ಗ್ರಾಹಕರ ಲಕ್ಷ್ಯ ಬದಲಿಸಿ ಖಜಾನೆ ತುಂಬಿಸುವ ಸುಲಭ ಉಪಾಯವೇ?

Update: 2021-02-28 08:45 GMT

► ಭಾಗ 2

2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಹಸ್ತಾಂತರಗೊಳಿಸುವ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಅಬಕಾರಿ ಸುಂಕ ಮತ್ತು ತೆರಿಗೆ ಪೆಟ್ರೋಲ್‌ಗೆ ಲೀಟರ್ ಒಂದರ ರೂ. 9.48 ಮತ್ತು ಡೀಸೆಲ್‌ಗೆ ಲೀಟರ್ ಒಂದರ ರೂ. 3.56. ಅಂದರೆ ಕಚ್ಚಾ ತೈಲ ಬೆಲೆ ಇಳಿಕೆಯಾದ ಬೆಲೆ ಇಳಿಸುವುದರ ಬದಲು ಬಿಜೆಪಿ ಸರಕಾರ ಹೆಚ್ಚುವರಿ ಅಬಕಾರಿ ಸುಂಕ ಹೇರಿಕೆ ಮಾಡುತ್ತಾ, ಇದೀಗ ಪೆಟ್ರೋಲ್ ಲೀಟರ್‌ಗೆ ರೂ. 9.48ರ ಬದಲು ರೂ. 32.98 ರಷ್ಟು ಸುಂಕ ವಿಧಿಸಲಾಗುತ್ತಿದೆ. ಅಂದರೆ ಏರಿಕೆ ಪ್ರಮಾಣ ಸುಮಾರು ಶೇ.348(ಮೂರುವರೆ ಪಟ್ಟು) ರಷ್ಟು.

► ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾದ ನಿರಂತರ ಏರುಗತಿಯಲ್ಲಿದ್ದ ತೈಲ ಉತ್ಪನ್ನಗಳ ಮಾರಾಟ ಬೆಲೆಗಳು:

ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಇತರ ಒಕ್ಕೂಟ ಸರಕಾರಗಳು ತೈಲ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆಯನ್ನು ಅಗತ್ಯ ವಸ್ತುಗಳೆಂದು ಪರಿಗಣಿಸಿ ಅವುಗಳ ಮಾರಾಟ ಬೆಲೆ ನಿಗದಿಗೊಳಿಸುವಾಗ ಸಾಕಷ್ಟು ಎಚ್ಚರ ವಹಿಸುತ್ತಿದ್ದವು. ವಿಶೇಷವಾಗಿ ಅಗತ್ಯ ವಸ್ತುಗಳಾದ ಆಹಾರ ಧಾನ್ಯಗಳು, ಹಣ್ಣು ತರಕಾರಿ ಇತ್ಯಾದಿ ವಸ್ತುಗಳ ರವಾನೆ, ವಿತರಣೆಗೆ ಮತ್ತು ಪ್ರಯಾಣಿಕ ವಾಹನಗಳು ಬಹುತೇಕ ಡೀಸೆಲ್ ಇಂಧನವನ್ನೇ ಬಳಸುವುದರಿಂದ ಡೀಸೆಲ್ ಬೆಲೆಯನ್ನು ಪೆಟ್ರೋಲ್ ಬೆಲೆಗಿಂತ ಕನಿಷ್ಠ ರೂ. 15ರಿಂದ 20 ರವರೆಗೆ ಕಡಿಮೆ ಮಾರಾಟ ದರ ನಿಗದಿ ಮಾಡುತ್ತಾ ಬಂದಿದ್ದವು. ಆದರೆ ಈಗಿನ ಮೋದಿ ನೇತೃತ್ವದ ಕೇಂದ್ರ ಸರಕಾರ ಡೀಸೆಲ್ ಮಾರಾಟಕ್ಕಿರುವ ಸದರಿ ರಿಯಾಯಿತಿಯನ್ನು ಹಂತಹಂತವಾಗಿ ಕಡಿತಗೊಳಿಸುತ್ತಾ ಆ ಬೆಲೆ ವ್ಯತ್ಯಾಸವನ್ನು ಇದೀಗ ರೂ. 5 ಅಥವಾ 6ಕ್ಕೆ ಸೀಮಿತಗೊಳಿಸಿದೆ. ಈ ಕಾರಣದಿಂದಲೇ ಈಗ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೆ ಜನ ಸಾಮಾನ್ಯರ ಪ್ರಯಾಣದರವೂ ದುಪ್ಪಟ್ಟು ಆಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ಮಾಡಿರುವ ಅಧ್ಯಯನ ವರದಿಯೊಂದರ ಪ್ರಕಾರ ಪ್ರತಿ ಕುಟುಂಬಕ್ಕೆ ಅಂದಾಜು ತಿಂಗಳೊಂದರ ರೂ. 4,000ದಿಂದ 5,000ದಷ್ಟು ಹೆಚ್ಚುವರಿ ಹಣಕಾಸು ಹೊರೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಜನಸಾಮಾನ್ಯರಿಗೆ ಆಗುತ್ತಿರುವ ಈ ಅಧಿಕ ಹೊರೆಗೆ ಅತಿಯಾದ ಡೀಸೆಲ್ ಬೆಲೆಯೇ ಮುಖ್ಯ ಕಾರಣ ಎಂದು ಬೇರೆ ಹೇಳಬೇಕಿಲ್ಲ. 2014ರ ಪೂರ್ವದಲ್ಲಿ ಡೀಸೆಲ್‌ನ್ನು ರೂ. 30ಕ್ಕೆ ಮತ್ತು ಪೆಟ್ರೋಲ್ ರೂ. 40ಕ್ಕೆ ಒದಗಿಸಿ ಜನರಿಗೆ ‘ಅಚ್ಛೇದಿನ್’ ಬರಲಿವೆ ಎಂದು ಎಲ್ಲೆಡೆ ಪ್ರಚಾರಗೈದ ಪಕ್ಷ ಈ ರೀತಿ ಮಾಡುವುದು ಸಾಧುವೇ? ಇದೇನಾ ಅಚ್ಛೇದಿನ್?

