ಕೊರೋನ ಹೆಚ್ಚಳ: ಬೆಂಗಳೂರಿನ ಎರಡು ಕಾಲೇಜುಗಳಿಗೆ 14 ದಿನ ರಜೆ ಘೋಷಣೆ

Update: 2021-02-28 11:43 GMT

ಬೆಂಗಳೂರು, ಫೆ.28: ರಾಜಧಾನಿ ಬೆಂಗಳೂರಿನ ಸಮುದಾಯ ಭವನ, ಕಾಲೇಜುಗಳಲ್ಲಿ ಹಂತ ಹಂತವಾಗಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಲ್ಲಿನ ಯಲಹಂಕ ವಲಯದ ಎರಡು ಕಾಲೇಜುಗಳಿಗೆ 14 ದಿನಗಳ ಕಾಲ ರಜೆ ನೀಡಿ, ಕ್ಲಸ್ಟರ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಕಳೆದ 24 ಗಂಟೆಗಳ ವರದಿ ಅನ್ವಯ ಯಲಹಂಕ ವಲಯದ ಎರಡು ಕಾಲೇಜು, ವಸತಿ ಸಮುಚ್ಚಯ ಹಾಗೂ ಅತಿಥಿ ಗೃಹ ಸೇರಿ ನಾಲ್ಕು ಸ್ಥಳಗಳಲ್ಲಿ 33 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಪ್ರದೇಶಗಳನ್ನು ಕ್ಲಸ್ಟರ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಅಟ್ಟೂರು ಬಳಿಯ ಸಂಭ್ರಮ್, ಅಗ್ರಗಾಮಿ ಕಾಲೇಜು, ವೆನಿಜಿಯಾ ಅಪಾರ್ಟ್ ಮೆಂಟ್ ನಲ್ಲಿ 28 ಮಂದಿ ಸೋಂಕಿಗೆ ಒಳಗಾಗಿದ್ದರು. ಶನಿವಾರ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕು ಹರಡದಂತೆ ನಿಗಾ ವಹಿಸಲಾಗಿದೆ.

ಇನ್ನು, ಕೋವಿಡ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಯಲಹಂಕ ವಲಯದ ಸಂಭ್ರಮ್ ಕಾಲೇಜು ಹಾಗೂ ಅಗ್ರಗಾಮಿ ಕಾಲೇಜುಗಳಿಗೆ 14 ದಿನ ರಜೆ ನೀಡಲಾಗಿದ್ದು, ವೆನಿಜಿಯಾ ಅಪಾರ್ಟ್ ಮೆಂಟ್ ಅನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತ ಅಶೋಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News