ಪಿಸ್ತೂಲಿನ ಕೊನೆಯ ಗುಂಡಿನಿಂದ ಗುಂಡಿಟ್ಟುಕೊಂಡು ನೆಲಕ್ಕುರುಳಿದ್ದರು.

ಆಝಾದ್‌ರ 91ನೇ ಹುತಾತ್ಮ ದಿನಾಚರಣೆಯನ್ನು ಆಚರಿಸುವ ಈ ಸುದಿನದಲ್ಲಿ ಅವರ ಆದರ್ಶ, ಸಾಹಸ, ಚಿಂತನೆಗಳು ರೈತ-ಕಾರ್ಮಿಕರ ಹಿತಕ್ಕಿಂತ ಬಂಡವಾಳಶಾಹಿಗಳ ಹಿತವನ್ನೇ ಆಧ್ಯತೆಯನ್ನಾಗಿರಿಸಿಕೊಂಡಿರುವ ಪ್ರಭುತ್ವದ ವಿರುದ್ಧ್ದ ಧ್ವನಿಯೆತ್ತಲು ಹಾಗೂ ಅವರು ಕನಸು ಕಂಡಿದ್ದ ಭಾರತವನ್ನು ನನಸು ಮಾಡಲು ನಮಗೆಲ್ಲರಿಗೂ ಪ್ರೇರಣೆಯಾಗಲಿ!!

Writer - ಎಲ್ದೋ ಹೊನ್ನೇಕುಡಿಗೆ

contributor

Editor - ಎಲ್ದೋ ಹೊನ್ನೇಕುಡಿಗೆ

contributor

Similar News