ಥೈರಾಯ್ಡ್ ಸಮಸ್ಯೆ ಬಂಜೆತನಕ್ಕೂ ಕಾರಣವಾಗಬಹುದು

Update: 2021-02-27 18:33 GMT

ಥೈರಾಯ್ಡ ಗ್ರಂಥಿಯು ನಮ್ಮ ಕುತ್ತಿಗೆಯ ಎದುರುಭಾಗದಲ್ಲಿರುವ ಪಾತರಗಿತ್ತಿ ಆಕಾರದ ಅಂಗವಾಗಿದ್ದು,ಇದು ಚಯಾಪಚಯ ನಿಯಂತ್ರಣಕ್ಕಾಗಿ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ ಮತ್ತು ಹೀಗೆ ಶರೀರದ ಪ್ರಮುಖ ಕಾರ್ಯಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಮಹಿಳೆಯ ಫಲವತ್ತತೆಯು ಗರ್ಭ ಧರಿಸುವ ಸಾಮರ್ಥ್ಯವಾಗಿದೆ,ಹೀಗಾಗಿ ಥೈರಾಯ್ಡ್ ಗ್ರಂಥಿಯ ಆರೋಗ್ಯ ಮತ್ತು ಫಲವತ್ತತೆಯ ನಡುವಿನ ಅಂತರ್ ಸಂಬಂಧವು ಗರ್ಭಧಾರಣೆಯ ಮುಖ್ಯ ಮತ್ತು ಸಂಕೀರ್ಣ ಭಾಗವಾಗಿದೆ. ಥೈರಾಯ್ಡ್ ಸಮಸ್ಯೆಗಳನ್ನು ಗುರುತಿಸದಿದ್ದರೆ ಮತ್ತು ಚಿಕಿತ್ಸೆ ಪಡೆಯದಿದ್ದರೆ ಅದು ಬಂಜೆತನಕ್ಕೆ ಮತ್ತು ಕಡಿಮೆ ಫಲವತ್ತತೆಗೆ ಸಂಭಾವ್ಯ ಕಾರಣವಾಗಬಹುದು. ಮಕ್ಕಳನ್ನು ಹೆರುವ ವಯಸ್ಸಿನ ಶೇ.2ರಿಂದ ಶೇ.4ರಷ್ಟು ಮಹಿಳೆಯರು ಕಡಿಮೆ ಥೈರಾಯ್ಡ್ ಹಾರ್ಮೋನ್ ಮಟ್ಟಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಹೈಪೊಥೈರಾಯ್ಡಿಸಂ ಸ್ಪಷ್ಟವಾಗಿ ಫಲವತ್ತತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

 ಎಷ್ಟೋ ಜನರಿಗೆ ತಮ್ಮ ಶರೀರದಲ್ಲಿ ಥೈರಾಯ್ಡ್ ಗ್ರಂಥಿ ಏಕೆ ಇರುತ್ತದೆ ಎನ್ನುವುದು ಗೊತ್ತಿಲ್ಲ. ಇದು ಶರೀರದ ಪ್ರಮುಖ ಅಂಗಗಳಿಗಾಗಿ ಹಾರ್ಮೋನ್‌ಗಳನ್ನು ಉತ್ಪಾದಿಸುವ ಗ್ರಂಥಿಯಾಗಿದೆ. ಈ ಗ್ರಂಥಿಯ ಕಾರ್ಯ ನಿರ್ವಹಣೆಯಲ್ಲಿ ಏರುಪೇರುಗಳುಂಟಾದರೆ ಹಾರ್ಮೋನ್ ಉತ್ಪಾದನೆಯಲ್ಲಿ ವ್ಯತ್ಯಯವುಂಟಾಗುತ್ತದೆ ಮತ್ತು ಇದು ಶರೀರದ ಇತರ ಕಾರ್ಯಗಳಿಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಥೈರಾಯ್ಡ್ ರೋಗಗಳನ್ನು ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆಯಲ್ಲಿ ಏರುಪೇರುಗಳಿಗೆ ಕಾರಣವಾಗುವ ಅಸ್ತವ್ಯಸ್ತತೆಗಳು ಎಂದು ಹೇಳಬಹುದು. ಇಂತಹ ಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿಯು ಹಾರ್ಮೋನ್‌ಗಳನ್ನು (ಟಿ3 ಮತ್ತು ಟಿ4) ಅತಿಯಾದ ಪ್ರಮಾಣದಲ್ಲಿ ಉತ್ಪಾದಿಸುತ್ತದೆ (ಹೈಪರ್‌ಥೈರಾಯ್ಡಿಸಂ) ಅಥವಾ ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತದೆ (ಹೈಪೊಥೈರಾಯ್ಡಿಸಂ).

