ಸರಕಾರಕ್ಕೆ ಗಡಿನಾಡ ಕನ್ನಡಿಗರ ಸ್ಥಿತಿಗತಿ ಆದ್ಯತೆ ಆಗಬೇಕಾಗಿದೆ: ಡಾ.ಸಿ.ಸೋಮಶೇಖರ್

Update: 2021-02-27 18:02 GMT

ಬೆಂಗಳೂರು, ಫೆ.27: ಗಡಿ ಭಾಗದಲ್ಲಿರುವ ಕನ್ನಡಿಗರ ಸ್ಥಿತಿ ಚಿಂತಾಜನಕವಾಗಿದೆ. ಸಂಕಷ್ಟದಲ್ಲಿರುವ ಈ ಕನ್ನಡಿಗರ ಬಗ್ಗೆ ಬೆಳಕು ಚೆಲ್ಲುವ ಕೆಲಸವಾಗಬೇಕಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಪ್ರಾಯಿಸಿದ್ದಾರೆ.

ಶನಿವಾರ ಹೃದಯವಾಹಿನಿ ಕರ್ನಾಟಕದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ `14ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ 2021'ರ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇವತ್ತು ರಾಜ್ಯದ ಸುತ್ತಲಿರುವ ಗಡಿಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸ್ಥಿತಿಗತಿಗಳನ್ನು ಆದ್ಯತೆಯಾಗಿಸಿಕೊಂಡು ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿರುವ ಬೆಳಗಾವಿಯ ಗಡಿ ಪ್ರದೇಶಗಳಾದ ಅಕ್ಕಲಕೋಟೆ ಹಾಗೂ ದಕ್ಷಿಣ ಸೊಲ್ಲಾಪುರದ ಭಾಗಗಳಲ್ಲಿ ಅನ್ಯ ಭಾಷಿಕರ ಸಮೀಕ್ಷೆ ನಡೆಸಲು ಕೆಲ ಗ್ರಾಮ ಪಂಚಾಯತ್‍ಗಳಿಗೆ ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿರುವುದು ದುರ್ದೈವ ಸಂಗತಿ. ಇದನ್ನು ಎಲ್ಲ ಕನ್ನಡಿಗರು ತೀವ್ರವಾಗಿ ವಿರೋಧಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೂ ನಾವು ಸಂವೇದನಾಶೀಲರಾಗಿ ಸ್ಪಂದಿಸಬೇಕಿದೆ. ಜತೆಗೆ ಆರು ರಾಜ್ಯಗಳ ಗಡಿ ಭಾಗದಲ್ಲಿನ ಕನ್ನಡಿಗರಿಗೂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಸರಕಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ 2021ನೇ ಸಾಲಿನ `ಹೃದಯವಂತ ಪ್ರಶಸ್ತಿ'ಯನ್ನು ಸುರೇಶ್‍ ಕುಮಾರ್ (ಪರಿಸರ), ಎಚ್.ರಾಜಣ್ಣ (ಆಡಳಿತ ಸೇವೆ), ಎಚ್.ಜಿ. ಅನಿಲ್‍ ಕುಮಾರ್ (ಪತ್ರಿಕೋದ್ಯಮ), ಅಬ್ದುಲ್ ಸುಬಾನ್ (ಶಿಕ್ಷಣ), ಕೆ.ವನಿತಾ (ಶಿಕ್ಷಣ), ವಿನಯ್ ಕೆ.ಸಿ. ರಾಜಾವತ್ (ಸಮಾಜ ಸೇವೆ), ಬಾಣಾವರ ವಿಜಯಕುಮಾರ್ (ಸಂಗೀತ), ವಿಜಯ್ ಶ್ರೀನಿವಾಸ್ (ಸ್ಯಾಕ್ಸೋಫೋನ್), ಕೆ.ಪಿ. ನಾರಾಯಣ್ (ನಾದಸ್ವರ) ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಿತ್ತೂರಿನ ಆರ್‍ವಿಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆರ್.ವೆಂಕಟಸ್ವಾಮಿ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಹಾಜಿ ಮುನೀರ್ ಬಾವ, ಮಸ್ಕಟ್ ಒಮಾನ್ ಕನ್ನಡಿಗರು ಅಧ್ಯಕ್ಷ ಎಸ್‍ಡಿಟಿ ಪ್ರಸಾದ್, ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್, ಸ್ವಾಮಿ ಎಂಟರ್‍ಪ್ರೈಸಸ್ ಮುಖ್ಯಸ್ಥ ಗೋನಾ ಸ್ವಾಮಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News