ಮ್ಯಾನ್ಮಾರ್‌ ನ ನಿರಾಶ್ರಿತರನ್ನು ಸ್ವಾಗತಿಸಲು ಮಿಝೋರಾಂ ಸಿದ್ಧವಾಗಿದೆ: ಮುಖ್ಯಮಂತ್ರಿ

Update: 2021-02-27 09:57 GMT

ಐಝಾಲ್: ಮ್ಯಾನ್ಮಾರ್‍ನಲ್ಲಿ ಪ್ರಜಾಪ್ರಭುತ್ವ ಪರ ಆಂದೋಲನದಲ್ಲಿ ಭಾಗವಹಿಸಿ ಕಿರುಕುಳಕ್ಕೊಳಗಾದವರು ಹಾಗೂ ಯಾವುದೇ ಮಿಝೋ ಮೂಲದವರನ್ನು ಮಿಝೋರಾಂಗೆ ಅಲ್ಲಿನ ಸರಕಾರ ಮತ್ತು ಜನರು ಮುಕ್ತ ಮನಸ್ಸಿನಿಂದ ಸ್ವಾಗತಿಸಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಝೊರಮ್ತುಂಗ ಹೇಳಿದ್ದಾರೆ.

ಮ್ಯಾನ್ಮಾರ್‍ನಲ್ಲಿ ಇತ್ತೀಚೆಗೆ ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆದಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿರಾಶ್ರಿತರು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳಿರುವುದರಿಂದ ಅದಕ್ಕಾಗಿ ಸರಕಾರ ಪೂರ್ವತಯಾರಿ ನಡೆಸುತ್ತಿದೆ, ಮ್ಯಾನ್ಮಾರ್ ಗಡಿ ಸಮೀಪದ ಜಿಲ್ಲೆಗಳ ಅಧಿಕಾರಿಗಳಿಗೆ ನಿಗಾ ವಹಿಸುವಂತೆ ಹೇಳಲಾಗಿದೆ ಎಂದು ಗೃಹ ಸಚಿವ ಲಾಲ್ಚಮ್ಲಿಯಾನ ಹೇಳಿದ್ದಾರೆ.

ಆಶ್ರಯ ಅರಸಿ ಬರುವ ಯಾರು ಕೂಡ, ಮುಖ್ಯವಾಗಿ ಅವರು ಮೂಲ ಮಿಝೋರಾಂನವರಾಗಿದ್ದರೆ ಅವರಿಗೆ ಸೂಕ್ತ ಸಹಾಯ ನೀಡಲಾಗುವುದು. ಆದರೆ ನಿರಾಶ್ರಿತರು ರಾಜ್ಯ ಪ್ರವೇಶಿಸಿದ್ದೇ ಆದಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಆದರೆ ಇಲ್ಲಿಯ ತನಕ ಮ್ಯಾನ್ಮಾರ್ ನಿರಾಶ್ರಿತರು ಗಡಿ ದಾಟಿ ಬಂದಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಮ್ಯಾನ್ಮಾರ್ ಗಡಿ ಸಮೀಪದ ಮಿಝೋರಾಂ ಜಿಲ್ಲೆಗಳಾದ ಚಂಫೈ, ಹ್ನಾತಿಯಾಲ್, ಸಿಯಾಹ ಹಾಗೂ ಲಾಂಗ್ತಲೈ ಇಲ್ಲಿನ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News