ಅಕ್ಕನ ಚಿಕಿತ್ಸೆಗಾಗಿ ತಂಗಿಯನ್ನೇ ಮಾರಿದ ದಂಪತಿ !

Update: 2021-02-27 03:58 GMT

ನೆಲ್ಲೂರ್ (ಆಂಧ್ರಪ್ರದೇಶ): ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ಮಗಳ ಚಿಕಿತ್ಸೆಗಾಗಿ 12 ವರ್ಷದ ಕಿರಿಯ ಮಗಳನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ನೆಲ್ಲೂರ್ ಜಿಲ್ಲೆಯ ದಿನಗೂಲಿ ದಂಪತಿ ತಮ್ಮ ಕಿರಿಯ ಮಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಹಿರಿಯ ಮಗಳಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಹನ್ನೆರಡು ವರ್ಷದ ಬಾಲಕಿಯನ್ನು ಖರೀದಿಸಿದ್ದ ಚಿನ್ನ ಸುಬ್ಬಯ್ಯ ಎಂಬ ವ್ಯಕ್ತಿ ಬುಧವಾರ ಆಕೆಯನ್ನು ವಿವಾಹವಾಗಿದ್ದಾನೆ. ಮರುದಿನವೇ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಆರೈಕೆ ಕೇಂದ್ರಕ್ಕೆ ಕರೆತಂದು ಕೌನ್ಸಿಲಿಂಗ್ ನೀಡಿದ್ದಾರೆ.

ಕೊತ್ತೂರು ಮೂಲದ ದಂಪತಿ, ತಮ್ಮ ನೆರೆಮನೆಯ ಸುಬ್ಬಯ್ಯ ಎಂಬಾತನನ್ನು ಸಂಪರ್ಕಿಸಿ, ಚೌಕಾಶಿ ನಡೆಸಿದ್ದರು. 25 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟರೂ ಕೊನೆಗೆ 10 ಸಾವಿರ ರೂಪಾಯಿಗೆ ವ್ಯವಹಾರ ಕುದುರಿತ್ತು.

ವಿರಸದ ಕಾರಣದಿಂದ ಸುಬ್ಬಯ್ಯನ ಪತ್ನಿ ಆತನನ್ನು ತ್ಯಜಿಸಿದ್ದಳು. ಈ ಹಿಂದೆ ಕೂಡಾ ಎರಡನೇ ಮಗಳನ್ನು ವಿವಾಹ ಮಾಡಿಕೊಡುವಂತೆ ಈ ಕುಟುಂಬಕ್ಕೆ ಆಫರ್ ನೀಡಿದ್ದ ಎನ್ನಲಾಗಿದೆ. ಬುಧವಾರ ಬಾಲಕಿಯನ್ನು ವಿವಾಹವಾದ ಬಳಿಕ ಆಕೆಯನ್ನು ದಾಂಪುರದಲ್ಲಿರುವ ಸಂಬಂಧಿಕರ ಮನೆಗೆ ಕರೆ ತರಲಾಗಿತ್ತು. ಬಾಲಕಿಯ ಚೀರಾಟವನ್ನು ನೆರೆಮನೆಯವರು ಕೇಳಿದ್ದರು. ಘಟನೆ ಬಗ್ಗೆ ಸುಬ್ಬಯ್ಯನ ಸಂಬಂಧಿಕರ ಬಳಿಗೆ ತೆರಳಿದ ನೆರೆಯವರು ಮಾಹಿತಿ ಕಲೆ ಹಾಕಿದರು. ಬಳಿಕ ಸ್ಥಳೀಯ ಸರಪಂಚನನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು ಎಂದು ಸಮಗ್ರ ಮಕ್ಕಳ ಅಭಿವೃದ್ಧಿ ಸೇವಾ ಅಧಿಕಾರಿ ವಿವರಿಸಿದ್ದಾರೆ.

ಸುಬ್ಬಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News