► 2008 ಮತ್ತು 2014ರ ಮಧ್ಯೆ ಸರಕಾರ ಮಾಲಕತ್ವದ ತೈಲ ಕಂಪೆನಿಗಳ ನಿಗದಿತ ಮಾರಾಟ ಬೆಲೆಯೊಂದಿಗೆ ಪೈಪೋಟಿ ಮಾಡಲಾಗದೆ ಮಾರಾಟ ಕೇಂದ್ರಗಳನ್ನು ಮುಚ್ಚಿದ ಖಾಸಗಿ ಕಂಪೆನಿಗಳು:

ಕಚ್ಚಾತೈಲದ ತೀವ್ರ ಬೆಲೆ ಏರಿಕೆ ಕಂಡ 2008 ಮತ್ತು 2014ರ ಮಧ್ಯೆ ಅಂದಿನ ಸರಕಾರ ಜನ ಸಾಮಾನ್ಯರು ಗ್ರಾಹಕ ಹಿತಾನುಸಾರ ಸಾಧ್ಯವಾದಷ್ಟು ಕಡಿಮೆ ದರದಲ್ಲೇ ತೈಲ ಉತ್ಪನ್ನಗಳ ಮಾರಾಟ ಬೆಲೆ ಹತೋಟಿಯಲ್ಲೇ ಪರಿಷ್ಕರಿಸುತ್ತಾ ಇದ್ದುದರಿಂದ ಆ ಬೆಲೆಯೊಂದಿಗೆ ಪೈಪೋಟಿ ಮಾಡಲಾಗದೆ ಖಾಸಗಿ ತೈಲ ಕಂಪೆನಿಗಳಾದ ರಿಲಯನ್ಸ್, ಎಸ್ಸಾರ್, ಶೆಲ್ ಮುಂತಾದವು ತಮ್ಮ ಮಾರಾಟ ಕೇಂದ್ರ (ಬಂಕ್)ಗಳನ್ನು ಮುಚ್ಚಿದ್ದು, ಅದನ್ನು ಮತ್ತೆ ಬಿಜೆಪಿ ಸರಕಾರ ಬಂದ ನಂತರ ಆರಂಭಿಸಿರುವುದನ್ನು ಸಾರ್ವಜನಿಕರು ತಿಳಿದಿರಬಹುದು. ಈ ಉದಾಹರಣೆಯೊಂದೇ ಅಂದಿನ ಸರಕಾರ ಎಷ್ಟರ ಮಟ್ಟಿಗೆ ತೈಲ ಉತ್ಪನ್ನಗಳ ಮಾರಾಟ ಬೆಲೆಗಳನ್ನು ಕನಿಷ್ಠ ಮಟ್ಟದಲ್ಲಿ ಪರಿಷ್ಕೃರಿಸುತ್ತಾ ಬಂದಿತ್ತು ಎಂಬುದನ್ನು ತಿಳಿಯಬಹುದಾಗಿದೆ.