ಹೈಪೊಥೈರಾಯ್ಡಿಸಂ ಫಲವತ್ತತೆಯ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ,ಅಂದರೆ ಗರ್ಭಧಾರಣೆ ಸಾಮರ್ಥ್ಯದ ಮೇಲೆ ಮತ್ತು ಗರ್ಭದಲ್ಲಿ ಭ್ರೂಣವನ್ನು ಹೊತ್ತುಕೊಳ್ಳುವ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಫಲವತ್ತತೆಯ ಆರೋಗ್ಯಕ್ಕಾಗಿ,ಗರ್ಭಧಾರಣೆ ಮತ್ತು ಗರ್ಭಧಾರಣೆಯ ಬಳಿಕದ ಆರಂಭಿಕ ದಿನಗಳಲ್ಲಿಯೂ ಥೈರಾಯ್ಡ್ ಹಾರ್ಮೋನ್‌ಗಳು ಸಹಜ ಮಟ್ಟಗಳಲ್ಲಿರುವುದು ಮುಖ್ಯವಾಗಿದೆ.

ಥೈರಾಯ್ಡ್ ಹಾರ್ಮೋನ್‌ಗಳ ಅನಿಯಂತ್ರಣವು ಋತುಚಕ್ರದಲ್ಲಿ ಬದಲಾವಣೆಗಳು,ಅಂಡೋತ್ಪತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ, ಅನಿಯಮಿತ ಋತುಸ್ರಾವ ಮತ್ತು ರಕ್ತಸ್ರಾವ ಇಲ್ಲದಿರುವುದು ಅಥವಾ ವಿಪರೀತ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಋತುಚಕ್ರದ ಅವಧಿಯು ಸಾಮಾನ್ಯಕ್ಕಿಂತ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು,ಎಂದಿನ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಅಥವಾ ತೀವ್ರ ರಕ್ತಸ್ರಾವವಾಗಬಹುದು. ಹಾರ್ಮೋನ್‌ಗಳಲ್ಲಿ ಏರುಪೇರುಗಳಿಂದಾಗಿ ಅಂಡೋತ್ಪತ್ತಿಗೆ ತಡೆಯುಂಟಾಗುವುದರಿಂದ ಗರ್ಭಧಾರಣೆ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಅಲ್ಲದೆ ಥೈರಾಯ್ಡ್ ಏರುಪೇರುಗಳು ಗರ್ಭಪಾತ ಅಥವಾ ಅವಧಿಪೂರ್ವ ಪ್ರಸವದ ಅಪಾಯಗಳನ್ನು ಹೆಚ್ಚಿಸುತ್ತವೆ.

ಅನಿಯಂತ್ರಿತ ಹೈಪೊಥೈರಾಯ್ಡಿಸಂ ಬೆಳೆಯುತ್ತಿರುವ ಭ್ರೂಣದ ಮೇಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಹಾಗೂ ಮಂದಬುದ್ಧಿ ಮತ್ತು ಕುಂಠಿತ ಬೆಳವಣಿಗೆಗೂ ಕಾರಣವಾಗುತ್ತದೆ.

