"ಕಾಂಗ್ರೆಸ್‌ ದುರ್ಬಲವಾಗುತ್ತಿರುವುದು ನಮಗೆ ಕಾಣಿಸುತ್ತಿದೆ, ಅದಕ್ಕಾಗಿಯೇ ನಾವಿಂದು ಸಭೆ ಸೇರಿದ್ದೇವೆ"

Update: 2021-02-27 13:17 GMT
photo: twitter

ಹೊಸದಿಲ್ಲಿ:  ಕಳೆದ  ವರ್ಷ ಪಕ್ಷದ ನಾಯಕತ್ವ ಶೈಲಿಯನ್ನು ಪ್ರಶ್ನಿಸಿ ವರಿಷ್ಠರಿಗೆ ಪತ್ರ ಬರೆದಿದ್ದ  ಕಾಂಗ್ರೆಸ್ ಪಕ್ಷದ ಹಿರಿಯ 23 ಮಂದಿ ಧುರೀಣರ ಪೈಕಿ ಹಲವರು ಜಮ್ಮು ಕಾಶ್ಮೀರದಲ್ಲಿ  ಶನಿವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮತ್ತೆ ಪಕ್ಷ ನಾಯಕತ್ವಕ್ಕೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದಾರೆ.

ಮಾಜಿ ರಾಜ್ಯಸಭಾ ಸಂಸದ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ್ ಶರ್ಮ, ಸಂಸದ ವಿವೇಕ್ ತಂಖ, ಮನೀಶ್ ತಿವಾರಿ, ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡ ಹಾಗೂ ನಟ-ರಾಜಕಾರಣಿ ರಾಜ್ ಬಬ್ಬರ್ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

"ನಿಜವೇನೆಂದರೆ ಕಾಂಗ್ರೆಸ್ ದುರ್ಬಲವಾಗುತ್ತಿರುವುದು ನಮಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ನಾವು ಇಂದು ಸೇರಿದ್ದೇವೆ. ನಾವು ಈ ಹಿಂದೆಯೂ ಸಭೆ ಸೇರಿದ್ದೆವು ಹಾಗೂ ನಾವು ಜತೆಯಾಗಿ ಪಕ್ಷವನ್ನು ಬಲಪಡಿಸಬೇಕಿದೆ" ಎಂದು ಸಿಬಲ್ ಹೇಳಿದರು.

ಇತ್ತೀಚೆಗೆ ಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರ ಹಾಗೂ ದಕ್ಷಿಣದ ಕುರಿತು ನೀಡಿದ್ದ ಹೇಳಿಕೆಯ ಕುರಿತಂತೆ ಪರೋಕ್ಷವಾಗಿ ತಿರುಗೇಟು ನೀಡಿದ ಗುಲಾಂ ನಬಿ ಆಜಾದ್, "ಜಮ್ಮು ಕಾಶ್ಮೀರ ಅಥವಾ ಲಡಾಖ್ ಆಗಿರಬಹುದು ನಾವು ಎಲ್ಲಾ ಜಾತಿ, ಧರ್ಮಗಳ ಜನರನ್ನು ಸಮಾನವಾಗಿ ಗೌರವಿಸುತ್ತೇವೆ. ಇದು ನಮ್ಮ ಬಲ ಹಾಗೂ ಇದನ್ನು ನಾವು ಮುಂದುವರಿಸುತ್ತೇವೆ" ಎಂದರು.

ಇಂದಿನ ಸಭೆ  ʼರಾಹುಲ್ ಅವರಿಗೆ ಒಂದು ಸಂದೇಶವಾಗಿದೆʼ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದರು.

ಸಭೆ ಕುರಿತು ಪ್ರತಿಕ್ರಿಯಿಸಿದ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, "ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಈ ನಾಯಕರು ಆ ರಾಜ್ಯಗಳಿಗೆ ಹೋಗಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಬಹುದಾಗಿತ್ತು" ಎಂದರಲ್ಲದೆ ಅದೇ ಸಮಯ  "ಅವರ ಬಗ್ಗೆ ಹೆಮ್ಮೆಯಿದೆ" ಎಂದರು.

"ಜಮ್ಮುವಿನಲ್ಲಿರುವ ಪ್ರತಿಯೊಬ್ಬರೂ ನಮ್ಮ ಹಿರಿಯ ನಾಯಕರು, ನಾವು ಅವರ ಬಗ್ಗೆ ಹೆಮ್ಮೆ ಪಡುತ್ತೇವೆ, ಅವರು ಕೂಡ. ನಾವು ಒಂದು ಕುಟುಂಬವಿದ್ದಂತೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News