ಕೇಂದ್ರದ ದಿನವಹಿ ಬೆಲೆ ಪರಿಷ್ಕರಣೆ ಗ್ರಾಹಕರ ದಿಕ್ಕು ತಪ್ಪಿಸಿಖಜಾನೆ ಭರ್ತಿ ಮಾಡುವ ಯೋಜನೆ ಆಗಿತ್ತೇ? ಈ ಹಿಂದೆ ಕಚ್ಚಾತೈಲ ಬೆಲೆ ಏರಿಕೆ ಸಂದರ್ಭಗಳಲ್ಲಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಅಂದಿನ ಸರಕಾರಗಳು ರೂ. 1, 2 ಅಥವಾ ತೀವ್ರ ಏರಿಕೆ ಸಂದರ್ಭಗಳಲ್ಲಿ 3 ಅಥವಾ ರೂ. 4 (ಜುಲೈ 2008ರಲ್ಲಿ ಪೆಟ್ರೋಲ್‌ಗೆ ರೂ. 4.26 ಏರಿಕೆಯಾಗಿತ್ತು)ರಷ್ಟು ಏರಿಕೆ ಮಾಡುತ್ತಿದ್ದವು. ಈ ರೀತಿ ರೂ. 2ರಿಂದ 4 ರಷ್ಟು ಏರಿಕೆ ಕಂತಿನಲ್ಲಿ ಆದಾಗ ಗ್ರಾಹಕರಿಗೆ ವ್ಯತ್ಯಾಸ ತಕ್ಷಣ ತಿಳಿದು ಪ್ರತಿಭಟಿಸುತ್ತಿದ್ದರು. ಅದೇ ದಿನವಹಿ 10, 20ರಿಂದ 30 ಪೈಸೆಯಷ್ಟು ಏರಿಸಿದಾಗ ತಕ್ಷಣಕ್ಕೆ ಅದರ ಪರಿಣಾಮ ಗ್ರಾಹಕನಿಗೆ ಅಷ್ಟಾಗಿ ತಟ್ಟುವುದಿಲ್ಲ. ಆದರೆ ದಿನವಹಿ 10ರಿಂದ 20 ಪೈಸೆ ತಿಂಗಳೊಂದರ ರೂ. 2ರಿಂದ 3 ಆಗುತ್ತದೆ ಎಂಬುದನ್ನು ಗ್ರಾಹಕ ಅರಿಯಬೇಕು. ಉದಾ: ಕಳೆದ ಅಕ್ಟೋಬರ್ (2020)ನ ಪ್ರಥಮ ವಾರದಲ್ಲಿ ಪೆಟ್ರೋಲ್ ಬೆಲೆ ರೂ. 73.55 ಮತ್ತು ಡೀಸೆಲ್ ರೂ.65.62 ಇತ್ತು. ಇದೀಗ ದಿನವಹಿ ಏರುತ್ತಾ ಫೆಬ್ರವರಿ (2021) 16ರಂದು ಪೆಟ್ರೋಲ್‌ಗೆ ರೂ. 92.54 ಮತ್ತು ಡೀಸೆಲ್‌ಗೆ ರೂ. 84.75ಕ್ಕೆ ಏರಿಕೆಯಾಗಿದೆ. ಇದು ಬೆಂಗಳೂರಿನಲ್ಲಿ ಕಂಡಂತಹ ಸಾರ್ವಕಾಲಿಕ ಗರಿಷ್ಠ ಮಾರಾಟ ಬೆಲೆಯಾಗಿದೆ. ದಿನವಹಿ ಮಾರಾಟ ಬೆಲೆ ಪರಿಷ್ಕರಣೆಯಲ್ಲಿ ಕೇಂದ್ರ ಸರಕಾರದ ಹಿಡನ್ ಅಜೆಂಡಾ ಇದೆಯೇ? ಹೌದು, ಗ್ರಾಹಕರ ದಿಕ್ಕು ತಪ್ಪಿಸಿ ದೇಶದ ಖಜಾನೆಗೆ ಯಥೇಚ್ಛ ದ್ರವ್ಯ ತುಂಬಿಸುವುದರಲ್ಲಿ ಮೋದಿ ಸರಕಾರದ ಮತ್ತೊಂದು ಹಿಡನ್ ಅಜೆಂಡಾ ಇರುವುದನ್ನು ಅರ್ಥ ಮಾಡಿಕೊಳ್ಳಬಹುದು. ಓದುಗರೆಲ್ಲ ತಿಳಿದ ಹಾಗೆ ದೇಶ ನೋಟು ಅಮಾನ್ಯದ ಕೆಲಸ ಆರ್ಥಿಕ ಕ್ಷೇತ್ರದ ಭದ್ರ ಪಂಚಾಗವನ್ನು ಶಿಥಿಲಗೊಳಿಸಿ ಒಟ್ಟಾರೆ ದೇಶದ ಹಿತಾಸಕ್ತಿಗೆ ಮಾರಕ ಹೊಡೆತ ನೀಡಿರುವ ತೀರ್ಮಾನವದು. ಅದು ಪ್ರಧಾನಿ ಮೋದಿಯವರ ವೈಯಕ್ತಿಕ ತೀರ್ಮಾನವೂ ಹೌದು. ಈ ಬೃಹತ್ ಪ್ರಮಾದ ಸಾಲದುದ್ದಕ್ಕೆ ಮತ್ತೆ ತರಾತುರಿಯಲ್ಲಿ ಜಾರಿಗೊಳಿಸಿದ ಜಿಎಸ್‌ಟಿ ಹೇರಿಕೆ ದೇಶದ ಒಟ್ಟಾರೆ ಆರ್ಥಿಕ ರಂಗಕ್ಕೆ ಮಾರಕ ಹೊಡೆತ ನೀಡಿತು. ಸದರಿ ಬೃಹತ್ ಪ್ರಮಾದಗಳ ಪರಿಣಾಮವಾಗಿ ದೇಶದ ಆರ್ಥಿಕ ರಂಗ ಮಕಾಡೆ ಮಲಗಿತ್ತು. ಮುಂದೆ ದೇಶದ ಒಟ್ಟಾರೆ ಆರ್ಥಿಕ ಪ್ರಗತಿ(ಜಿಡಿಪಿ) ನಕಾರಾತ್ಮಕ ಬೆಳವಣಿಗೆಯ ಸೂಚನೆ ದೊರೆಯುತ್ತಿದ್ದಂತೆ ಸರಕಾರ ತನ್ನ ಖಜಾನೆಗೆ ಬೃಹತ್ ಆದಾಯ ಸಂದಾಯಗೊಳಿಸುತ್ತಿದ್ದ ಪೆಟ್ರೋಲಿಯಂ ಉತ್ಪನ್ನಗಳ ಅಬಕಾರಿ ಸುಂಕ ಮತ್ತು ಮಾರಾಟ ತೆರಿಗೆ ಹೆಚ್ಚುವರಿಯಾಗಿ ಪರಿಷ್ಕರಿಸುವತ್ತ ತನ್ನ ಯೋಜನೆಯನ್ನು ಎರಡು ವಿಧಾನದಲ್ಲಿ ರೂಪಿಸಿತು. ಅದರ ಮೊದಲ ವಿಧಾನವೇ ಈ ದಿನವಹಿ ಮಾರಾಟ ತೆರಿಗೆ ಪರಿಷ್ಕರಣೆ. ಎರಡನೇ ಯೋಜನೆ ಕೆಳಗಿನಂತಿದೆ.