ಥೈರಾಯ್ಡ್ ರೋಗಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆಯಾದರೂ,ಅವು ಪುರುಷರ ಫಲವತ್ತತೆಯ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತವೆ. ಥೈರಾಯ್ಡ್ ಅನಿಯಂತ್ರಿತ ಕಾರ್ಯ ನಿರ್ವಹಣೆಯು ವೀರ್ಯದ ಗುಣಮಟ್ಟಕ್ಕೆ ಹಾನಿಯನ್ನುಂಟು ಮಾಡುತ್ತದೆ,ಅವುಗಳ ನಾಶಕ್ಕೆ ಕಾರಣವಾಗುತ್ತದೆ ಮತ್ತು ಹೀಗೆ ವೀರ್ಯಾಣು ಮತ್ತು ಅಂಡಾಣುವಿನ ಸಂಯೋಗಕ್ಕೆ ತೊಡಕನ್ನುಂಟು ಮಾಡುತ್ತದೆ.

ಹೀಗಾಗಿ ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಟಿಸಿಎಚ್) ಮತ್ತು ಟಿ4 ಮಟ್ಟಗಳ ಮೇಲೆ,ವಿಶೇಷವಾಗಿ ಗರ್ಭಧಾರಣೆಗೆ ಮುನ್ನ ನಿಯಮಿತ ನಿಗಾಯಿರಿಸಬೇಕಾಗುತ್ತದೆ. ಈಗಾಗಲೇ ಕಡಿಮೆ ಥೈರಾಯ್ಡ್ ಹಾರ್ಮೋನ್ ಮಟ್ಟಗಳನ್ನು ಹೊಂದಿದ್ದರೆ ಅಥವಾ ಗರ್ಭಪಾತವಾಗಿದ್ದರೆ ಇದು ವಿಶೇಷವಾಗಿ ಅಗತ್ಯವಾಗುತ್ತದೆ. ಕುಟುಂಬದಲ್ಲಿ ಥೈರಾಯ್ಡಿ ಸಮಸ್ಯೆಗಳ ಇತಿಹಾಸ ಅಥವಾ ಇತರ ಯಾವುದೇ ಸ್ವರಕ್ಷಿತ ರೋಗಗಳು ಥೈರಾಯ್ಡಿ ಅಪಾಯವನ್ನು ಹೆಚ್ಚಿಸುವ ಅಂಶಗಳಲ್ಲಿ ಸೇರಿವೆ. ಗರ್ಭಧಾರಣೆಗೆ ಮುನ್ನ ಥೈರಾಯ್ಡ್ ರೋಗಗಳಿಗೆ ಚಿಕಿತ್ಸೆ ಮತ್ತು ನಿಯಂತ್ರಣ ಯಶಸ್ವಿ ಮತ್ತು ಆರೋಗ್ಯಕರ ಗರ್ಭಧಾರಣೆಯನ್ನು ಖಚಿತಪಡಿಸುತ್ತವೆ.

ಥೈರಾಯ್ಡ್ ಮತ್ತು ಬಂಜೆತನ ಅಂತರ್ ಸಂಬಂಧವನ್ನು ಹೊಂದಿವೆ. ಆರೋಗ್ಯಕರ ಗರ್ಭಧಾರಣೆಗೆ ಥೈರಾಯ್ಡ್ ಹಾರ್ಮೋನ್‌ಗಳು ಸಾಮಾನ್ಯ ಮಟ್ಟದಲ್ಲಿರುವುದು ಅಗತ್ಯವಾಗುತ್ತದೆ. ಹೈಪರ್‌ಥೈರಾಯ್ಡಿಸಂ ಅಥವಾ ಹೈಪೊಥೈರಾಯ್ಡಿಸಂ ಸಮಸ್ಯೆಯಿರುವ ಪುರುಷರು ಮತ್ತು ಮಹಿಳೆಯರು ಫಲವತ್ತತೆಯನ್ನು ಕಳೆದುಕೊಳ್ಳಲೂಬಹುದು. ಹೀಗಾಗಿ ನಿಯಮಿತವಾಗಿ ಥೈರಾಯ್ಡ್ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಅಗತ್ಯವಿದ್ದರೆ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಉತ್ತಮವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News