ಏನಿದು ಅಲರ್ಜಿಕ್ ರಿನಿಟಿಸ್?

Update: 2021-02-27 18:45 GMT

ಅಲರ್ಜಿಕ್ ರಿನಿಟಿಸ್ ಅಥವಾ ಅಲರ್ಜಿಗಳಿಂದ ಮೂಗಿನೊಳಗೆ ಉರಿಯೂತ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಲಕ್ಷಣಗಳು ಇಂದು ಮಾನವ ಜನಾಂಗವನ್ನು ಕಾಡುತ್ತಿರುವ ಮೂರನೇ ಅತ್ಯಂತ ಸಾಮಾನ್ಯ ರೋಗವಾಗಿದೆ. ಅಲರ್ಜಿಕ್ ರಿನಿಟಿಸ್ ಯಾವುದೇ ಬಾಹ್ಯ ಪ್ರೋಟಿನ್‌ಗೆ ರೋಗ ನಿರೋಧಕ ಶಕ್ತಿಯ ಅತಿಸಂವೇದನಾಶೀಲತೆಯಾಗಿದೆ ಮತ್ತು ಇದು ಹಿಸ್ಟಾಮೈನ್‌ಗಳೆಂಬ ರಾಸಾಯನಿಕಗಳ ಬಿಡುಗಡೆಗೆ ಕಾರಣವಾಗುತ್ತದೆ. ಈ ರಾಸಾಯನಿಕಗಳು ಮೂಗಿನಲ್ಲಿ ತಡೆ,ಸೀನುವಿಕೆ,ಕಣ್ಣಿನಲ್ಲಿ ನೀರು,ಅಲರ್ಜಿ ಕೆಮ್ಮು ಮತ್ತು ಕೆಲವರಲ್ಲಿ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ಇದೇ ಕಾರಣದಿಂದ ಅಲರ್ಜಿ ರೋಗಿಗಳು ಸೀನುತ್ತಿರುವುದನ್ನು ಮತ್ತು ಕೆಮ್ಮುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ಅಲರ್ಜಿಯು ಆಹಾರಕ್ಕೆ ಸಂಬಂಧಿಸಿದ್ದಾದರೆ ರೋಗಿಗೆ ಹೊಟ್ಟೆ ಸರಿಯಿರುವುದಿಲ್ಲ ಮತ್ತು ವಾಂತಿಯನ್ನೂ ಮಾಡಿಕೊಳ್ಳಬಹುದು. ಆಹಾರದ ಅಲರ್ಜಿಗಳು ತೀವ್ರ ಸ್ವರೂಪವನ್ನು ಹೊಂದಿರುತ್ತವೆ ಮತ್ತು ಸೂಕ್ತ ಚಿಕಿತ್ಸೆ ಅಗತ್ಯವಾಗುತ್ತದೆ.

ಹಲವಾರು ವರ್ಷಗಳವರೆಗೂ ವಿಜ್ಞಾನಿಗಳು ವ್ಯಕ್ತಿಗಳಲ್ಲಿ ಅಲರ್ಜಿಗಳಿಗೆ ಮತ್ತು ಮಾರಣಾಂತಿಕ ಅಲರ್ಜಿಗಳಿಗೆ ಕೆಲವು ಕಾರಣಗಳನ್ನು ನಂಬಿಕೊಂಡಿದ್ದರು. ಆದರೆ ವರ್ಷಗಳ ಸಂಶೋಧನೆ ಮತ್ತು ಟ್ರಯಲ್‌ಗಳ ಬಳಿಕ ಅಲರ್ಜಿಯು ಆನುವಂಶಿಕ ಪ್ರವೃತ್ತಿಯನ್ನು ಅವಲಂಬಿಸಿರುತ್ತದೆ ಎನ್ನುವುದು ಬೆಳಕಿಗೆ ಬಂದಿದೆ. ಅಲರ್ಜಿ ಕುಟುಂಬದಲ್ಲಿಯೇ ಹರಿದುಬಂದಿರುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ ಬಾಲ್ಯದಲ್ಲಿ ಪರಿಸರದಲ್ಲಿನ ಅಲರ್ಜಿಕಾರಕಗಳಿಗೆ ಕಡಮೆ ಒಡ್ಡಿಕೊಳ್ಳುವಿಕೆಯಿದ್ದರೆ ಮಗು ಹರೆಯಕ್ಕೆ ಕಾಲಿಡುವಾಗ ಅಲರ್ಜಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಟಾಮಿನ್ ಡಿ ಹೆಚ್ಚಾಗಿ ಅಲಕ್ಷಿಸಲ್ಪಟ್ಟಿರುವ ಇನ್ನೊಂದು ಅಂಶವಾಗಿದೆ. ವಿಟಾಮಿನ್ ಡಿ ಕೊರತೆಯು ಅಲರ್ಜಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಲರ್ಜಿಗಳಲ್ಲಿ ಹಲವು ವಿಧಗಳಿವೆ. ಗಾಳಿ,ಆಹಾರ,ಔಷಧಿಗಳು ಮತ್ತು ಹಾಲು ಉತ್ಪನ್ನಗಳಿಗೆ ವ್ಯಕ್ತಿಯು ಅಲರ್ಜಿಯನ್ನು ಹೊಂದಿರಬಹುದು ಮತ್ತು ಪ್ರತಿಯೊಂದು ವಿಧದ ಅಲರ್ಜಿಗೂ ಚಿಕಿತ್ಸೆಯು ಭಿನ್ನವಾಗಿರುತ್ತದೆ.