► ಯಾವುದೇ ಲಂಗುಲಗಾಮಿಲ್ಲದೆ ಹೆಚ್ಚುವರಿ ಅಬಕಾರಿ ಸುಂಕ ಹೇರಿಕೆ:

2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಹಸ್ತಾಂತರಗೊಳಿಸುವ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಅಬಕಾರಿ ಸುಂಕ ಮತ್ತು ತೆರಿಗೆ ಪೆಟ್ರೋಲ್‌ಗೆ ಲೀಟರ್ ಒಂದರ ರೂ. 9.48 ಮತ್ತು ಡೀಸೆಲ್‌ಗೆ ಲೀಟರ್ ಒಂದರ ರೂ. 3.56. ಅಂದರೆ ಕಚ್ಚಾ ತೈಲ ಬೆಲೆ ಇಳಿಕೆಯಾದ ಬೆಲೆ ಇಳಿಸುವುದರ ಬದಲು ಬಿಜೆಪಿ ಸರಕಾರ ಹೆಚ್ಚುವರಿ ಅಬಕಾರಿ ಸುಂಕ ಹೇರಿಕೆ ಮಾಡುತ್ತಾ, ಇದೀಗ ಪೆಟ್ರೋಲ್ ಲೀಟರ್‌ಗೆ ರೂ. 9.48ರ ಬದಲು ರೂ. 32.98 ರಷ್ಟು ಸುಂಕ ವಿಧಿಸಲಾಗುತ್ತಿದೆ. ಅಂದರೆ ಏರಿಕೆ ಪ್ರಮಾಣ ಸುಮಾರು ಶೇ.348(ಮೂರುವರೆ ಪಟ್ಟು) ರಷ್ಟು. ಇನ್ನು ಹಿಂದಿನ ಸರಕಾರಗಳು ಬಹು ಅಗತ್ಯದ ವಸ್ತುವೆಂದು ಪರಿಗಣಿಸಿ ಡೀಸೆಲ್‌ನ ಅಬಕಾರಿ ಸುಂಕ ಲೀಟರ್ ಒಂದರ ಕೇವಲ ರೂ.3.56ರ ಕನಿಷ್ಠ ಸುಂಕವನ್ನು ರೂ. 31.83ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು (9 ಪಟ್ಟು) ಶೇ. 893 ಹೆಚ್ಚುವರಿ ಸುಂಕ. ಇದು ಬಹುಶಃ ಜಗತ್ತಿನ ಯಾವುದೇ ದೇಶದಲ್ಲಿ ಇರದ ತೆರಿಗೆ ರೇಟು! ಇದು ಸಾಲದ್ದಕ್ಕೆ ರಾಜ್ಯ ಮಾರಾಟ ತೆರಿಗೆ ಪ್ರತ್ಯೇಕ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಪೆಟ್ರೋಲ್‌ಗೆ ರೂ. 18.36 ಮಾರಾಟ ತೆರಿಗೆ ವಿಧಿಸುತ್ತಿದ್ದರೆ, ಈಗಿನ ಬಿಜೆಪಿ ಸರಕಾರ ಅದನ್ನು ರೂ. 22.03ಕ್ಕೆ ಮತ್ತು ಡೀಸೆಲ್‌ಗೆ ಚಾಲ್ತಿದರ 10.38ರಿಂದ ರೂ. 15.09ಕ್ಕೆ ಏರಿಸಿದೆ. ಪ್ರಸ್ತುತ ತೈಲ ಕಂಪೆನಿಗಳ ಮೂಲ ಬೆಲೆ ಪೆಟ್ರೋಲ್‌ಗೆ ಲೀ. 1ರ ರೂ. 30 ಮತ್ತು ಡೀಸೆಲ್‌ಗೆ ಲೀ. 1ರ ರೂ. 31.00. ಅಂದರೆ ರೂ. 30 ಮೂಲಬೆಲೆಯ ಪೆಟ್ರೋಲನ್ನು (ಸುಂಕ ರೂ. 33 + ರಾಜ್ಯ ತೆರಿಗೆ ರೂ. 22+ 3.42 ಡೀಲರ್ ಕಮಿಷನ್ ಸೇರಿಸಿ) 92.54 ಹಾಗೂ ರೂ. 31.83 ಮೂಲಬೆಲೆಯ ಡೀಸೆಲ್‌ನ್ನು (31.83+15.09+ಡೀಲರ್ ಕಮಿಷನ್ ರೂ. 2.40 ಸೇರಿಸಿ) ಸರಕಾರ ರೂ. 84.75ಕ್ಕೆ ಮಾರುತ್ತಿದೆ! ಒಟ್ಟಾರೆ ಜನ ಅರ್ಥ ಮಾಡಬೇಕಾಗಿರುವುದೇನೆಂದರೆ ಇಂದಿನ ಕಚ್ಚಾತೈಲ ಬೆಲೆಯ ಅನುಸಾರ ಲೀ. 1ರ ರೂ. 30ರ ಪೆಟ್ರೋಲ್/ಡೀಸೆಲ್‌ನ್ನು ಪ್ರಸ್ತುತ ಕ್ರಮವಾಗಿ ರೂ. 92.54 ಮತ್ತು 84.75ಕ್ಕೆ ಮಾರಲಾಗುತ್ತಿದೆ. ಈ ಪ್ರಮಾಣದ ತೆರಿಗೆ ಜಗತ್ತಿನ ಬೇರಾವುದೇ ರಾಷ್ಟ್ರದಲ್ಲಿ ಹೇರಲಾಗುತ್ತಿಲ್ಲ. ಈ ಕಾರಣದಿಂದಲೇ ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ಅಗ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ.

