ರಂಜನ್‌ ಗೊಗೊಯಿ ವಿರುದ್ಧ ʼನ್ಯಾಯಾಂಗ ನಿಂದನೆʼ ಪ್ರಕರಣ ದಾಖಲಿಸಲು ಅನುಮತಿ ನಿರಾಕರಿಸಿದ ಅಟಾರ್ನಿ ಜನರಲ್

Update: 2021-02-27 07:09 GMT

ಹೊಸದಿಲ್ಲಿ: ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್‍ನ ವಿರುದ್ಧ ಹೇಳಿಕೆ ನೀಡಿದ ಅತ್ಯುನ್ನತ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಅವರಿಗೆ ಅನುಮತಿ ನೀಡಲು ಅಟಾರ್ನಿ ಜನರಲ್  ಕೆ ಕೆ ವೇಣುಗೋಪಾಲ್ ನಿರಾಕರಿಸಿದ್ದಾರೆ.

ಭಾರತದ ನ್ಯಾಯಾಂಗ 'ಜರ್ಝರಿತವಾಗಿದೆ' ಹಾಗೂ  ಕೋರ್ಟ್ ಗಳಿಂದ ವ್ಯಕ್ತಿಯೊಬ್ಬ  ಬೇಗ  ತೀರ್ಪು ಗಳಿಸುವ ಸಾಧ್ಯತೆಯಿಲ್ಲ ಎಂದು ಸುದ್ದಿ ವಾಹಿನಿ ಇಂಡಿಯಾ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ  ಜಸ್ಟಿಸ್ ಗೊಗೊಯಿ ಅವರು ಹೇಳಿದ್ದರು. ಈ ಹೇಳಿಕೆ ಮತ್ತಿತರ ಕೆಲ ಹೇಳಿಕೆಗಳನ್ನು ಆಧರಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಗೋಖಲೆ ಫೆಬ್ರವರಿ 23ರಂದು ಅನುಮತಿ ಕೋರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅಟಾರ್ನಿ ಜನರಲ್ "ಸಂಪೂರ್ಣ ಸಂದರ್ಶನವನ್ನು ವೀಕ್ಷಿಸುವ ಅವಕಾಶ ದೊರಕಿತ್ತು. ಅಲ್ಲಿ ಹೇಳಲಾಗಿದ್ದೆಲ್ಲಾ ಈ ಸಂಸ್ಥೆಯ ಒಳ್ಳೆಯದಕ್ಕಾಗಿ ಹಾಗೂ ಯಾವುದೇ ವಿಧದಲ್ಲಿ ನ್ಯಾಯಾಲಯಕ್ಕೆ ಕೆಟ್ಟ ಹೆಸರು ತರುವುದಿಲ್ಲ ಅಥವಾ ಜನರ ಕಣ್ಣಿನಲ್ಲಿ ಅದರ ಘನತೆ ಕುಗ್ಗುವುದಿಲ್ಲ" ಎಂದು ಹೇಳಿದ್ದರಲ್ಲದೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನಿರಾಕರಿಸಿದ್ದಾರೆ.

 ಜಸ್ಟಿಸ್ ಗೊಗೊಯಿ ಅವರ ಈ ಕೆಳಗಿನ ಕೆಲ ಹೇಳಿಕೆಗಳಿಗೆ ಗೋಖಲೆ ಆಕ್ಷೇಪಿಸಿದ್ದರು.

"ನಿಮಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಬೇಕು ಆದರೆ ನೀವು ನ್ಯಾಯಾಂಗವನ್ನು ಜರ್ಝರಿತಗೊಳಿಸಿದ್ದೀರಿ"

"ನೀವು ನ್ಯಾಯಾಲಯಕ್ಕೆ ಮೊರೆ ಹೋದರೆ ನಿಮ್ಮ ಕೊಳಕು ಬಟ್ಟೆಯನ್ನು ನ್ಯಾಯಾಲಯದಲ್ಲಿ ತೊಳೆಯುತ್ತೀರಿ ಅಷ್ಟೇ. ನಿಮಗೆ ತೀರ್ಪು ದೊರೆಯುವುದಿಲ್ಲ. ಇದನ್ನು ಹೇಳಲು ನನಗೆ ಹಿಂಜರಿಕೆಯಿಲ್ಲ"

"ತಮ್ಮ ಮಿಲಿಯಗಟ್ಟಲೆ ಹಣದೊಂದಿಗೆ ದೊಡ್ಡ ಸಂಸ್ಥೆಗಳು ಮಾತ್ರ ಸುಪ್ರೀಂ ಕೋರ್ಟ್‍ಗೆ ಹೋಗಬಹುದು."

"ಮಾಧ್ಯಮಗಳಲ್ಲಿ ಮಾಡಲಾಗಿರುವ ಟೀಕೆಗಳಿಗೆ ದುರದೃಷ್ಟವಶಾತ್ ಹಲವು ನ್ಯಾಯಾಧೀಶರು ಬಗ್ಗುತ್ತಿದ್ದಾರೆ."

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News