  ಅತಿಯಾದ ಸೀನುವಿಕೆ,ಕಣ್ಣುಗಳಲ್ಲಿ ನಿರಂತರ ತುರಿಕೆ,ಒಂದು ಋತುವಿನುದ್ದಕ್ಕೂ ಕೆಮ್ಮುವಿಕೆ,ಆಹಾರ ಸೇವನೆಯ ಬಳಿಕ ಮೈಯಲ್ಲಿ ದದ್ದುಗಳ ಏಳುವಿಕೆ,ಮುಖ ಬಾತುಕೊಳ್ಳುವುದು,ಅಸ್ತಮಾ (ಅಲರ್ಜಿ) ಇವುಗಳು ಬಾಧಿಸುತ್ತಿದ್ದರೆ ಸಕಾಲದಲ್ಲಿ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

ನೀವು ಅಲರ್ಜಿಯನ್ನು ಲಘುವಾಗಿ ಪರಿಗಣಿಸುವವರಲ್ಲಿ ಸೇರಿದ್ದರೆ ನೀವು ಆ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿದೆ. ಸೂಕ್ತ ಚಿಕಿತ್ಸೆಯ ಬಗ್ಗೆ ನಿರ್ಧರಿಸಲು ಅಲರ್ಜಿಯ ರೋಗನಿರ್ಧಾರವನ್ನು ಮೊದಲು ಮಾಡಬೇಕಾಗುತ್ತದೆ. ಹೀಗಾಗಿ ಸೂಕ್ತ ರೋಗನಿರ್ಧಾರಕ್ಕಾಗಿ ತಜ್ಞವೈದ್ಯರನ್ನು ಭೇಟಿಯಾಗಬೇಕು. ಅಲರ್ಜಿ ಎನ್ನುವುದು ದೃಢಪಟ್ಟರೆ ಸೂಕ್ತ ಚಿಕಿತ್ಸಾ ವಿಧಾನವನ್ನು ವೈದ್ಯರು ಆಯ್ದುಕೊಳ್ಳುತ್ತಾರೆ.

ಫಾರ್ಮಾಕೊಥೆರಪಿ: ಫೆಕ್ಸೊಫೆನಡೈನ್ ಅಲರ್ಜಿ ಪ್ರಕರಣಗಳಲ್ಲಿ ಬಳಕೆಯಾಗುವ ಅತ್ಯುತ್ತಮ ಔಷಧಿಗಳಲ್ಲೊಂದಾಗಿದೆ ಮತ್ತು ಇದನ್ನು ಹೆಚ್ಚಿನ ಡೋಸ್‌ಗಳಲ್ಲಿ ಸುರಕ್ಷಿತವಾಗಿ ಬಳಸಬಹುದು. ಫ್ಲುಟಿಕಾಸೋನ್ ಫರೇಟ್ ಮೂಗಿನಲ್ಲಿ ಸಿಂಪಡಿಸುವ ಸ್ಪ್ರೇ ರೂಪದಲ್ಲಿ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಅಲರ್ಜಿಗಳ ಲಕ್ಷಣಗಳನ್ನು ಶಮನಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.

ಅವಾಯ್ಡನ್ಸ್: ಫಾರ್ಮಾಕೊಥೆರಪಿಗೆ ಪೂರಕವಾಗಿ ಅವಾಯ್ಡನ್ಸ್ ಮೆಷರ್ಸ್‌ ಅಥವಾ ರೋಗವನ್ನು ತಪ್ಪಿಸುವ ಕ್ರಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸ್ಕಿನ್ ಪ್ರಿಕ್ ಟೆಸ್ಟ್‌ನ ಮೂಲಕ ಅಲರ್ಜಿಯು ಪತ್ತೆಯಾದಾಗ ಮಾತ್ರ ಈ ಚಿಕಿತ್ಸಾ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಇಮ್ಯುನೊಥೆರಪಿ: ಎಲ್ಲ ಚಿಕಿತ್ಸೆ ಸಾಧ್ಯತೆಗಳು ಮುಗಿದ,ಮಧ್ಯಮ ಮತ್ತು ತೀವ್ರ ಅಲರ್ಜಿ ರೋಗಿಗಳ ಪ್ರಕರಣಗಳಲ್ಲಿ ಇಮ್ಯುನೊಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯ ಕನಿಷ್ಠ ಅವಧಿ ಒಂದು ವರ್ಷವಾಗಿದ್ದು,ಐದು ವರ್ಷದವರೆಗೂ ವಿಸ್ತರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News