► ಹೆಚ್ಚುವರಿ ಅಬಕಾರಿ ಸುಂಕ ವಸೂಲಿಯಿಂದ ವಾರ್ಷಿಕ ರೂ. 10 ಲಕ್ಷ ಕೋಟಿ ಗಳಿಕೆ

2016ರಲ್ಲಿ ಕಚ್ಚಾ ತೈಲ ಬೆಲೆ ಬಹಳಷ್ಟು ಇಳಿಕೆ ಕಂಡು ಬ್ಯಾರಲ್ 1ರ 25-30 ಡಾಲರ್ ಬೆಲೆ ಮಧ್ಯೆ ಏರಿಳಿತವಾಗುತ್ತಿತ್ತು. 2016 ನವೆಂಬರ್ 8ರಂದು ಪ್ರಧಾನಿ ಮೋದಿಯವರು ನೋಟು ಅಮಾನ್ಯ ಘೋಷಿಸಿದರು. ಒಟ್ಟಾರೆ ಆರ್ಥಿಕ ಸ್ಥಿತಿ ಸ್ವಲ್ಪಮಟ್ಟಿಗೆ ಏರುಗತಿಯಲ್ಲಿದ್ದ ಆ ಸಂದರ್ಭದಲ್ಲಿ ಮೇಲಿನ ಅಪ್ರಬುದ್ಧ ತೀರ್ಮಾನ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ. ನೋಟು ಅಮಾನ್ಯದ ಎರಡು ವಾರಗಳ ನಂತರ ದೇಶದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞರೂ ಆದ ಮನಮೋಹನ್ ಸಿಂಗ್ ಅವರು ಪಾರ್ಲಿಮೆಂಟ್‌ನಲ್ಲೇ ಹೇಳಿಕೆಯಿತ್ತರು. ನೋಟು ಅಮಾನ್ಯ ತೀರಾ ಅನಪೇಕ್ಷಣೀಯ ನಿರ್ಧಾರ, ಇದರಿಂದ ದೇಶದ ಸಮಗ್ರ ಅಭಿವೃದ್ಧಿಗೆ ಮಾರಕ ಹೊಡೆತ ನೀಡಿ ದೇಶದ ಜೆಡಿಪಿ ಭಾರೀ ಕುಸಿತ ಅನುಭವಿಸುತ್ತದೆ ಎಂದು ಹೇಳಿದ್ದರು. ಅಂತೆಯೇ ಮುಂದೆ ಪ್ರತೀ ಮೂರು ತಿಂಗಳಿಗೆ ದೇಶದ ಒಟ್ಟಾರೆ ಆರ್ಥಿಕ ಸ್ಥಿತಿ ಬಗ್ಗೆ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತಾ ಬಂದ ವರದಿ ಅಭಿವೃದ್ಧಿ ದರದ ತೀವ್ರ ಕುಸಿತವನ್ನು ರುಜುವಾತುಪಡಿಸುತ್ತಾ ಬಂದಿದೆ. ವಿಶೇಷವಾಗಿ 2020ರ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಯಾದ ಅರ್ಧ ವಾರ್ಷಿಕ ವರದಿಯನುಸಾರ-ಶೇ. 