ಸರಕಾರಿ ವ್ಯಾಜ್ಯಗಳ ನಿರ್ವಹಣೆಯಲ್ಲಿ ದತ್ತಾಂಶ ತುಂಬಾ ಮುಖ್ಯ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-02-27 17:24 GMT

ಬೆಂಗಳೂರು, ಫೆ.27: ನ್ಯಾಯಾಂಗ ವ್ಯವಸ್ಥೆಯ ಆಧಾರದ ಮೇಲೆ ದೇಶದ ಗುಣಮಟ್ಟವನ್ನು ಅಳೆಯಲಾಗುತ್ತದೆ. ಸರಕಾರಿ ವ್ಯಾಜ್ಯಗಳ ನಿರ್ವಹಣೆಯಲ್ಲಿ ದತ್ತಾಂಶ ತುಂಬಾ ಮುಖ್ಯ. ಹೀಗಾಗಿ ಅದನ್ನು ಬಲಪಡಿಸಲು ಪ್ರತಿ ಇಲಾಖೆಯಲ್ಲಿ ತಾಂತ್ರಿಕ ಘಟಕವನ್ನು ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ವಿವಾದ ಪರಿಹಾರ ನೀತಿ ಬಿಡುಗಡೆ ಸಮಾರಂಭದಲ್ಲಿ ಕಾಫಿ ಟೇಬಲ್ ಪುಸ್ತಕ 'ದಿ ಲೀಡರ್ ಆಫ್ ದಿ ಬಾರ್' ಎಂಬ ಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳಲ್ಲಿ ಕೆಲವು ವಿವಾದಗಳು ಇತ್ಯರ್ಥವಾಗುತ್ತಿಲ್ಲ. ಸರಕಾರಿ ವ್ಯಾಜ್ಯಗಳ ನಿವಾರಣೆ ತುಂಬಾ ಅಗತ್ಯ. ವಿವಾದಗಳನ್ನು ಬಗೆಹರಿಸಲು ದಕ್ಷತೆ ಹೆಚ್ಚಬೇಕು. ಸ್ಪಂದನಾಶೀಲತೆ ನೀಡುವ ಉದ್ದೇಶದಿಂದ ಕೆಲಸ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿವಾದ ನಿರ್ಣಯ ನೀತಿ ತುಂಬಾ ಅನುಕೂಲಕರವಾಗಿದೆ ಎಂದು ಅವರು ಹೇಳಿದರು.

ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನ್ಯಾಯಾಲಯಗಳಲ್ಲಿ ವಿವಿಧ ಇಲಾಖೆಗಳ ನಡುವೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಕಾರಣವಾಗಿರುವ ಕಾನೂನುಗಳಲ್ಲಿನ ಅಸ್ಪಷ್ಟತೆಯನ್ನು ಸರಿಪಡಿಸಲಾಗುವುದು ಎಂದು ಹೇಳಿದರು. ವಿವಿಧ ಇಲಾಖೆಗಳ ನಡುವೆ ಸಾವಿರಾರು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಕಾನೂನುಗಳಲ್ಲಿ ಇರುವ ಅಸ್ಪಷ್ಟತೆಯಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಹೀಗಾಗಿ ಕಾನೂನಿನಲ್ಲಿರುವ ಅಸ್ಪಷ್ಟತೆಯನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನ್ಯಾಯಾಲಯಗಳಲ್ಲಿ ಸರಕಾರದ ಕೇಸ್‍ಗಳ ಸಂಖ್ಯೆ ಹೆಚ್ಚಿದೆ. ಕಾನೂನಿನಲ್ಲಿಯೇ ಕೆಲ ನ್ಯೂನತೆಗಳಿವೆ. ಆ ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ. ಅದಕ್ಕಾಗಿಯೇ ಈ ವಿವಾದ ನಿರ್ಣಯ ನೀತಿಯನ್ನು ಜಾರಿಗೆ ತರಲಾಗಿದೆ. ಈ ನೀತಿಗೆ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಇಲಾಖೆಗಳ ಮುಖ್ಯಸ್ಥರು ಮತ್ತು ಅಡ್ವಕೇಟ್ ಜನರಲ್ ನಡುವೆ ಸಮನ್ವಯ ಇರಬೇಕೆಂಬುದು ನನ್ನ ಭಾವನೆ. ಕಾನೂನು ರಚನೆ ಮಾಡುವುದು ಹೈ ಪ್ರೊಫೈಲ್ ಜಾಬ್. ಕಾನೂನು ರಚನೆ ಮಾಡುವಾಗ ಒಂದು ಅಲ್ಪವಿರಾಮ, ಪೂರ್ಣವಿರಾಮ ಕೂಡ ಹಲವಾರು ಅರ್ಥಗಳನ್ನು ನೀಡುತ್ತದೆ. ಇದರಿಂದ ಕಾನೂನು ಸರಳವಾಗಬೇಕು. ಅದು ಬಿಟ್ಟು ತೊಡಕು ಆಗಬಾದರು. ಈ ರೀತಿಯ ಸಮಸ್ಯೆ ನಿವಾರಣೆ ಆಗಬೇಕಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಯಾವ ರಾಜ್ಯದಲ್ಲಿ ಶಾಂತಿ ನೆಲೆಸಿರುತ್ತದೆಯೋ ಆ ರಾಜ್ಯ ಸದೃಢವಾಗಿರುತ್ತದೆ. ಕಾನೂನು ಮತ್ತು ನ್ಯಾಯಾಂಗದಲ್ಲಿಯೂ ಕರ್ನಾಟಕ ಪ್ರಗತಿಪರವಾಗಿದೆ. ಕಾಫಿ ಟೇಬಲ್ ಬುಕ್ ಅದ್ಭುತವಾಗಿದೆ ಎಂದು ಬಸವರಾಜ ಬೊಮ್ಮಾಯಿ ಮೆಚ್ವುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್.ಬನ್ನೂರಮಠ, ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಶಾಸಕ ರಿಝ್ವಾನ್ ಅರ್ಶದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News