23 ನಕಾರಾತ್ಮಕ ಅಭಿವೃದ್ಧಿ ದರ ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಈ ವಿಚಾರ ಏಕೆ ಉಲ್ಲೇಖಿಸುತ್ತಿದ್ದೇನೆ ಎಂದರೆ ಮೇಲೆ ಹೇಳಿರುವ ತೈಲ ಉತ್ಪನ್ನಗಳ ಮೇಲೆ ವಿಧಿಸಲಾದ ಭಾರೀ ದರದ ಹೆಚ್ಚುವರಿ ಅಬಕಾರಿ ಸುಂಕದಿಂದ ಸುಮಾರು 20 ಲಕ್ಷ ಕೋಟಿ ರೂ. ಗಳ (ಸೆಪ್ಟಂಬರ್ 2020 ರವರೆಗೆ) ಹೆಚ್ಚುವರಿ ಗಳಿಕೆ ಹೊಂದಾಣಿಕೆ ಆಗದೇ ಇರುತ್ತಿದ್ದರೆ. ಇನ್ನೋರ್ವ ಆರ್ಥಿಕ ತಜ್ಞ ಡಾ. ಅರುಣ್ ಕುಮಾರ್ ಹೇಳುವಂತೆ ಜಿಡಿಪಿ ನಷ್ಟದರ ಒಟ್ಟಾರೆ ಶೇ. 50 ನಕಾರಾತ್ಮಕ ದರಕ್ಕೆ ಜಾರಿ ದೇಶದ ಆರ್ಥಿಕ ಸ್ಥಿತಿ ಇನ್ನಷ್ಟು ಅದೋಗತಿಯತ್ತ ಸಾಗುತ್ತಿತ್ತು. ಹೀಗೆ ತೈಲ ಉತ್ಪನ್ನಗಳ ದಿನವಹಿ ಮಾರಾಟ ಬೆಲೆ ಪರಿಷ್ಕರಣೆಯಿಂದ ಗ್ರಾಹಕರ ಲಕ್ಷ ಬದಲಿಸಿ ಸದರಿ ಹಿಡನ್ ಅಜೆಂಡಾ ಮೂಲಕ ಮೇಲಿನಂತೆ ಅಗಾಧ ಪ್ರಮಾಣದ ಜಿಡಿಪಿ ನಷ್ಟ ದರವನ್ನು ಆದಷ್ಟು ಮಟ್ಟಿಗೆ ಮಿತಗೊಳಿಸಿ ಇನ್ನೂ ಬೃಹತ್ ಪ್ರಮಾಣದ ಆರ್ಥಿಕ ಕುಸಿತದಿಂದ ದೇಶ ಬಹುಶಃ ಪಾರಾಗುವಂತಾಯಿತು. ಆದರೆ ಈ ಹೆಚ್ಚುವರಿ ಆದಾಯದ ಕ್ರೋಡೀಕರಣ ಅದಾನಿ, ಅಂಬಾನಿಯಂತಹ ಲಕ್ಷ ಕೋಟ್ಯಧಿಪತಿಗಳಿಂದ ಆಗದೆ ತೈಲ ಉತ್ಪನ್ನಗಳ ಗ್ರಾಹಕರಾದ ಜನ ಸಾಮಾನ್ಯರು ಮತ್ತು ಮಧ್ಯಮ ವರ್ಗದ ಜನರ ದಿಕ್ಕು ತಪ್ಪಿಸಿ ಅವರನ್ನು ಶೋಷಣೆ ಮಾಡುವ ಮೂಲಕ ಮಾಡಿದ್ದಾರೆಂದು ಹೇಳಬೇಕಾಗಿದೆ. ಆದರೆ ಬಹುತೇಕ ಶೋಷಿತರಿಗೆ ಇದರ ಅರಿವಾಗದಿರುವುದು ಶೋಚನೀಯ ವಿಚಾರ. ಅವರಿಗೆ ಇದರ ಅರಿವಾಗಿದ್ದರೆ, ಅವರು ಸದರಿ ಲಂಗು ಲಗಾಮು ಇಲ್ಲದೆ ಸಾಗುತ್ತಿರುವ ಬೆಲೆ ಏರಿಕೆ ಬಗ್ಗೆ ಪ್ರತಿಭಟಿಸಬೇಕಿತ್ತು. ಅಂತಹ ಬೆಲೆ ಏರಿಕೆಯ ಪ್ರತಿಭಟನಾ ಚಳವಳಿ ನಡೆಯದೆ ಇರುವುದರಿಂದ ಅವರಿಗಿನ್ನೂ ಇದರ ಅರಿವಾಗಿಲ್ಲ ಎಂದೇ ಹೇಳಬೇಕು.

► ಕಚ್ಚಾ ತೈಲ ಬೇಡಿಕೆಯ ಶೇ. 80 ಭಾಗ ರೇಟ್ ಕಾಂಟ್ರಾಕ್ಟ್ ಮತ್ತು ದೊಡ್ಡಮಟ್ಟದ ಟೆಂಡರ್ ಮೂಲಕ ಪೂರೈಕೆ ಆಗುವುದರಿಂದ ದಿನವಹಿ ಬೆಲೆ ಪರಿಷ್ಕರಣೆ ಅರ್ಥಹೀನ:

 ಹೌದು ದೇಶದ ಒಟ್ಟು ಕಚ್ಚಾ ತೈಲ ಬೇಡಿಕೆಯ ಶೇ. 20 ಸ್ಥಳೀಯವಾಗಿ ಪೂರೈಕೆ ಆಗುತ್ತಿದೆ. ಇನ್ನುಳಿದ ಶೇ. 80 ನಮ್ಮ ಸರಕಾರದ ಒಡೆತನದ ಆಯಿಲ್ ಕಂಪೆನಿಗಳು ಅಮದು ಮಾಡಿ ಅದನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್ ಇತ್ಯಾದಿ ತೈಲ ಉತ್ಪನ್ನಗಳ ಪೂರೈಕೆಯಾಗುತ್ತಿದೆ. ದೇಶದ ಕಚ್ಚಾ ತೈಲ ಪೂರೈಕೆಯ ಶೇ. 80 ಭಾಗ ಇತರ ರಾಷ್ಟ್ರಗಳಿಂದ ಮುಖ್ಯವಾಗಿ ಮಧ್ಯ ಪ್ರಾಚ್ಯ ದೇಶಗಳಿಂದ ಅಮದು ಆಗುತ್ತಿದೆ. ಈ ಪೂರೈಕೆಯ ಬಹು ದೊಡ್ಡ ಭಾಗ ವಾರ್ಷಿಕ ರೇಟ್ ಕಾಂಟ್ರಾಕ್ಟ್ ಮೂಲಕ ಪೂರೈಕೆಯಾದರೆ, ಇನ್ನುಳಿದ ಭಾಗ ದೊಡ್ಡ ಟೆಂಡರ್ (ಬಲ್ಕ್ ಟೆಂಡರ್) ಮೂಲಕ ಪೂರೈಕೆಯಾಗುತ್ತಿದೆ. ಹೀಗೆ ಕಚ್ಚಾ ತೈಲ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವುದೇ ರೀತಿಯಲ್ಲಿ ಬೆಲೆ ಏರಿಕೆ, ಇಳಿಕೆ ನಮ್ಮ ದೈನಂದಿನ ಉತ್ಪಾದನೆ ಮತ್ತು ಪೂರೈಕೆಗೆ ಯಾವುದೇ ಸಂಬಂಧ ಇಲ್ಲದೆ ಇರುವಾಗ ಈ ದಿನವಹಿ ಬೆಲೆ ಏರಿಕೆ/ಇಳಿಕೆಯೊಂದಿಗೆ ನಾವೇಕೆ ಚೆಲ್ಲಾಟ ಆಡಬೇಕು. ನಮಗೇಕೆ ಈ ದಿನವಹಿ ಬೆಲೆ ನಿಗದಿ ಉಸಾಬರಿ?

► ಮೇಲಿನ ವಾಸ್ತವಾಂಶಗಳ ಬಗ್ಗೆ ಮಾತಾಡಿದರೆ ಅದು ಹೇಗೆ ಅಪಪ್ರಚಾರವಾಗುವುದು?

ಕೇಂದ್ರ ಸರಕಾರದ ಮಾನ್ಯ ಪೆಟ್ರೋಲಿಯಂ ಸಚಿವರು ‘‘ತೈಲ ಬೆಲೆ ಏರಿಕೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಹೇಳುವುದು ತಪ್ಪು, ಅದೊಂದು ಅಪಪ್ರಚಾರ’’ ಎಂದು ಇತ್ತೀಚೆಗೆ ಆಕ್ಷೇಪಣೆ ಎತ್ತಿದ್ದಾರೆ. ಇದೀಗ ಎಲ್ಲಾ ನಗರಗಳಲ್ಲೂ ಹಾಗೂ ದೇಶದಾದ್ಯಂತ ಚಾಲ್ತಿಯಲ್ಲಿರುವ ತೈಲ ಉತ್ಪನ್ನಗಳ ಮಾರಾಟ ಬೆಲೆಗಳು ಸರ್ವಕಾಲಿಕ ಗರಿಷ್ಠ ಮಾರಾಟ ಬೆಲೆ. ಇದು ಸತ್ಯ. ಅದನ್ನು ಹೇಳಿದರೆ ಅದು ಹೇಗೆ ಅಪಪ್ರಚಾರವಾಗುತ್ತದೆ. ಅದು ಹಿಂದೆ 2008ರಲ್ಲಿ ಕಚ್ಚಾ ತೈಲ ಬೆಲೆ ತ್ರೀವ್ರ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ತೈಲ ಬೆಲೆಯಾದ 145.31 ಡಾಲರ್‌ಗೆ ಏರಿಕೆಯಾದಾಗ ಅಂದಿನ ಸರಕಾರ ಪೆಟ್ರೋಲ್ ಬೆಲೆಯನ್ನು ರೂ. 52ರಿಂದ ರೂ. 58ಕ್ಕೆ ಏರಿಸಿದಾಗ ನಿರಂತರ ದೇಶವ್ಯಾಪಿ ಪ್ರತಿಭಟನಾ ರ್ಯಾಲಿ ಸಂಘಟಿಸಿದ್ದ ಪ್ರತಿಪಕ್ಷಗಳು ಆ ವಿಷಯ ಪ್ರಸ್ತಾಪಿಸಿ ಪಾರ್ಲಿಮೆಂಟ್ ಅಧಿವೇಶನ ನಡೆಯಲು ಬಿಡದೆ ಅಸಹಕಾರ ತೋರುತ್ತಿದ್ದವು. ಅದು ಅಂದು ಅಪಪ್ರಚಾರ ಆಗದೆ ಇಂದು ಮಾತ್ರ ಏಕೆ ಅಪಪ್ರಚಾರ ಎಂದು ನಿಮಗೆ ಕಂಡುಬರುತ್ತಿದೆ. ಮಾನ್ಯ ಸಚಿವರೇ? ಒಟ್ಟಾರೆ ನಿಮಗೆ ಎಲ್ಲಾ ವಿಚಾರದಲ್ಲೂ, ಎಲ್ಲಡೆ ಸೈ ಎನ್ನುವವರು ಬೇಕಾಗಿದ್ದಾರೆ ಅಷ್ಟೆ.

(ವಿ.ಸೂ.: ಲೇಖನದಲ್ಲಿ ನಮೂದಿಸಲಾದ ಎಲ್ಲಾ ಅಂಕಿಸಂಖ್ಯೆ ಆರ್‌ಟಿಐ ಕಾಯ್ದೆ 2005ರ ಅಡಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯಿಂದ ಪಡೆಯಲಾದ ಅಧಿಕೃತ ಅಂಕಿ ಸಂಖ್ಯೆ ಆಧಾರಿತವಾಗಿದೆ.)

Writer - ಎಸ್. ವಿ. ಅಮೀನ್

contributor

Editor - ಎಸ್. ವಿ. ಅಮೀನ್

contributor

Similar News